ಕಡೂರಿನ ದಿನಗಳು – ನಾವು ಜಿ. ಪಿ. ಎಸ್. ಆಗಿದ್ದು ಹೀಗೆ!

ಸುಮಾರು ೩೫ ವರುಷಗಳ ಹಿಂದೆ………. ಜಿ.ಪಿ.ಎಸ್, ಮೋಬೈಲ್ ಫೋನ್, ಈ-ಮೈಲ್ ಇಲ್ಲದ ಕಾಲ. ಬೇಸಿಗೆಯ ರಜಾದಿನಗಳಲ್ಲೊಂದು ದಿನ. ಬಿಸಿಲಿನ ಝಳ ಸ್ವಲ್ಪ ಸ್ವಲ್ಪವಾಗೇ ಕಡಿಮೆಯಾಗುತ್ತಿತ್ತು. ಸಂಜೆಯು ನಿಧಾನವಾಗಿ ಆವರಿಸುತ್ತಿತ್ತು. ಶಾಲೆಗೆ ಬೇಸಿಗೆ ರಜವಾದ್ದರಿಂದ ಓದುವ ಕೆಲಸಕ್ಕೆ ಬಿಡುವು ದೊರೆತು ಆಟವಾಡುವ ಹುಮ್ಮಸ್ಸಿನಿಂದ ಸಂಜೆಯಾಗುತ್ತಲೇ ಹೊರಗೆ ಹೊರಟೆವು ಒಂದು ದೊಡ್ಡ ಹಿಂಡು. ಗೆಳೆಯರು, ಗೆಳೆತಿಯರು, ಅಕ್ಕ ತಂಗಿಯರು ಎಲ್ಲರೂ ಒಡಗೂಡಿ. ಊರಿನಲ್ಲಿ ಇದ್ದ ಒಂದೇ ಉದ್ಯಾನವನ ಮತ್ತು ಅದರ ಸಮೀಪದಲ್ಲೇ ಇದ್ದ ಪ್ರವಾಸಿ ಬಂಗಲೆ ಎರಡೂ ಆಕರ್ಷಕವಾಗಿದ್ದು, ಅಲ್ಲಿಗೆ ಹೋಗಿ ಆಟವಾಡಿ ಬರುವುದು ಎಂದು ನಿಶ್ಚಯಿಸಿ, ಸವಾರಿ ಶುರುಮಾಡಿದೆವು. ನಮ್ಮ ಮೆದುಳಿನ ಜಿ. ಪಿ. ಎಸ್. ಸಿಸ್ಟಮ್ ನಲ್ಲಿ ಡೆಸ್ಟಿನೇಶನ್ – ಎನ್ಟರ್ ಮಾಡಿ, ಮಾರ್ಗ – ಬಸ್ ನಿಲ್ದಾಣ ಮುಖಾಂತರದ ದಾರಿಯನ್ನು ಆಯ್ದೆವು.

 

ಊರಿನ ಪ್ರಮುಖ ಬಸ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ……….

 

ಇದೊಂದು ರಸಿಕರ ರಾಜ್ಯವೇ ಸರಿ!………. ಕುರ್ರೋ-ಬರ್ರೋ ಬಸ್ಸಿನ ಶಬ್ಧಗಳು, ಚರ್-ಚರ್ ಬಸ್ಸಿನ ಬಾಗಿಲುಗಳು ತೆರೆದು ಹಾಕಿ ಮಾಡುತ್ತಿದ್ದ ಗದ್ದಲ, ಯಾರ್ರೀ, ಯಾರ್ರೀ, “ಅರಸಿಕೆರೆ, ತಿಪ್ಟೂರ್, ತುಮ್ಕೂರ್, ಬೆಂಗಳೂರ್ – ನಾನ್ ಸ್ಟಾಪ್ ಅಂತ ಕೂಗುವ ಕಂಡಕ್ಟರ್ ಗಳು, “ಬಾಣಾವರ ಸ್ಟಾಪ್ ಇಲ್ಲರೀ” ಅನ್ನುತ್ತಿದ್ದ ಚಾಲಕರ ಕೂಗಾಟ, “ಕಡ್ಲೆ ಕಾಯ್, ಖಾರಾಪುರಿ, ಕಿತ್ತಳೆ ಹಣ್ಣು, ಕಡ್ಲೇ ಗಿಡ – ಒಂದೇ ಒಂದು ತಗಳ್ಳವ್ವ, ಭೋಣಿಗೆ ಕಣವ್ವಾ” ಅಂತ ಬೇಡುತ್ತಿರುವ ನಮ್ಮ ವಯಸ್ಸಿನ ಹುಡುಗ, ಹುಡುಗಿಯರು, ಅವರದೇ ಬಸ್ ನಿಲ್ದಾಣ ಅನ್ನೋತರಹ ಎಲೆ, ಅಡಿಕೆ ಜಗಿದು, ಅಲ್ಲಲ್ಲಿ ಉಗಿಯುತ್ತಿರುವವರು ಕೆಲವರಾದರೆ, ಬಾಳೆಹಣ್ಣು ತಿಂದು, ಸಿಪ್ಪೆಯನ್ನು ಅಲ್ಲೇ ಎಸೆದು ಜಾರಿ ಬೀಳುವವರಿಗೆ ಅಣಿಮಾಡಿಕೊಟ್ಟವರು ಮತ್ತಿತರರು. ಕಾಲೇಜ್ ಕಿಶೋರಿಯರು “ತಾವು ಈ ಗ್ರಹಕ್ಕೆ ಸೇರಿದವರಲ್ಲ” ಎಂದು ಹೇಳುತ್ತಾ, ಕೈಯಲ್ಲೊಂದು ಇಂಗ್ಲೀಷ್ ಪುಸ್ತಕ ಅಥವಾ ಫಿಲ್ಮ್- ಫೇರ್ ಮಾಸಿಕವನ್ನು ಓದುತ್ತಿರುವಂತೆ ನಟಿಸುತಿದ್ದರೆ, ಇವರಿಗೆ ಲೈನ್ ಹೊಡೆಯುವುದಕ್ಕೇ ಬಂದ ಯುವಕರು ಅಲ್ಲಿ-ಇಲ್ಲಿ ನೋಡುತ್ತಾ ಅವರ ಹಿಂದೆ – ಮುಂದೆ ನಿಂತು ಬಸ್ಸಿಗೆ ಕಾಯುವಂತೆ ವರ್ತಿಸುತ್ತಿದ್ದವರು ಕೆಲವರು. ಗಂಡು – ಹೆಣ್ಣು ಹುಡುಕಿಕೊಂಡು ಸುಸ್ತಾದ ಮಧ್ಯವಯಸ್ಕ ಗಂಡಸರು, ವಯಸ್ಸಾದ ಗಂಡಸರು ಸಂಭಾಷಣೆ ನಡೆಸುತ್ತಾ “ಏನಂದ್ರೀ, ಜಾತಕ ಆಗುಲ್ವೇ? ನಮ್ ಹುಡುಗೀದು? ನಕ್ಷತ್ರ ಆಗುತ್ತಲ್ಲ…ಮಖಾ ನಕ್ಷತ್ರ” ಎಲ್ಲ ನಕ್ಷತ್ರಕ್ಕೂ ಹೊಂದುತ್ತೆ ಅಲ್ವೇ?”. ತಾತಂದಿರು ನಸ್ಯ ನ ಎರಡೂ ಮೂಗಿಗೆ ತೂರಿಸಿಕೊಂಡು ಒಂದು ದೊಡ್ದ ಸೀನು ಸೀನಿ, ಒಂಟಿ ಸೀನಿನ ಘಳಿಗೆ ಸರಿ ಇಲ್ಲ ಎಂದು ತೋರಿಸುತ್ತಾ “ನೋಡೊಣ ಬಿಡೀ, ಇನ್ನೂ ಹುಡುಗರಿದ್ದಾರೆ ನಮ್ಮ ಕಡೆ, …ಬರೊ ಭಾನುವಾರ ಮೇಟಿಕುರ್ಕೆ ಗೆ ಹೋಗ್ತಾ ಇದೀನಿ, ಆಶಾಡ ಮುಗಿದಮೇಲೆ ಚರ್ಚಿಸೋಣ” ಅಂತ ಸಮಾಧಾನ ಹೇಳಿ, “ಬಸ್ ಬಂತು” ಅಂತ ತಪ್ಪಿಸಿಕೊಂಡ ಪುಣ್ಯಾತ್ಮರೂ ಇದ್ದರು. ಇದನ್ನೆಲ್ಲಾ ಕಣ್ತುಂಬ ನೋಡಿ ಆನಂದಿಸುತ್ತಾ, ಕಡ್ಲೇ ಕಾಯಿ, ಖಾರದಪುರಿ ಕಟ್ಟಿಸಿಕೊಂಡು, ಖರೀದಿಮಾಡುತ್ತಿರುವಾಗ……….

 

ನಿಂತ ಬಸ್ಸೊಂದ್ರಿಂದ ಒಂದು ಅಜ್ಜಿ, ಯುವತಿ, ಟ್ರಂಕು ಮತ್ತು ಚೀಲದೊಂದಿಗೆ ಕೆಳಗಿಳಿದರು. ಇಬ್ಬರ ಮುಖದಲ್ಲೂ ಸ್ವಲ್ಪ ಆತಂಕವಿತ್ತು. ಅವರ ನಡುವೆ ಸಂಭಾಷಣೆ ಹೀಗೆ ಸಾಗಿತ್ತು ………. ಅಜ್ಜಿ ನಮ್ಮನ್ನೆಲ್ಲಾ ನೋಡುತ್ತಾ “ನೋಡೇ ಶಾಂಭವಿ, ಈ ಹುಡುಗರನ್ನ ಕೇಳೇ ನಮ್ಮ ಶ್ರೀಧರನ ಮನೆ ಎಲ್ಲಿ ಈ ಊರಲ್ಲಿ? ಅಂತ”. ಶಾಂಭವಿ: ಅಜ್ಜಿ, ಈ ಹುಡುಗರು ಕಡ್ಲೇ ಪುರಿ ತಗೊಂಡು ಎಲ್ಲಿಗೋ ಹೋಗ್ತಿವೆ, ಅಷ್ಟಕ್ಕೂ ಇವುಕ್ಕೇನು ಗೊತ್ತಿರತ್ತೆ ನಮ್ಮ ಶ್ರೀಧರ ಮಾಮನ ಮನೆ? ಅಜ್ಜಿ: ಕೇಳೋದ್ ಕೇಳು, ನೋಡೋಣ. ಶಾಂಭವಿ: ನಮ್ಮನುದ್ಧೇಶಿಸಿ “ನಮ್ಮ ನೆಂಟರೊಬ್ಬರು ಈ ಊರಿನ “ಕೋಟೆ” ಯಲ್ಲಿದ್ದಾರೆ, ಹೆಸರು ಶ್ರೀಧರ್ ಅಂತ. ಅವರಿಗೆ ನಾವು ಬರೋದು ತಿಳಿದಿಲ್ಲ, ಹಾಗೇ ದಾರೀಲಿ ಇಳಿದು ನೋಡಿಕೊಂಡು ಹೋಗೋಣ ಅಂತ ಬಂದ್ವಿ. ನಿಮಗೇನಾದರೂ ಅವರ ಮನೆ ಗೊತ್ತಾ? ನಾವೆಲ್ಲ: ಶ್ರೀಧರ್ ಅನ್ನೋವರು ತುಂಬಾ ಜನ ಇದ್ದಾರೆ ಕೋಟೇಲಿ, ಅವರು ನೋಡಕ್ಕೆ ಹೇಗಿದಾರೆ ಅಂತ ಹೇಳಿ? ಶಾಂಭವಿ: ಎತ್ತರಕ್ಕೆ, ಬೆಳ್ಳಗೆ ಇದ್ದಾರೆ. ಮಧ್ಯ ವಯಸ್ಕರು, ಕನ್ನಡಕ ಇಲ್ಲ, ತಲೆಲ್ಲಿ ಸ್ವಲ್ಪ ಸೆಂಟ್ರಲ್ ಬಾಲ್ಡ್ ನೆಸ್, ತೆಳ್ಳಗೂ ಇಲ್ಲ, ದಪ್ಪಗೂ ಇಲ್ಲ. ನಾವು: ಅವರು ಕೆ. ಇ. ಬಿ. ನಲ್ಲಿ ಕೆಲಸ ಮಾಡ್ತಾರಾ? ಎರಡು ಸಣ್ಣ ಹೆಣ್ಣು ಮಕ್ಕಳು ಅವರಿಗೆ ಅಲ್ವಾ? ಅಜ್ಜಿ: ಹೌದು ಕಣೇ ಶಾಂಭವಿ, ಶ್ರೀಧರ ಕೆ. ಇ. ಬಿ ನಲ್ಲೇ ಕೆಲಸ ಮಾಡೋದು, ಅವನಿಗೆ ಎರಡು ಹೆಣ್ಣು ಮಕ್ಕಳು. ನಾವು: ಅವರನ್ನ ಕೋಟೇಲಿ ನೋಡಿದೀವಿ, ಅವರ ಮನೆ ಗೊತ್ತಿಲ್ಲ ಕೋಟೇಲಿ ಎಲ್ಲಿ ಅಂತಾ. ಹೇಗಿದ್ರೂ ನಾವೆಲ್ಲ ಪ್ರವಾಸಿ ಮಂದಿರದ ಹತ್ತಿರ ಉದ್ಯಾನವನಕ್ಕೆ ಹೊರಟಿದ್ದೇವೆ, ಅಲ್ಲೇ ಹತ್ತಿರ ಕೆ. ಇ. ಬಿ. ಕಛೇರಿನೂ ಇದೆ. ನಿಮ್ಮನ್ನು ಅಲ್ಲಿಗೆ ಬಿಡುತ್ತೇವೆ” ಎಂದು ನಮ್ಮ ಜಿ. ಪಿ. ಎಸ್ ನಲ್ಲಿ ಮೊದಲನೇ ಡೆಸ್ಟಿನೇಶನ್ – ಕೆ. ಇ. ಬಿ ಕಛೇರಿ, ಎರಡನೇ ಡೆಸ್ಟಿನೇಶನ್ – ಉದ್ಯಾನವನ, ಮೂರನೇ ಡೆಸ್ಟಿನೇಶನ್ – ಪ್ರವಾಸಿ ಮಂದಿರ ಅಂತ ಎಂಟ್ರೀ ಹಾಕಿ ಅಜ್ಜಿ, ಶಾಂಭವಿ ಅವರನ್ನು ಹೊರಡಿಸಿ, ಕೂಲಿ ಹುಡುಗನ ತಲೆಯ ಮೇಲೆ ಅಜ್ಜಿಯ ಟ್ರಂಕ್ ಹೊರಿಸಿ, ಕಡೆಗೂ ಒಂದ್ ಸಲ ಬಸ್ ನಿಲ್ದಾಣದಿಂದ ಹೊರ ಹೊರಟೆವು. ನಮ್ಮ ಹಿಂದೆ ಶಾಂಭವಿ, ಅಜ್ಜಿ, ಅಜ್ಜಿ ಹಿಂದೆ ಕೂಲಿ ಹುಡುಗ ಟ್ರಂಕಿನೊಡನೆ, ಮೆರವಣಿಗೆಯಂತಿತ್ತು ನಮ್ಮ ಸವಾರಿ.

 

ಅದಕ್ಕೇ ಹೇಳೋದು “ಎಲ್ಲಾದರೂ ಹೊರಟಾಗ ಮಧ್ಯೆ ನಿಲ್ಲಿಸಬಾರದು” ಅಂತ, ಅದರಲ್ಲೂ ಬಸ್ ನಿಲ್ದಾಣದಲ್ಲಿ ಜಾಸ್ತಿ ಹೊತ್ತು ಇದ್ದರೆ, ಈ ತರಹ ಏನಾದರೂ ಬಂದು ಒಕ್ಕರಿಸುತ್ತೆ. ನಮ್ಮ ಜಿ. ಪಿ. ಎಸ್ ಕೂಡಾ ಒಂದು ವಾರ್ನಿಂಗ್ ಕೊಟ್ಟಿತ್ತು ನಾವು ಬಸ್ ನಿಲ್ದಾಣದಲ್ಲಿ ಪ್ರಯಾಣ ನಿಲ್ಲಿಸಿದಾಗ – ” ರೀ ರೌಟಿಂಗ್ – ಕ್ಯಾಲಿಕ್ಯೂಲೇಟಿಂಗ್ ದ ರೌಟ್” ಅಂತ. ಅಜ್ಜಿ ಉಸ್ಸಪ್ಪಾ- ಉಸ್ಸಪ್ಪ ಅಂತಲೇ ಬಿರುಸಾಗಿ ನಡೆದಿತ್ತು. ನಾವು ಐದು ಗಂಟೆ ಯೊಳಗೆ ಕೆ. ಇ. ಬಿ. ಕಛೇರಿ ತಲುಪಬೇಕಿತ್ತು, ೧೦ ನಿಮಿಷಗಳ ಅವಧಿಯಷ್ಟೇ ಇತ್ತು. ಏಷ್ಟು ವೇಗವಾಗಿ ನಡೆಯಬೇಕು ಅಂತ ಲೆಕ್ಕ- ಚಾರ ಹಾಕಲು ಸಮಯವಿರಲಿಲ್ಲ. ನಮ್ಮ ನಮ್ಮಲ್ಲೇ ಮಾತಾಡಿಕೊಂಡ್ವಿ “ಬೇಗ ಇವರನ್ನ ಕೆ. ಇ. ಬಿ ಕಛೇರಿಯಲ್ಲಿ ಸಾಗುಹಾಕಿ ನಾವು ಉದ್ಯಾನವನ ತಲುಪೋದು ಅಂತ”. ಕೂಲಿ ಹುಡುಗ ಕೊಂಕು ಶುರು ಮಾಡ್ದ ” ಇನ್ನೂ ಎಷ್ಟು ದೂರ ಐತೆ? ಎಂಟಾಣೆ ಕಮ್ಮಾಯ್ತು”. ಇದೆಲ್ಲಿ ಗ್ರಹಚಾರ ನಮ್ಮದು? ಫ್ರೀ ಜಿ. ಪಿ. ಎಸ್, ಫ್ರೀ ಡೈರಕ್ಶನ್ಸ್, ಫ್ರೀ ಪಬ್ಲಿಕ್ ಸರ್ವೀಸ್, ಇಷ್ಟಾದ್ರೂ ಹೊಸ ಸಮಸ್ಯೆ. ಅವನಿಗೆ ಇನ್ನೇನ್ ಸಿಕ್ತು ಅಂತ ಸಮಾಧಾನ ಹೇಳಿ ಹಾಗೂ ಹೀಗೂ ಕೆ.ಇ. ಬಿ ಕಛೇರಿ ತಲುಪಿ, ಅಲ್ಲೇ ಹೊರಗೆ ಬರುತ್ತಿದ್ದ ಕೆಲಸಗಾರರನ್ನು ಕೇಳಿದ್ವಿ “ಶ್ರೀಧರ್ ಎಲ್ಲಿ ಸಿಕ್ತಾರೆ?” ಅಂತ. ಅವರಲ್ಲೊಬ್ರು “ಇದೇನ್ ಈಗ್ ಬಂದ್ ಕೇಳ್ತಿದ್ದೀರಾ? ಅವರ ಮನೆ ದೂರಾ ಅಂತ ಅವರು, ಮುಂಚೆನೇ ಮನೆಗೆ ಹೋಗ್ತಾರೆ ಸಾಮಾನ್ಯವಾಗಿ. ಇದ್ದರೆ, ಆ ಕೊನೇ ಕೋಣೇಲಿ ನೋಡಿ” ಅಂತ ಹೇಳಿ ನಮ್ಮಿಂದ ತಪ್ಪಿಸಿಕೊಂಡರು.

 

ಎಲ್ಲರೂ ಹೇಗೋ ತಪ್ಪಿಸಿಕೊಳ್ತಾರೆ, ಆದರೆ ನಮಗ್ಯಾಕೋ ಇವತ್ತು ಈ ಅಜ್ಜಿ, ಶಾಂಭವಿ ಯಿಂದ ಬಿಡುಗಡೆ ಕಾಣಿಸಲಿಲ್ಲ. ಇನ್ನು, ಶ್ರೀಧರ್ ಅವರು ಮನೆಗೆ ಹೊರಟಿದ್ದರೆ, ನಾವೇ ಇವರನ್ನು ಕೋಟೇವರೆಗೂ ಕರೆದುಕೊಂಡು ಹೋಗ್ಬೇಕಾಗಬಹುದು ಅಂತ ಯೋಚಿಸಿ, ತಕ್ಷಣ ಓಡಿ ಕಡೇ ಕೋಣೆಯೋಳಗೆ ನುಗ್ಗಿ ಶ್ರೀಧರ್ ಅವರನ್ನು ಕಂಡು ಮಾತಾಡಿದ್ವಿ: “ನಿಮ್ಮ ನೆಂಟರು ಒಬ್ಬರು ಬಸ್ನಿಂದ ಇಳಿದು, ನಮ್ಮ ಸಹಾಯ ಕೇಳಿದ್ರು, ಇಲ್ಲಿಗೆ ಕರಕೊಂಡು ಬಂದ್ವಿ”. ಅಷ್ಟೊತ್ತಿಗೆ, ಅಜ್ಜಿ( ಉಸ್ಸಪ್ಪಾ – ಉಸ್ಸಪ್ಪ ಅನ್ನುತ್ತಾ), ಶಾಂಭವಿ ಮತ್ತು ಕೂಲಿ ಹುಡುಗ ಎಲ್ಲರೂ ಅಲ್ಲಿಗೆ ಬಂದರು. ಶ್ರೀಧರ್ ಅವರು ನಮಗೆ ವಂದನೆ ಹೇಳುವ ಬದಲು, ಸುಸ್ತಾಗಿದ್ದ ಅಜ್ಜಿನ ನೋಡಿ, ನಮ್ಮನ್ನುದ್ಧೇಶಿಸಿ ಉವಾಚ: “ಅಯ್ಯೋ, ಬಸ್ ನಿಲ್ದಾಣದಿಂದ ಕೋಟೇಲ್ಲಿರೋ ನಮ್ಮ ಮನೆಗೆ ಸೀದ ಕರಕ್ಕೊಂಡು ಹೋಗೊದ್ ಬಿಟ್ಟು, ಇಷ್ಟು ದೂರ ಈ ಅಜ್ಜಿನ ನಡೆಸ್ಕೊಂಡು ಬಂದಿದೀರಲ್ಲ. ನಿಮಗೇನಾದ್ರೂ ಬುದ್ಧಿ ಇದೆಯೇ? ದಿನಾ ಅಲ್ಲೇ ಚಿನ್ನಿ-ದಾಂಡು, ಕುಂಟಪಿಲ್ಲೆ ಆಡ್ತಿರ್ತೀರ? ನಮ್ಮನೆ ಗೊತ್ತಿಲ್ವೇ? ಇನ್ನೂ ಏನೇನ್ ಬೈತಿದ್ದರೋ ಏನೋ ಕೂಲಿ ಹುಡುಗ ಗಲಾಟೆ ಮಾಡ್ದೇ ಇದ್ದಿದ್ರೇ …”ಸಾರ್, ಈ ಟ್ರಂಕ್ ತುಂಬಾ ಭಾರ, ಇಲ್ಲೇ ಇಳಿಸೋದಾ? ಕಾಸ್ ಕೊಡಿ ಸಾರ್, ನಾನು ವಾಪಸ್ ಹೋಗಿ ಬೇರೆ ಗಿರಾಕಿನ ಹುಡುಕ್ ಬೇಕು” ಎಂದು ಟ್ರಂಕ್ ಇಳಿಸೇ ಬಿಟ್ಟ. ಶ್ರೀಧರ್ ಇನ್ನೊಂದ್ ಸಲ ಟ್ರಂಕ್ ನ ಸರಿಯಾಗಿ ನೋಡಿ, : “ಇದನ್ನ ಮನೇ ತನಕ ನನ್ನ ಕೈಯಲ್ಲಿ ಎತ್ತಕ್ಕಾಗಲ್ಲ, ನೀನೇ ಮನೆ ವರೆಗೂ ತಗೊಂಡ್ಬಾ, ಮನೆ ಹತ್ರ ದುಡ್ಕೊಡ್ತೀನಿ” ಅಂದರು. ಅಜ್ಜಿ ಸ್ವಲ್ಪ ಸುಧಾರಿಸಿಕೊಂಡು “ಶ್ರೀಧರ, ಈ ಮಕ್ಕಳಿಗೇನಾದ್ರೂ ಕೊಡೋ, ಅಷ್ಟು ದೂರದಿಂದ ನಮಗೆ ದಾರಿ ತೋರಿಸಿವೆ” ಅಂತು.

 

ಶ್ರೀಧರ್ ಅವರು “ನನಗೆ ಇನ್ನೂ ಸ್ವಲ್ಪ ಕೆಲಸ ಇದೆ, ನೀವೆಲ್ಲ ಕೂಲಿ ಜೊತೆ ಇವರನ್ನು ಮನೆಗೆ ಬಿಟ್ಬಿಡಿ. ನಮ್ಮನೆ ಅದೇ ಕತ್ತಿ ಮರದ ಮುಂದೆ ಇರುವ ವಠಾರದಲ್ಲಿದೆ.” ಎಂದು ಸ್ವಲ್ಪ ನಿಧಾನವಾಗಿ ಆಜ್ಞೆ ಮಾಡಿದರು. ನಾವೆಲ್ಲ ಒಕ್ಕೊರಲಿನಿಂದ “ಸಾಯಂಕಾಲ ಆಗಿದೆ, ಕತ್ತಲಾಗುವ ಒಳಗೆ ನಾವು ಉದ್ಯಾನವನದಲ್ಲಿ, ಪ್ರವಾಸಿಮಂದಿರದಲ್ಲಿ ಆಡಿ ಮನೆ ಸೇರಬೇಕು. ನಮಗೇನೂ ಬೇಡ, ಕಡ್ಲೇ- ಪುರಿ ಎಲ್ಲ ಇದೆ ಎಂದು ಅಲ್ಲಿಂದ ಓಟ ಕಿತ್ವಿ. (ಅದನ್ನ ಕಟ್ಟಿಸಿಕೊಳ್ಳೋ ಗಲಾಟೆಯಲ್ಲೇ ಇಷ್ಟೆಲ್ಲಾ ಅವಾಂತರ ಆಯಿತು ಅಂತ ಮನಸ್ಸಿಗೆ ಬರದೇ ಇರಲಿಲ್ಲ). ಹಿಂದಿನಿಂದ ಶಾಂಭವಿ ಚೀಲದಿಂದ ತೆಗೆದ ಕೋಡುಬಳೆ, ಚಕ್ಕುಲಿ, ಹುರಿಗಾಳು ತೆಗೆದು ನಮಗೆಲ್ಲ ಕೊಟ್ಟಳು. ಕಡೆ ಸಾರಿ ನಮ್ಮ ಜಿ. ಪಿ. ಎಸ್ ನ ಅಪ್ಡೇಟ್ ಮಾಡಕ್ಕೆ ಹೋದಾಗ, ಜಿ. ಪಿ. ಎಸ್ ಗೂ ಕನ್ಫ್ಯೂಸ್ ಆಗಿ ” ಡು ಯು ವಾಂಟ್ ರೌಟ್ ಟು ಹೋಮ್?” ಅಂತ ಕೇಳ್ತು. ನಮಗನಿಸಿದ್ದು “ಎಲಾ ಇವನಾ?”.

 

೨-ದಿನಗಳ ನಂತರ ಮನೆಯ ಮುಂದೆ ಆಟವಾಡುತ್ತಿದ್ದಾಗ………. ಅಜ್ಜಿ, ಶಾಂಭವಿ ಊರಿಗೆ ಹೊರಟಿದ್ದರು. ಅದೇ ಕೂಲಿ ಹುಡುಗ ಅಜ್ಜಿ ಟ್ರಂಕ್ ಹೊತ್ಗೊಂಡು ಹಿಂದೆ ನಡೆಯುತ್ತಿದ್ದ. ಅಜ್ಜಿ ನಗುತ್ತಾ “ನಿಮ್ಗಳ ಮನೆ ಇಲ್ಲೇನಾ? ಅದಕ್ಕೇ ನಮ್ ಶ್ರೀಧರ ಹಾಗ್ ಕೂಗಾಡ್ದ ಅವತ್ತು. ಶಾಂಭವಿ, ನಿಂಗ್ ದಾರಿ ಗೊತ್ತೇನೇ ನಿಲ್ದಾಣಕ್ಕೆ? ನೋಡು, ಅದೇ ಹುಡುಗ್ರನ್ನು ಇವತ್ತೂ ನಮಗೆ ದಾರಿ ತೋರಿಸಕ್ಕೆ ಕರೆದ್ಕೊಂಡ್ ಹೋಗ್ಬಹುದು” ಅಂತು. ಶ್ರೀಧರ್ ಮಾಮ ಪತ್ತೇನೇ ಇರಲಿಲ್ಲ ಇವತ್ತು. ಕೂಲಿ ಹುಡುಗ ಖುಷಿಯಿಂದ ನಮ್ಮನ್ನೆಲ್ಲಾ ನೋಡಿ “ಬಸ್ ಸ್ಟಾಪ್ ನನಗೆ ಚೆನ್ನಾಗಿ ಗೊತ್ತೈತೆ, ನೀವೇನ್ ಬರೋದ್ ಬ್ಯಾಡ” ಅಂದ. ನಾವೆಲ್ಲ ನಕ್ಕು “ನಮ್ಮ ಜಿ. ಪಿ. ಎಸ್ ಔಟ್ ಆಫ್ ಆರ್ಡರ್ ಇವತ್ತು” ಅಂತ ಹೇಳಿ, ಅಜ್ಜಿ ಮತ್ತು ಶಾಂಭವಿ ಗೆ ಟಾ – ಟಾ ಮಾಡಿದ್ವಿ! ೩೫ ವರುಷಗಳ ಹಿಂದೆ ನಾವು “ಜಿ. ಪಿ. ಎಸ್.” ಆಗಿದ್ದು ಹೀಗೆ !! ಇನ್ನೂ ಚೆನ್ನಾಗಿ ನಡೀತಿದೆ !!!

Advertisements
Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ಅಮ್ಮನ ಸೀರೆ!

ಕಡೂರಿನ ದಿನಗಳು – ಅಮ್ಮನ ಸೀರೆ!Image

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಅಮ್ಮ ನಮ್ಮನ್ನಗಲಿ ೭ ವರುಷಗಳ ಮೇಲಾಯಿತು ಹೆಚ್ಚೂ ಕಡಿಮೆ ಈ ಸಮಯಕ್ಕೆ. ನೆನಪು ಮರುಕಳಿಸಿತು. ಅಮ್ಮ, ಅಮ್ಮನ ಸೀರೆಯೊಂದಿಗೆ ನೆನಪಾದಳು. ಸುಂದರ ನೆನಪುಗಳು ಸವಿದರೆ ಸವಿನೆನಪುಗಳು. ಅಮ್ಮನ ಹತ್ತಿರ ಒಂದು ರೇಶ್ಮೆ ಸೀರೆ ಇತ್ತು. ಇದ್ದ ಒಂದೆರಡು ರೇಶ್ಮೆ ಸೀರೆಗಳಲ್ಲಿ ಇದೂ ಒಂದು. ಇದು ಒಂದು ಅಪೂರ್ವವಾದ ಸೀರೆ. ತುಂಬಾ ಜರತಾರಿ ಇಲ್ಲದಿದ್ದರೂ ಎಲ್ಲರಿಗೂ ಮೆಚ್ಚುಗೆಯಾಗುವಂತ ಸೀರೆ. ಚಕ್ಸ್ ಮಡಿಲು ಅಂದರೆ ಎರಡುಬಣ್ಣಗಳ ಚೌಕಲಿಗಳಿಂದ ಕೂಡಿತ್ತು. ಒಂದು ಚಿನ್ನದ ಹಳದಿಬಣ್ಣ, ಇನ್ನೊಂದು ಸರಸ್ವತಿ ಬಣ್ಣ ಅಂದರೆ (ಮೆಜೆಂತಾ) ಬಣ್ಣ. ಅಂಚಿನಲ್ಲಿ ಸರಸ್ವತಿ ಬಣ್ಣವಿದ್ದು, ಜರತಾರಿಯಲ್ಲಿ ಹೂವುಗಳನ್ನು ಸಾಲಾಗಿ ನೈದಿದ್ದರು. ಸೆರಗಿನಲ್ಲೂ ಜರತಾರಿಯಲ್ಲಿ ಹೂವುಗಳು ಮತ್ತು ಸರಸ್ವತಿ ಬಣ್ಣದ ಅಂಚಿತ್ತು. ಮೊದಲೆಲ್ಲಾ ಬದುಕು ಸರಿಯಾಗಿದ್ದಾಗ ಅಮ್ಮ ಈ ಸೀರೆಯನ್ನು ಮದುವೆ, ಮುಂಜಿ ಮುಂತಾದ ದಿನಗಳಲ್ಲಿ ಎಲ್ಲರಂತೆ ರೇಶ್ಮೆ ಸೀರೆ ಉಡುವಾಗ ಉಟ್ಟುಕೊಳ್ಳುತ್ತಿದ್ದಳು. ಆಮೇಲಾಮೇಲೆ ಬಡತನ ಆವರಿಸಿದ್ದರಿಂದ, ಬೇರೆ ಸೀರೆಗಳಿಲ್ಲದೇ, ಎಲ್ಲಿಗೇ ಹೋಗಬೇಕಾದರೂ ಇದೇ ಗತಿಯಾಯಿತು. ನಾವೆಲ್ಲ ಈ ಸೀರೆ ಯಾಕಮ್ಮ ಉಡುತ್ತೀಯ ಅಂದಾಗ “ಇಟ್ಟೇನು ಮಾಡುವುದು, ಉಟ್ಟರೇ ಚೆಂದ” ಅಂದಳು ಸ್ವಲ್ಪ ದಿನ. ನಂತರ ನಮಗೇ ಅರ್ಥವಾಯಿತು ಬೇರೇ ಸೀರೆಗಳಿಲ್ಲದಿರುವುದು. ಅಮ್ಮ ಚೆನ್ನಾಗಿ ಕಾಣುತ್ತಿದ್ದಳು ಈ ಸೀರೆ ಉಟ್ಟಾಗ. ಹೀಗೆ ಅಂಗಡಿ, ಮುಂಗಟ್ಟು ಎಲ್ಲ ಕಡೆಗೂ ಇದೇ ಸೀರೆ ಉಟ್ಟು, ಅಂಚೆಲ್ಲಾ ಹರಿದು ಹೋಗುತ್ತಾ ಬಂತು. ಆದರೂ, ಜರತಾರಿ ಅಂಚು ಮೇಲಿದ್ದರಿಂದ ಅದು ಚೆನ್ನಾಗೇ ಇತ್ತು.

ರೇಶ್ಮೆ ಅಂಚು ಹರಿದರೇನು, ಜರತಾರಿ ಚೆನ್ನಾಗಿದೆಯಲ್ಲ ಅದೇ ಸಾಕು ಅನ್ನುತ್ತಿದ್ದಳು ಅಮ್ಮ. ಏಕೆಂದರೆ ಮೊದಲಿನ ರೇಶ್ಮೆ ಸೀರೆಗಳಲ್ಲಿ ಜರತಾರಿಯನ್ನು ಒಳ್ಳೇ ಬೆಳ್ಳಿ ಯಿಂದ ಮಾಡಿ ಅದರಮೇಲೆ ಚಿನ್ನದ ನೀರು ಹಾಕಿದಹಾಗೆ ಮಾಡಿರುತ್ತಿದ್ದರು. ಜರಿ ಕರಗಿಸಿದರೆ ಅಕ್ಕಸಾಲಿಗನ ಹತ್ತಿರ, ಅವನು ಅದನ್ನು ಖರೀದಿ ಮಾಡಿ ಅದಕ್ಕೆ ಸಮಾನವಾದ (ಅವನು ತೀರ್ಮಾನಿಸಿದಂತೆ) ಬೆಳ್ಳಿಯ ಬೆಲೆಯನ್ನು ರೂಪಾಯಿಯಲ್ಲಿ ಕೊಡುತ್ತಿದ್ದ. ಅದಕ್ಕೇ ಅಮ್ಮ ಹೇಳುತ್ತಿದ್ದಳು: ಎಲ್ಲ ಹರಿದು ಹೋದಮೇಲೆ ಬೆಳ್ಳಿಯನ್ನು ಕರಗಿಸಿ ದುಡ್ಡು ಪಡೆಯೋಣ ಅಂತ. ಆದರೆ ನನಗೆ ಆ ವಿಷಯ ಯೋಚಿಸಿದಾಗ ಅಷ್ಟು ಖುಷಿ ತಂದಿರಲಿಲ್ಲ. ಸ್ವಲ್ಪ ಹರಿಯುತ್ತಿರುವಾಗಲೇ ಆಗಾಗ ನಾನು ಸೂಜಿ ಮತ್ತು ಸರಸ್ವತಿ ಬಣ್ಣದ ದಾರ ತಗೊಂಡು ಚೆನ್ನಾಗಿ ಹೊಲಿದು ಒಪ್ಪವಾಗಿ ಇಡುತ್ತಿದ್ದೆ. ಆ ಸೀರೆ ನೋಡಿದಾಗಲೆಲ್ಲ ಎಷ್ಟೊಂದು ಆನಂದ ಕೊಡುತ್ತಿತ್ತು ನನಗೆ. ಹಾಗಾಗಿ ಸೀರೆ ಪೂರ್ತಿ ಹರಿಯಲು ಅವಕಾಶ ಕೊಡಲೇ ಇಲ್ಲ.

ಅಷ್ಟರಲ್ಲೇ ಮನೆಯ ಅರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರಿಂದ ನಮ್ಮ ಅಕ್ಕ ಅಮ್ಮನಿಗೆ ಕೆಲವು ಕಾಟನ್ ಸೀರೆಗಳು ಜರಿ ಅಂಚಿರುವುದನ್ನು ತಂದಳು. ಆಗ ಅವುಗಳನ್ನು ಅಮ್ಮ ದಿನಬಳಕೆಗೆ ಉಡುತ್ತಿದ್ದರು. ಈ ಸೀರೆಯನ್ನು ಹರಿದಿದ್ದ ದಡಗಳನ್ನು ನಮ್ಮ ಮನೆಯಲ್ಲೇ ಹೊಲೆಯುವ ಮಿಶನ್ ಇದ್ದಿದ್ದರಿಂದ ಅದರಲ್ಲಿ ಸಿಗ್ಸ್ಯಾಗ್ ಮಾಡಿ ಜೋಪಾನವಾಗಿ ಇಟ್ಟೆವು. ಈಗ ಅಪರೂಪಕ್ಕೆ ಅಮ್ಮ ಈ ಸೀರೆ ಉಡುತ್ತಿದ್ದಳು. ನಮ್ಮ ದೊಡ್ದ ಅಕ್ಕನೂ ಅಪರೂಪಕ್ಕೊಮ್ಮೆ ಈ ಸೀರೆ ಉಡುತ್ತಿದ್ದಳು. ನಾನಿನ್ನೂ ಸೀರೆ ಉಡುತ್ತಿರಲಿಲ್ಲವಾದ್ದರಿಂದ ಇದನ್ನು ಉಡುವ ಅವಕಾಶ ಸಿಕ್ಕಿರಲಿಲ್ಲ. ನಾವೆಲ್ಲ ಇನ್ನೂ ಲಂಗ ಹಾಕುತ್ತಿದ್ದರಿಂದ, ಆ ಸೀರೆಯಲ್ಲಿ ನಮ್ಮ ಜರಿ ಲಂಗ ಹೇಗೆ ಕಾಣಬಹುದೆಂದು ಊಹಿಸಿ ಸಂತೋಷ ಪಟ್ಟುಕೊಳ್ಳುತ್ತಿದ್ದೆವು. ಅದು ಮನಸ್ಸಿಗೆ ಉಟ್ಟಷ್ಟೇ ಆನಂದವನ್ನು ಕೊಡುತ್ತಿತ್ತು. ಈಗಲೂ ಮನಸ್ಸಿನಲ್ಲಿ ತುಂಬಿಕೊಂಡರೆ ಅದೊಂದು ಅಪೂರ್ವವಾದ ಸವಿನೆನಪು.

ಹೀಗೇ ದಿನಕಳೆಯಲು, ನಮ್ಮ ಅಕ್ಕ ಸೀರೆ ಉಡುವಹಾಗಾದಾಗ ಅವಳಿಗೆ ಹೊಸ ರೇಶ್ಮೆ ಸೀರೆಗಳು ಬಂದವು. ಅಮ್ಮನಿಗೂ ಹೊಸ ತರಹದ ರೇಶ್ಮೆ ಸೀರೆಗಳು ದಕ್ಕಿದವು. ಆಗ ಅವರಿಬ್ಬರ ಕಣ್ಣು ಈ ಸೀರೆಯಿಂದ ದೂರ ಸರಿಯಿತು. ಆಗ ಅದೃಷ್ಟ ನಮ್ಮ ಪಾಲಿಗೆ ಬಂತು, ಲಂಗ ಧರಿಸುವ ಅಕ್ಕ ತಂಗಿಯರಿಗೆ. ಆಗ ಸೀರೆಯಲ್ಲಿ ಲಂಗ ಮತ್ತು ಕುಪ್ಪಸವನ್ನು ಮನೆಯಲ್ಲೇ ಹೊಲೆದೆವು. ಈ ಲಂಗವನ್ನು ನಾವು ೩-೪ ಜನ ಅಕ್ಕ ತಂಗಿಯರು ಹಂಚಿಕೊಂಡು ಧರಿಸುತ್ತಿದ್ದೆವು. ಒಬ್ಬೊಬ್ಬರು ಒಂದೊಂದು ಹಬ್ಬಕ್ಕೆ ಅಂತ ನಿಗಧಿಮಾಡಿ. ಹಾಗಾದರೂ ತೃಪ್ತಿ ಅನ್ನುವುದು ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ. ಈ ಸೀರೆ ಮತ್ತು ಅದರ ಲಂಗ ನೆನಪಾದಾಗ ಹಬ್ಬ ಹುಣ್ಣಿಮೆಗಳು ನೆನಪಿಗೆ ಬರುತ್ತದೆ. ಝರತಾರಿ – ರೇಶ್ಮೆ ಲಂಗ ಧರಿಸಿ, ಕುಚ್ಚಿನ ಜಡೆ ಹಾಕಿ, ಸರ – ಜುಮುಕಿ ಹಾಕಿಕೊಂಡರೆ ಏನೋ ಸಂತೋಷ, ಸಂಭ್ರಮ, ಉತ್ಸಾಹ ಹೇಳತೀರದು. ಆ ಉತ್ಸಾಹ ಈಗ ಎಷ್ಟೇ ದುಬಾರಿ ರೇಶ್ಮೆ ಸೀರೆ ಉಟ್ಟು, ವಜ್ರದ ಓಲೆ ಹಾಕಿಕೊಂಡರೂ ಬಾರದು. ಕ್ರಮೇಣ, ತುಂಬಾ ಹಳೆಯ ಸೀರೆಯಾದ್ದರಿಂದ ಲಂಗವಾಗಿ ಬಹಳ ದಿನ ಉಪಯೋಗಿಸಿದ ನಂತರ ಜರತಾರಿ ಇನ್ನೂ ಚೆನ್ನಾಗಿದ್ದರಿಂದ ಹಳೇ ಬಟ್ಟೇ ತಗೊಂಡು ಪಾತ್ರೆ ಕೊಡುವವನಿಗೆ ಕೊಟ್ಟು ಪಾತ್ರೆ ತಗೊಂಡ ಮೇಲೆ ಅದರ ಕಾಲ ಮುಗಿದಿತ್ತು.

ಸಿಹಿನೆನಪೊಂದೇ ಸಾಕು ನಮ್ಮನ್ನು ಭಾವುಕತೆಯಲ್ಲಿ ಬಂಧಿಸಲು…! ಹೀಗೆ ಅಮ್ಮ, ಅಮ್ಮನ ಸೀರೆಯೊಂದಿಗೆ ನೆನಪಾದಳು…!! ಅಮ್ಮನ ನೆನಪು ನಿತ್ಯ ನೂತನವಾಯಿತು…!!!

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ಶಂಕ್ರು ಅಂಗಡಿ!

ಕಡೂರಿನ ದಿನಗಳು – ಶಂಕ್ರು ಅಂಗಡಿ!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಶಂಕ್ರು, ಕೋಟೆ ಜನಗಳಿಗೆ (ಬ್ರಾಹ್ಮರೇ ಬಹುಪೈಕಿ) ಸಹಾಯವಾಗಲಿ ಅಂತ ತುಂಬಾ ದಿನದಿಂದ ಯೋಜನೆ ಹಾಕಿಕೊಂಡು ಕಡೆಗೊಂದು ಸಲ ಧಿನಸಿ ಅಂಗಡಿ ಶುರು ಮಾಡೇ ಬಿಟ್ರು. ಶುರು ಮಾಡುವ ಮುಂಚೆ ಎಲ್ಲರೂ ಸಲಹೆಗಳನ್ನು ಕೊಟ್ಟರೇ ಕೊಟ್ಟರು, ಆದರೆ ತುಂಬಾ ದಿನ ಬಾಳುವ ಅನುಮಾನವನ್ನೂ ಮಾತ್ರ ಯಾರೂ ಹೇಳಲಿಲ್ಲ ಇರಬೇಕು. ಆದ್ರೂ ಏನಾದ್ರೂ ಒಂದು ಕೆಲಸ ಮಾಡಬೇಕು, ಅದೂ ಅಲ್ಲದೇ ಕೋಟೇನಲ್ಲಿ ಒಂದೂ ಧಿನಸಿ ಅಂಗಡಿ ಇಲ್ಲ, ಅಕ್ಕಿ, ಬೇಳೇ, ಎಣ್ಣೆ, ಬೆಲ್ಲ, ಕಾಯಿ, ಮೆಣಸಿನಕಾಯಿ ಮುಂತಾದ ಸಾಮಾನುಗಳೆಲ್ಲವನ್ನೂ ಪೇಟೆ ಇಂದಲೇ ತರಬೇಕು. ಹಬ್ಬ – ಹುಣ್ಣಿಮೆ ಎಂದರೆ ಏನಾದ್ರು ತರಕ್ಕೆ ಮರೆತು ಹೋದ್ರೆ, ಮತ್ತೆ ಕೋಟೆ ಯಿಂದ ಪೇಟೆ ಶೆಟ್ಟರ ಅಂಗಡಿ ವರೆಗೆ ಹೋಗಬೇಕು. ಹೀಗಾಗಿ ಒಂದು ಅಂಗಡಿ ಕೋಟೆಗೆ ಬೇಕೇ ಆಗಿತ್ತಲ್ಲದೆ, ವ್ಯಾಪಾರನೂ ಚೆನ್ನಾಗಿ ಕುದುರುವ ಸಂಶಯದ ಸುಳಿವಿರಲಿಲ್ಲ. ಬ್ರಾಹ್ಮಣರು ಸಾಲ, ಸೋಲನೋ ಮಾಡಿ ಹಬ್ಬದ ದಿನ ಒಬ್ಬಟ್ಟು ಮಾಡೇ ತೀರಿ ಹಬ್ಬ ಆಚರಿಸುವವರು, ಹಾಗಂದಮೇಲೆ ವ್ಯಾಪರಕ್ಕೇನು ಕಡಿಮೆ ಇಲ್ಲ. ಆದರೆ, ಈಗಿನ ಕಾಲದ ಮೇರೆಗೆ ಹೇಳಬೇಕಾದರೆ, “ಅಕೌಂಟ್ಸ್ ರಿಸೀವಬಲ್” ಅನ್ನೋ ಅಕೌಂಟ್ ಮಾತ್ರ ಮಿತಿಮೀರಿ ಎತ್ತರದಲ್ಲಿತ್ತು ಶಂಕ್ರುಗೆ. ಶಂಕ್ರುಗೆ ಹೇಗಿದ್ರು ಮದುವೆ ಆಗಿರಲಿಲ್ಲ ಅಂಗಡಿ ಶುರು ಮಾಡಿದಾಗ. ಹಾಗಾಗಿ ಸಾಲನ ಜನ ಇನ್ನೂ ಜಾಸ್ತಿದಿನ ಪೋಷಿಸಿ ಇಡುತ್ತಿದ್ದರು. ಅದು ಏನೇ ಇರಲಿ…..

ನನ್ನ ಮೆಚ್ಚಿನ ವಸ್ತುವೇ ಬೇರೆ ಶಂಕ್ರು ಅಂಗಡಿಯ ವಿಷಯದಲ್ಲಿ. ಶಂಕ್ರು ಅಂಗಡಿ ಒಂದು ರಸಿಕತೆಯ ರಾಜ್ಯವೇ ಸರಿ. ಅಲ್ಲಿ ಸಾಮಾನು ತಗೊಳ್ಳಕ್ಕೆ ಬಂದವರ್ಯಾರೂ ನಗದೇ ಇದ್ದಿಲ್ಲ. ಸಾಮಾನು ತಗೊಳ್ಳದಿದ್ದರೂ ಕೆಲವರು ತಮಾಷೆ ಮಾಡಿ ನಗುಕ್ಕೇ ಬಂದವರು ಹಲವಾರು. ಎಲ್ಲ ಸಣ್ಣ ಊರಿನ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕಾಣುವ ಸಿಮೆಂಟ್ ಕಟ್ಟೇ ಎರಡೂ ಬದಿಯಲ್ಲಿ (ಸೋಮಾರಿ ಕಟ್ಟೆ ಬೆಂಚು) ಶಂಕ್ರು ಅಂಗಡಿಲಿ ಸ್ವಲ್ಪ ದೊಡ್ಡದಾಗೇ ಇತ್ತು. ಅಣ್ಣ( ನಮ್ಮ ತಂದೆ), ಅಣ್ಣನ ಸ್ನೇಹಿತರು, ಮಂಜಣ್ಣ, ಭಟ್ಟರು, ಮೇಸ್ಟ್ರುಗಳು (ಬಹಳ) ಹಾಗೂ ಹೀಗೂ ಅಲ್ಲೇ ಇರುತ್ತಿದ್ದರು, ಕೆಲಸವಿದ್ದಾಗ ಮನೆಗೆ ಬರುತ್ತಿದ್ದರು. ಸಂಭಾಷಣೆ, ಸಂವಾದ, ಜೋರು , ಸಣ್ಣ ಸಣ್ಣ ಗಲಾಟೆ ಎಲ್ಲ ಇರುತ್ತಿದ್ದವು. ನಾನೊಂದು ದಿನ ಹೀಗೇ ಅಂಗಡಿಗೆ ಹೋಗಿ ಸಾಮಾನು ತರುವಾಗ….ಶಂಕ್ರು ಯಾರಿಗೋ ಸ್ವಲ್ಪ ದೊಡ್ದವರ ಹತ್ತಿರ ಮಾತಾಡ್ತಾ ಕೇಳ್ತಾ ಇದ್ರು….”ನೆನ್ನೆ ಏನೋ ಹೆಗಲಮೇಲೆ ಹಾಕ್ಕೊಂಡ್ ತಗೊಂಡು ಹೋಗ್ತಿದ್ರೀ”?

ಅವರು: ಏನಿಲ್ಲ ಶಂಕ್ರು ಎರಡು ತೆಂಗಿನಕಾಯಿ ಆಕಡೆ – ಈಕಡೆ ಭುಜದ ಮೇಲೆ ಹಾಕ್ಕೊಂಡು ತಗೊಂಡ್ ಹೋಗ್ತಾ ಇದ್ದೆ ಅಷ್ಟೇ”

ಶಂಕ್ರು: “ಏರಡ್ ತೆಂಗಿನಕಾಯೇ? ಎಲ್ಲೋ ಮೂರ್ ತರ ಕಾಣಿಸ್ತಲ್ಲ???”

ಅವರು “ಇಲ್ಲಪ್ಪ, ಎರಡೇ. ಸಿಪ್ಪೆ ತೆಗೆದಕಾಯಿ ಅಷ್ಟೇ”.

ಶಂಕ್ರು (ಸೀರಿಯಸ್ಸಾಗಿ): “ಅದು ಇನ್ನೊಂದು ಮಧ್ಯದಲ್ಲಿ ನಿಮ್ಮ ಬೋಡ್ ತಲೇನೇ ಹಾಗಾದ್ರೇ?, ದೂರದಿಂದ ಥೇಟ್ ಸಿಪ್ಪೇ ತೆಗೆದ ತೆಂಗಿನಕಾಯಿ ತರಹನೇ ಇತ್ತು, (ತಾಮ್ರ ಚೊಂಬಿನಂತೆ) ಅದಕ್ಕೇ ೩-ತೆಂಗಿನಕಾಯಿ ಇರಬೇಕ್ ಅಂತ ಕೇಳಿದ್ದು ಅನ್ಕೊಳ್ಳಿ” ಅಂತ ಹೇಳಿ ನನ್ನ ಕಡೆಗೆ ತಿರುಗಿ “ನಿನಗೇನು ಕಾಫಿ ಪುಡಿ ಬೇಕಾ”? ಅಂತ ಕೇಳಿದರು. ನನಗೆ ಇನ್ನೂ ತಾಮ್ರ ಚೊಂಬಿನ ವಿಷಯ ಕೇಳಿ ನಗುನೇ ಮುಗಿದಿರಲಿಲ್ಲ.

ನಾನು: ನಿಮಗೆ ಹೇಗ್ ಗೊತ್ತಾಯ್ತು ಶಂಕ್ರು? ನಮ್ಮ ಅಮ್ಮ ಕೂಗಿದ್ದು ಕೇಳುಸ್ತಾ? (ನಮ್ಮ ಮನೆ ಎದುರಿಗೇ ಇತ್ತು ಶಂಕ್ರು ಅಂಗಡಿ, ನಮ್ಮ ನಡುಮನೆಯ ಕಿಟಕಿ ಎದುರಿಗೇ ಶಂಕ್ರು ಅಂಗಡಿ, ಮಧ್ಯೇ ಕೋಟೆಯಿಂದ ಪೇಟೆಗೆ ಹೋಗುವ ಮಣ್ಣಿನ ದಾರಿ ಅಷ್ಟೇ).

ಶಂಕ್ರು: ನಿಮ್ಮ ಅಮ್ಮ ನಿಮ್ಮಗಳನ್ನು ಕೂಗಿ ಹೇಳೋದೂ ಕೇಳಿಸುತ್ತೆ, ಆದರೆ, ಈ ಸಲ ಹಾಗಾಗಲಿಲ್ಲ. ನಿಮ್ಮನೇಲಿ ಕಾಫಿಪುಡಿ ತಗೊಂಡು ೨- ದಿನ ಆಯ್ತಲ್ಲ, ಇವತ್ ಹಾಜರ್ ಅಂತ ಗೊತ್ತಿತ್ತು.

ಅಷ್ಟೊತ್ತಿಗೆ ಅಣ್ಣನ ಫ್ರೆಂಡು ಮಂಜಣ್ಣ ಬಂದರು. ನನ್ನನ್ನು ನೋಡಿ ಮಾತಾಡಿಸಿದರು.

ಮಂಜಣ್ಣ: ಅಜ್ಜಿ ಹೇಗಿದೆ? ಅಜ್ಜಿ ಹುಶಾರಿಲ್ಲ ಅಂತಿತ್ತು?

ನಾನು: “ಸ್ವಲ್ಪ ಜ್ವರ ಅಷ್ಟೇ, ಹುಷಾರಾಗಿದೆ” ಅಂದೆ.

ಮಂಜಣ್ಣ: “ಅಜ್ಜಿಗೆ ಏನು ಫಲಹಾರ ಇವತ್ತು?” ಅಂದರು.

ಅಜ್ಜಿ ರಾತ್ರಿ ಹೊತ್ತು ಊಟ, ಅನ್ನ ತಿಂತಾ ಇರಲಿಲ್ಲ. ಏನಾದ್ರೂ ತಿಂಡಿ ತಿಂತಿತ್ತು. ಉಪ್ಪಿಟ್ಟು, ಅವಲಕ್ಕಿ, ಅಕ್ಕಿ ರೊಟ್ಟಿ, ಹೀಗೆ. ನಾನು ಉತ್ತರ ಕೊಡೋ ಮೊದಲೇ ಮಂಜಣ್ಣ ರಾಗವಾಗಿ ಪದ್ಯ ಶುರು ಮಾಡಿದರು.

ಮಂಜಣ್ಣ: (ಅವರದೇ ಕಾಂಪೊಸಿಶನ್ ಇರಬೇಕು?????)
“ಅಂಗಜ ಪಿತಹರ
ಮುದುಕಿಗೆ ಚಳಿ – ಜ್ವರ
ಅದಕೇನು ಫಲಾಹಾರ
ಅವಲಕ್ಕಿ ಉಪಾಹಾರ”

ನಾನು: ನಗುತ್ತಾ, ನೀವೇ ಹೇಳ್ಬಿಟ್ರಲ್ಲ, ಅವಲಕ್ಕಿ ಅಂತಾ?
ಅಷ್ಟೊತ್ತಿಗೆ ನಮ್ಮ ಅಮ್ಮ ಕೂಗುದ್ರು: “ನೀರು ಕುದಿತು, ಕಾಫಿ ಪುಡಿ ಬೇಗ ತಗೊಂಡು ಬಾ” ಅಂತ.

ಮಂಜಣ್ಣ: ನಾನೂ ಬಂದೆ ಕಾಫಿಗೆ ಅಂತ ನನ್ನ ಹಿಂದೇ ಬಂದರು.

ಅಷ್ಟರಲ್ಲಿ, ವೆಂಕಟಲಕ್ಷ್ಮಿ ಮನೇ ಹಸು “ಲಕ್ಷ್ಮಿ” ಜೋರಾಗಿ ಸಗಣಿ ಹಾಕುತ್ತಾ ನಡೆದು ಬರುತ್ತಿತ್ತು…ಅದನ್ನ ನೋಡಿ ಮಂಜಣ್ಣನವರು ಅದಕ್ಕೊಂದು ತಮಾಷೆ ಮಾಡದೇ ಇರಲಿಲ್ಲ. ಅದರ ಮುಖ ಸವರಿ “ಏನಿದು ರಮಣಿ?……ಎಲ್ಲಾ ಸಗಣಿ” ಅಂದ್ರು ರಾಗವಾಗಿ. ನಮಗೆಲ್ಲ ನಗು ಬಂತು.

ಯಾಕೇ ನಗ್ತೀರಲ್ಲಾ? “ರಮಣಿ” ಅಲ್ವಾ ಅವಳು?, ಅವಳ ಹೆಸರು “ಲಕ್ಷ್ಮಿ”, ಅವಳ ಪತಿ ರಮಣ. ಹಾಗಾಗಿ ಅವಳು “ರಮಣಿ” ಅಂತ ಅರ್ಥೈಸಿದರು.
ಹೀಗೆ ಶಂಕ್ರು ಅಂಗಡಿಲಿ ಫ್ರೀಯಾಗಿ ಸ್ಟಾಂಡ್ ಅಪ್ ಕಾಮಿಡೀ ಸಿಗುತ್ತಿತ್ತು ಎಲ್ಲರಿಗೂ. ರಸಿಕತೆಯ ರಾಜ್ಯವಾಗಿತ್ತು. ಕಡೆಗೂ ಶಂಕ್ರು ಸಾಲಗಾರರ ಕಾಟದಿಂದ ವ್ಯಾಪಾರ ಕುಸಿದು ಅಂಗಡಿ ಮುಚ್ಚಲೇಬೇಕಾಯಿತು ಅನ್ನುವುದು ಮಾತ್ರ ಒಂದು ಬೇಜಾರಿನ ವಿಷಯವಾಗಿತ್ತು.

Posted in ಪ್ರಭಂದ ! | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ಕುಟ್ಟುಂಡೆ ಕಥೆ!

ಕಡೂರಿನ ದಿನಗಳು – ಕುಟ್ಟುಂಡೆ ಕಥೆ!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಕುಟ್ಟುಂಡೆ ಅಂದ್ರೆ ಏನು ಅಂತ ಆಮೇಲೆ ಹೇಳ್ತೀನಿ. ಹೇಳದೇ ಹೋದರೂ ಕಥೆ ಪದರ ಬಿಡಿಸುತ್ತಿದ್ದಾಗ ನಿಮಗೇ ಅರಿವಾಗುತ್ತೆ. ನಾವು ಕಥೆಯಲ್ಲಿ ಕುಟ್ಟುಂಡೆ ಮಾಡುವಾಗ ನೀವೂ ಹಾಗೆ ಮಾಡಿ ತಿಂದುನೋಡಿ.

ಅಮ್ಮ, ಅಣ್ಣ ಹೇಳ್ತಾನೇ ಇದ್ದರು ಹಗಲೆಲ್ಲಾ ಕುಟ್ಟುಂಡೆ ಮಾಡ್ಕೊಂಡು ತಿನ್ನಬೇಡಿ, ಕೆಮ್ಮು ಬರತ್ತೆ ಅಂತ. ಆದ್ರೂ ಕುಟ್ಟುಂಡೆ ರುಚಿ ಅದನ್ನು ಕೇಳಬೇಕಲ್ಲ? ನಮ್ಮ ಅಕ್ಕಂದಿರು ಅವರ ಸ್ನೇಹಿತೆಯರೊಂದಿಗೆ ಅಟ್ಗುಬ್ಬಚ್ಚಿ ಆಟ( ಅಮ್ಮ ಆಟ) ಆಡೋವಾಗ, ಅನ್ನ, ಸಾರು ಮತ್ತು ಕುಟ್ಟುಂಡೆ ಎಲ್ಲ ಮಾಡಿ ತಿಂದು ನಮಗೂ ರುಚಿ ಹತ್ತಿಸಿದ್ರು. ಆದ್ದರಿಂದ ನಮಗೂ ಮಾಡುವ ಆಸೆ ಕಾಡಿತ್ತು. ನಾವೂ ಸ್ವಲ್ಪ ದೊಡ್ಡವರಾದದಮೇಲೆ ಅದರ ಹುಚ್ಚು ಇನ್ನೂ ಜಾಸ್ತಿಯಾಯಿತು. ನಾನು, ನನ್ನ ಇಬ್ಬರು ತಂಗಿಯರು, ನನ್ನ ಸ್ನೆಹಿತೆ ಮತ್ತು ಅವಳ ತಂಗಿಯರು ಸೇರಿಕೊಂಡು ಯೋಜನೆ ಹಾಕಿದ್ದಾಯಿತು. ಯಾರ್ಯಾರು ಯಾವ ಯಾವ ಸಾಮಾನು ಕದ್ದು ತರುವುದು ಎಂದು. ನಾನು ಮತ್ತು ನನ್ನ ಸ್ನೇಹಿತೆ ಒಬ್ಬರು ಹುಣಸೇ ಹಣ್ಣು (ಮೂಸಂಬಿ ಗಾತ್ರ), ಮತ್ತು ಮೆಣಸಿನ ಪುಡಿ ತರುವುದು ಎಂದಾಯ್ತು. ನಮ್ಮ ತಂಗಿಯರು ಸಣ್ಣವರಾಗಿದ್ದರಿಂದ ಅವರು ಉಪ್ಪು, ಸಕ್ಕರೆ, ಜೀರಿಗೆ ಇವುಗಳನ್ನು ತರುವುದಕ್ಕೆ ಹೇಳಾಯಿತು. ಒಂದು ಸರಿಯಾದ ಹಾಸುಕಲ್ಲನ್ನು ನಮ್ಮ ಹಿತ್ತಲಿನಲ್ಲೇ ಹುಡುಕಿ, ಆ ಕುಟ್ಟುಂಡೆ ಕುಟ್ಟುವುದಕ್ಕೆ ಒಂಡು ಗುಂಡುಕಲ್ಲನ್ನು ಬೇರೆ ಎತ್ತಿಟ್ಟಾಯಿತು. ಇನ್ನು ಯಾವಾಗಂದರೆ ಆವಾಗ ಕುಟ್ಟುಂಡೆ ಕುಟ್ಟುವಹಾಗಿಲ್ಲ. ಅಮ್ಮ ಅಣ್ಣ ಅವರಿಗೆ ಗೊತ್ತಾಗುತ್ತೆ. ಸರಿಯಾದ ಸಮಯಕ್ಕೆ ಕಾದು ಕುಟ್ಟಬೇಕು. ರಜಾ ದಿನಗಳಲ್ಲಿ ಬೆಳಗ್ಗೆ ಇಂದ ಕೆಲಸಮಾಡಿ ಅಮ್ಮ, ಅಜ್ಜಿ, ಅಣ್ಣ, ಎಲ್ಲ ಮಧ್ಯಾನ್ನ ಊಟವಾದಮೇಲೆ ಸ್ವಲ್ಪ ಹೊತ್ತು ಮಲಗುತ್ತಿದ್ದರು. ಹಿತ್ತಲಿನ ಬಾಗಿಲು ಹಾಕಿ, ಮುಂದಿನ ಬಾಗಿಲು ತೆಗೆದು. ಆ ಸಮಯಕ್ಕೆ ಕಾದು ನಾವು ಹಿತ್ತಲಿನಲ್ಲಿ ಆಟ ಆಡುತ್ತೇವೆ ಎಂದು ಹೇಳಿ ಕುಟ್ಟುಂಡೆ ಕುಟ್ಟಲು ಹೋದೆವು. ನಮ್ಮ ನಮ್ಮ ತಂಗಿಯರಿಗೆ ಹೇಳಿದ್ದಾಯಿತು “ಮನೆಯ ಹಿತ್ತಲಿನ ಬಾಗಿಲ ಹತ್ತಿರನೇ ಕಾದು ಅಲ್ಲೇ ಆಟ ಆಡಿ. ದೊಡ್ದವರ್ಯಾರಾದ್ರೂ ಬಂದು ಕೇಳಿದರೆ, “ನಾವು ಆಟ ಆಡುತ್ತಿದ್ದೇವೆ, ಇನ್ನೇನು ಇಲ್ಲ, ಹಿತ್ತಲಿನ ಗೇಟು ಹಾಕಿದೆ, ಹಸು ಕಾರು ಯಾವುದೂ ಹೂವಿನ ಗಿಡ ತಿನ್ನುತ್ತಿಲ್ಲ, ಅಜ್ಜಿಯ ತರಕಾರಿಯ ಚೌವ್ಕ ದಲ್ಲಿ ಬರುವ ಹಕ್ಕಿಗಳನ್ನೂ ಓಡಿಸುತ್ತಿದ್ದೇವೆ, ಪರಂಗಿ ಕಾಯಿ ಬಿದ್ದರೆ ಒಳಗೆ ತಂದು ಇಡುತ್ತೇವೆ….ಹೀಗೆ ಸಾಲುಗಳನ್ನೇ ಗಟ್ಟಿ ಹೋಡಿಸಿದ್ವೀ” ಯಾರಿಗೂ ಕುಟ್ಟುಂಡೇ ವಿಷಯಾ ಮಾತ್ರ ಹೇಳಬೇಡಿ, ಇಲ್ದೆ ಇದ್ರೇ ಕುಟ್ಟುಂಡೆ ಕಥೆ ಅರ್ಧಕ್ಕೇ ಮುಗಿಯುತ್ತೇ” ಎಂದು ಎಚ್ಚರಿಕೆನೂ ಕೊಟ್ಟು ಅವರನ್ನೆಲ್ಲಾ ಬಾಗಿಲ ಬಳಿ ಕೂರಿಸಿ, ನಾನೂ ನನ್ನ ಸ್ನೇಹಿತೆ ಕುಟ್ಟುಂಡೆ ಕುಟ್ಟಲು ಬಂದ್ವಿ.

ಮೊದಲು ಹುಣಸೇ ಹಣ್ಣಿನಲ್ಲಿ ನಾರು, ಬೀಜ ಎಲ್ಲ ತೆಗೆದು ಕ್ಲೀನ್ ಮಾಡಿ ಎರಡು ಸಮಾನಾದ ಉಂಡೆ ಮಾಡಿದೆವು. ಆ ಒಂದೊಂದು ಉಂಡೆನೂ ಜೀರಿಗೆ ಮತ್ತು ಮೆಣಸಿನಪುಡಿಯ (ಸಾರಿನ ಪುಡಿಯ) ಜೊತೆಯಲಿ ಚೆನ್ನಾಗಿ ಕುಟ್ಟಿದೆವು. ನನ್ನ ಪಾರ್ಟ್ನರ್ ಸ್ವಲ್ಪ ರುಚಿ ನೋಡುತೀನಿ ಅಂತ ಸ್ವಲ್ಪ ತಿಂದು ಖಾರ ಮತ್ತು ಜೀರಿಗೆ ರುಚಿ ಚೆನ್ನಾಗಿ ಹತ್ತಿದೆ. ಸ್ವಲ್ಪ ಬೆಲ್ಲ ಹಾಕಿದ್ರೇ ಚೆನ್ನಾಗಿರುತ್ತೆ. ಈ ಮುಂಡೆವು ಸಕ್ಕರೆ ತಂದಿವ್ಯಲ್ಲಾ, ನಾನೇ ಹೋಗಿ ಸ್ವಲ್ಪ ಬೆಲ್ಲ ತರುತ್ತೀನಿ, ನೀನು ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಕುಟ್ಟುತ್ತಿರು. ಮುಗಿದಮೇಲೆ ಎರಡು ಉಂಡೆಯನ್ನು ಬೆರೆಸಿ ಒಟ್ಟಿಗೇ ಕುಟ್ಟೋಣ. ಆಗ ಸ್ವಲ್ಪ ಬೆಲ್ಲನೂ ಹಾಕಿ ಒಟ್ಟಿಗೇ ಕುಟ್ಟೋಣ ಅಂತ ಯೋಜನೆ ಹಾಕಿದೆವು. ಅವಳು ಒಳಗೆ ಹೋಗಿ ಅಡಿಗೆಮನೆಗೆ ಹೋದಾಗ ಅವರ ಅಮ್ಮ ನಮ್ಮ ಅಮ್ಮನ ಹತ್ತಿರ ಮಾತಾಡುವುದು ಕೇಳಿಸಿತು ಅವಳಿಗೆ. ಅವಳ ಅಮ್ಮ ಹೇಳುತ್ತಿದ್ದರಂತೆ: “ಲಲಿತ ಆಟ ಆಡಕ್ಕೆ ಅಂತ ಬಂದು ತುಂಬಾ ಹೊತ್ತಾಯಿತು, ಮಕ್ಕಳನ್ನು ಕರೆದುಕೊಂಡು ಹೋಗಕ್ಕೆ ಅಂತ ಬಂದೆ”. ನಮ್ಮ ಅಮ್ಮ ಹೇಳ್ತಾ ಇದ್ದರಂತೆ: “ಅವೆಲ್ಲ ಹಿತ್ತಲಲ್ಲಿ ಆಟ ಆಡ್ತಿದಾರೆ. ಇನ್ನೇನ್ ಕಾಫಿ ಹೊತಾಯಿತು, ಕಾಫಿ ಕುಡಿದು ಹೋಗುವಿರಂತೆ ಕೂತ್ಕೊಳ್ಳಿ” ಅಂತ. ಲಲಿತಂಗೆ ನಮ್ಮ ಮನೆ ಅಡಿಗೆ ಮನೇಲಿ ಬೆಲ್ಲ ಎಲ್ಲಿದೆ ಅಂತ ಗೊತ್ತಿಲ್ಲದೇ, ಅವರ ಅಮ್ಮ ಬಂದಿರೋ ವಿಷಯ ಗೊತ್ತಾಗಿ, ಬೆಲ್ಲನೂ ತರದೇ ಬೇಗ ನನ್ನಲ್ಲಿಗೆ ಓಡಿ ಬಂದಳು. ಬೆಲ್ಲ ನಿಮ್ಮನೇಲಿ ಎಲ್ಲಿದೇ ಅಂತ ಗೊತ್ತಿಲ್ಲ, ನೀನೇ ಬೆಲ್ಲ ತಗೊಂಡು ಬಾ. ಇಲ್ಲದೇ ಇದ್ರೆ ಸಕ್ಕರೇನೇ ಸಾಕು ಕುಟ್ಟುಂಡೆ ಕುಟ್ಟಿ ಮುಗಿಸೋಣ. ಹೆಚ್ಚೂ ಕಡಿಮೆ ತಡವಾದರೆ ನಾನು ಮನೆಗೆ ಹೋಗ್ಬೇಕಾಗತ್ತೆ ಕುಟ್ಟೂಂಡೇ ತಿನ್ನದೆ ಅಂದಳು.

ನನಗೂ ಅದೇ ಸರಿಯೆನಿಸಿ, ಎರಡು ಉಂಡೆಯನ್ನು ಒಟ್ತಿಗೇ ಸೇರಿಸಿ ಎಲ್ಲವುದರ ಜೊತೆ (ಸಕ್ಕರೆ, ಉಪ್ಪು, ಜೀರಿಗೆ, ಸಾರಿನ ಪುಡಿ)ಚೆನ್ನಾಗಿ ಕುಟ್ಟಿದೆವು ಇಬ್ಬರೂ ಸ್ವಲ್ಪ ಸ್ವಲ್ಪ ಹೊತ್ತು. ಈಗ “ಕುಟ್ಟುಂಡೆ” ರೆಡಿಯಾಯಿತು. ಕರ್ತೃಗಳಿಬ್ಬರೂ ಸಣ್ಣ ಗುಳಿಗೆಯಷ್ಟು ರುಚಿನೋಡಲು ತಿನ್ನುತ್ತಿರುವಾಗ ನಮ್ಮ ತಂಗಿಯರು ಬಾಯಲ್ಲಿ ನೀರೂರಿಸಿಕೊಂಡು, ಬಾಗಿಲು ಕಾಯುವುದನ್ನೂ ಬಿಟ್ಟೂ, ಬಾಗಿಲು ಮುಚ್ಚದೇ ಓಡಿ ಬಂದರು “ನಮಗೆ ಕುಟ್ಟುಂಡೇ”…. ಅಂತ…..

ನಾನು, ಅವರು ಬಾಗಿಲನ್ನೂ ತೆರೆದು ಬರುತ್ತಿರುವುದನ್ನು ನೋಡಿ ನನ್ನ ಗೆಳತಿಗೆ ಹೇಳಿದೆ ” ನೀನು ಅವರಿಗೆಲ್ಲಾ ಸ್ವಲ್ಪ ಗೋಲಿಗಾತ್ರದ ಉಂಡೆ ಮಾಡಿ ಕೊಡು, ನಾನು ಬಾಗಿಲು ಕಾಯುತ್ತೀನಿ. ಆಮೆಲೆ ನಾವಿಬ್ಬರೂ ತಿನ್ನೋಣ” ಅಂತ ಓಡಿದೆ. ನಾನು ಬಾಗಿಲ ಬಳಿ ಹತ್ತಿರ ಬಂದಾಗ ನಮ್ಮ ಅಮ್ಮ ನಡುಮನೆಯಿಂದ ಅಡಿಗೆ ಮನೆಗೆ ಕಾಫಿ ಮಾಡಲು ಬಂದರು. ಏನ್ರೇ ಅದು? ಒಂದ್ ಸ್ವಲ್ಪ ಮಲಗಣ ಅಂದ್ರೇ ಅದೇನ್ ಗಲಾಟೆ ಮಾಡ್ತೀರ? ಬಾಗಿಲು ಹಾಕಿ – ತೆಗೆದು, ಕುಯ್ಯೊ ಮರ್ರೋ ಅನ್ನಿಸುತ್ತಿದ್ದೀರ? ಅಂದರು. ನಾನು “ಅಮ್ಮ, ಲಲಿತ ಅವರ ಅಮ್ಮ ಇನ್ನೂ ಇದಾರಾ ? ಅಂದೆ”. ಕಾಫಿ ಕುಡಿದು ಹೋಗಿ ಅಂದೆ, ಅವರ ಯಜಮಾನ್ರುನೂ ಕಾಫಿಗೆ ಮನೆಗೆ ಬರೋ ಹೊತ್ತಾಯ್ತು ಅಂತ ಹೋದ್ರು. ಲಲಿತಂಗೆ ಹೇಳು ಆಟ ಆಡಿದ್ ಮುಗಿದಿದ್ರೇ ತಂಗೀರನ್ನ ಕರ್ಕೊಂಡು ಮನೆಗ್ ಹೋಗ್ಬೇಕಂತೆ ಅಂತ” ಅಂದ್ರು. ನಾನು ಮನಸಲ್ಲೇ ಅಂದ್ಕೊಂಡೆ ” ಅವೆಲ್ಲಿ ಈಗ್ಲೇ ಮನೆಗ್ ಹೋಗತ್ವೆ? ಇನ್ನೂ ಕುಟ್ಟುಂಡೇನೇ ತಿಂದಿಲ್ಲಾ?” ಅಷ್ಟೊತ್ತಿಗೇ ನಮ್ಮ ಅಜ್ಜಿ ಕಾಫಿ ಕುಡಿಯಕ್ಕೆ (ಮಾಡಕ್ಕಲ್ಲ) ಎದ್ದು ಬಂದರು. “ಕತ್ತಲೆ ಕಾಣೋಲ್ಲ, ಬಾಗಿಲು ತೆಗೆಯೇ” ಅಂದರು. ಹಳೇ ಹಂಚಿನ ಮನೆಯಲ್ಲಿ, ಅದರಲ್ಲೂ ಅಡಿಗೆ ಮನೆಗಳಲ್ಲಿ ಕಿಟಕಿಯೇ ಇರುವುದಿಲ್ಲ. ಹಿತ್ತಿಲ ಬಾಗಿಲು ತೆಗೆಯದೇ ಹೋದರೆ ಕತ್ತಲೇನೇ. ಅಜ್ಜಿಗೆ ಹೇಗೇಗೋ ಸಮಾಧಾನ ಮಾಡಿ” ತೆಗೀತೀನಿ, ತಾಳಜ್ಜಿ, ಇನ್ನೂ ಕಾಫಿ ರೆಡಿ ಇಲ್ಲ, ಇನ್ನೊಂದು ಸ್ವಲ್ಪ ಮಲಕ್ಕೋ ” ಅಂದೆ. ಅಜ್ಜಿ ಬಿಡುತ್ತಾ (ನಮ್ಮಜ್ಜಿ , ಹೇಳಿ -ಕೇಳಿ) “ನಿದ್ದೇನ್ ಬರೋಲ್ಲ, ಸುಮ್ಮನೇ ಮಲಗ್ಬೇಕು ” ಅಂತು. ಇನ್ನೇನಪ್ಪ ಮಾಡೋದು ಅಂತ ಯೋಚಿಸಿ, “ಅಜ್ಜಿ ಇವತ್ತು ನಾನ್ ವಾಕಿಂಗ್ ಕರಕೊಂಡು ಹೋಗ್ತೀನಿ” ಅಂದೆ. ಖುಷಿಯಾಗಿಬಿಡ್ತು. ಯಾಕೆಂದರೆ, ಅಜ್ಜಿನ ವಾಕಿಂಗ್ ಕರೆದುಕೊಂಡು ಹೋಗಕ್ಕೆ ಯಾರೂ ಒಪ್ಪುತ್ತಿರಲಿಲ್ಲ. ಕಾರಣ ಏನು ಅಂದ್ರೇ, ವಾಕಿಂಗ್ ಇಂದ ಮೀಟಿಂಗ್(ವಿವಿಧ ಜನರ) ಆಗಿ, ಟಾಕಿಂಗ್ ಗೆ ಹೋಗಿ, ನೈಲಿಂಗ್ ಉಂಟಾಗಿ, ಕಡೆಗೆ ಪಾತ್ರೆ ಅಂಗಡಿ, ಅಲ್ಲಿಂದ ವೈದ್ಯರ ಅಂಗಡಿ, ಅಲ್ಲಿಂದ ಬಾಯ್ ಫ್ರೆಂಡ್ಸು, ಹೀಗೆ ಹತ್ತು ಹಲವಾರು ಹವ್ಯಾಸಗಳು, ಯಾಕ್ ಹೇಳ್ತೀರ? ಅಂತೂ ಕಡೆಗೆ ನಮ್ಮ ಪುಟಾಣಿ ಏಜೆಂಟ್ಗಳೆಲ್ಲ ಕುಟ್ಟುಂಡೆ ತಿಂತಾ ಬಂದ್ವು ಚಪ ಚಪ ಅಂದ್ಕೊಂಡು. ಸಾರಿ ಸಾರಿ ಹೇಳಿದ್ವಿ ” ಮುಚ್ಕೊಂಡು ತಿನ್ನಿ, ಚಪ ಚಪ ಅಂತ ಶಬ್ಧ ಮಾಡ್ ಕೊಂಡು ಚೀಪ್ ಬೇಡಿ” ಅಂತ. ಅದ್ರೇನು, ಎಲ್ಲ ತಲೆಗೆ ಹೋಗಿ ಕೆಳಕ್ ಬಿದ್ದಿತ್ತು. ನಾನು ಬಾಗಿಲು ತೆಗೆದು ಅಜ್ಜಿಗೆ, “ಗಾಳಿ ಅಜ್ಜಿ, ದೂಳ್ ಬರ್ತಾ ಇದೆ, ನೀ ಒಳಗೇ ಇರು ಅಂತ ಹೇಳಿ ಲಲಿತನ ಹತ್ತಿರ ಬಂದೆ. “ಸಾಕಮ್ಮ, ಈ ಕುಟ್ಟುಂಡೆ ಕಥೆ, ಆಯ್ತಲ್ಲಾ, ನಿನ್ ಮಕ್ಕಳನ್ನ ಕರೆದ್ಕೊಂಡು ಮನೆಗೆ ಹೋಗು ” ಅಂದೆ. “ನನ್ನ ಮಕ್ಕಳು?, ನಿನ್ನ ಮಕ್ಕಳು ವಿಷಯ ಹೇಳ್ತಾ ಇದೀಯಾ?” ಅಂದಳು. ಅವರನ್ನ ನಾನ್ ನೋಡ್ಕೋತೀನಿ, ನಿನ್ ತಂಗಿಯರನ್ನ ಕರ್ಕೊಂಡು ಹೋಗು ಅಂತ ಕಳಿಸ್ದೆ. ಲಲಿತ, ;”ಏ ಕಾಫಿ ವಾಸನೆ ಬರ್ತಾ ಇದೆ, ಕುಟ್ಟುಂಡೆ ತಿಂದು ಕಾಫಿ ಕುಡುದ್ರೇ ಚೆನ್ನಾಗಿರುತ್ತೆ” ಅಂದಳು. “ನಿಮ್ಮ ಅಮ್ಮನೂ ಕಾಫಿ ಮಾಡಕ್ಕೆ ಮನೆಗೆ ಹೋದ್ರಂತೆ, ನೀ ಮನೆಗೇ ಹೋಗಿ ಕುಡಿ” ಅಂದೆ. ಫೈನಲೀ ಅವರೆಲ್ಲ ಜಾಗ ಖಾಲಿ ಮಾಡಿದ್ರು.

ನನ್ನ ತಂಗಿಯರನ್ನ ಹಿತ್ತಲಿಗೆ ಕರೆದುಕೊಂಡು ಹೋಗಿ ” ಇಲ್ಲೇ ಪೂರ್ತಿ ತಿಂದು ಮನೆ ಒಳಗೆ ಹೋಗಿ, ಆಮೇಲ್ ಗೊತ್ತಲ್ಲಾ, ರಾತ್ರಿ “ಟೊಯೋ, ಟೊಯೋ ಅಂತ ಕೆಮ್ಮೋ ಹಾಗಿಲ್ಲ, ಕೆಮ್ಮು ಬಂದರೂ ತಡಕೋ ಬೇಕು. ತಡೆಯಕ್ಕಾಗದಿದ್ದರೆ, ಬಚ್ಚಲು ಮನೆಗೆ ಹೋಗಿ ಬಾಯಿ ತೊಳೆದು ನೀರು ಕುಡೀರಿ. ಅಣ್ಣ ಕೆಮ್ಮು ಯಾಕೆ ಅಂದ್ರೇ? “ಮೀನ ಕುಟ್ಟುಂಡೆ ಮಾಡಿದ್ಲು” ಅಂತ ಮಾತ್ರ ಹೇಳಲೇ ಕೂಡದು” ಅಂತ ಮನೆದಟ್ಟು ಮಾಡಿಸಿದೆ. ಈಬ್ಬರೂ ಕುಟ್ಟುಂಡೆ ತಿಂತಾ ಅದೇನ್ ಕೇಳಿಸಿಕೊಂಡ್ರೋ ಏನೋ, ಕೋಲೇಬಸವನ ತರ ಮೇಲಿಂದ ಕೆಳಗಿನವರೆಗೂ ತಲೆ (ಆ ಕ್ಷಣದಲ್ಲಿ ಇತ್ತೋ ಇಲ್ವೋ ಗೊತ್ತಿಲ್ಲ) ಒಗೆದರು. ಆಮೇಲೆ, ರಾತ್ರಿಯ ನಾಟಕವನ್ನು ತೆರೆಯಮೇಲೆ ನೋಡಿ ಆನಂದಿಸಿರಿ…..ಮರೆಯಬೇಡಿ, ಮರೆತು ನಿರಾಶರಾಗದಿರಿ…”ಕುಟ್ಟುಂಡೆ”….!!!!!!

Posted in ಪ್ರಭಂದ ! | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ನಾರಾಯಣ ದರುಶನ!

ಕಡೂರಿನ ದಿನಗಳು – ನಾರಾಯಣ ದರುಶನ!

December 12, 2012 ..(12/12/12)

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಪ್ರತಿ ಸಂಜೆ ಕತ್ತಲಾಗುವವರೆಗೂ ಆಡುವ ಕಾಲ, ಸೆಲ್ ಫೋನ್, ಲ್ಯಾಪ್ಟಾಪ್, ಟಿವೀ ಗಲಾಟೆಗಳಿಲ್ಲದಕಾಲ. ನಾನೂ, ನನ್ನ ಗೆಳತಿಯರು, ಅಕ್ಕ ತಂಗಿಯರೂ ಆಟ ಆಡಿದ್ದೇ ಆಡಿದ್ದು. ಕುಂಟಪಿಲ್ಲಿ, ಓಡಾಟ ಬಾಲಾಟ, ಹಗ್ಗದಾಟ ಹೀಗೆ ಹಲವಾರು. ಅಂದು ಒಂದು ದಿನ ಹೀಗೇ ಆಟ ಆಡಿ ಸುಸ್ತಾಗಿ ಬಾಯಾರಿಕೆ ಆಗಿ ಇನ್ನೇನು ಮನೆ ಸೇರಬೇಕು ಅಂತಿದ್ದು ಮೈದಾನದಿಂದ ಮನೆಯ ಹಿತ್ತಲಿನ ಬಾಗಿಲ ಹತ್ತಿರ ಬಂದೆ. ನನ್ನ ಗೆಳತಿ ಲಕ್ಷ್ಮಿನೂ ನನ್ನೊಡನೆ ನಮ್ಮ ಮನೆಗೆ ಬಂದಳು ನೀರು ಕುಡಿದು ಮನೆಗೆ ಹೋಗುವ ಅಂತೆನಿಸಿ. ಹಿತ್ತಲಿನ ಬಾಗಿಲ ಮುಂದೆ ನಮ್ಮಜ್ಜಿ ಸಣ್ಣ ಇಬ್ಬರು ಹುಡುಗರ ಜೊತೆ (ನಮಗಿಂತ ಸ್ವಲ್ಪ ದೊಡ್ಡವರಿರಬೇಕು) ಸಂಭಾಷಣೆ ನಡೆಸಿತ್ತು. ಕೈಯಲ್ಲಿ ಒಂದು ನಾರಯಣ ವಿಗ್ರಹ ಹಿಡಿದು ಅವರೊಡನೆ ಚೌಕಾಸಿ ಮಾಡುತ್ತಿತ್ತು. ನಾಲ್ಕಾಣೆ ಕೊಟ್ಟು, ಸಾಕು ನಡೆಯೋ, ನಿನಗಿನ್ನೆಷ್ಟು ದುಡ್ಡು ಬೇಕು ಅಂತ. ಕೈಯಲ್ಲಿ ನಾರಾಯಣನನ್ನು ಇಟ್ಟುಕೊಂಡು “ತುಂಬಾ ಚೆನ್ನಾಗಿದೆ ಈ ವಿಗ್ರಹ, ಎಷ್ಟು ಸುಂದರವಾಗಿದೆ, ನಗುವಾದ ಮುಖ ಅಂತ ಹೇಳಿ ಆನಂದ ಪಡುತ್ತಿತ್ತು. ನಾವಿಬ್ಬರೂ ಅಜ್ಜಿಯ ಹತ್ತಿರ ಹೋಗಿ ಅಜ್ಜಿ ಕೈಯಲ್ಲಿದ್ದ ಆ ವಿಗ್ರಹವನ್ನ ನೋಡಿದೆವು. ಅಜ್ಜಿಗೆ ನಾರಾಯಣ ದರುಶನ ಕೊಟ್ಟಿದ್ದ, ಅದನ್ನು ಸಂಭ್ರಮದಿಂದ ಆನಂದಿಸುತಿತ್ತು. ಆ ಹುಡುಗರು ನಾಲ್ಕಾಣೆ ಸಾಲದಜ್ಜಿ ಇನ್ನೂ ನಾಲ್ಕಾಣೆ ಕೊಡಿ ಅಂತ ಪೀಡಿಸುತ್ತಿದ್ದರು. ಅಜ್ಜಿ ಸ್ವಲ್ಪ ಸ್ವಲ್ಪನೇ ಚಿಲ್ಲರೆ ಕೊಟ್ಟು, ೫, ೧೦ ಪೈಸೆ ಕೊಟ್ಟು ಸಮಾಧಾನ ಮಾಡುತ್ತಿತ್ತು. ಆ ಹುಡುಗರು ಜಾಸ್ತಿ ದುಡ್ಡು ಕೇಳುತ್ತಲೇ ಇದ್ದರು.

ಆ ಹುಡುಗರು ಕೂಲಿ ಮಾಡಿ, ಬೇಡಿ ತಿನ್ನುವ ಮಕ್ಕಳು. ಹೀಗೇ ಸಂತೆ ಮಳದಲ್ಲಿ ಆಟ ಆಡುತ್ತಿದ್ದಾಗ, ಮಣ್ಣಿನ ಗುಂಡಿ ತೋಡುವಾಗ, ಯಾರೋ ಮರದ ಕೆಳಗೆ ಹೂತಿಟ್ಟ ಈ ನಾರಾಯಣ ವಿಗ್ರಹ (ಸಣ್ಣದು ), ಮತ್ತಿನ್ನೇನೋ ದೇವರ ಸಾಮಾನು ಸಿಕ್ಕಿತ್ತು. ಆಟವಾಡುವುದನ್ನೂ ನಿಲ್ಲಿಸಿ ತಕ್ಷಣ ಅದನ್ನು ಮಾರಲು ಕೇರಿಗೆ ಬಂದವು. ನಮ್ಮ ಮನೆ ಸಂತೆ ಎದುರಿಗೇ ಇದ್ದ ಕಾರಣ ಅಜ್ಜಿ ಕಣ್ಣು ತಪ್ಪಿಸಿ ಯಾರೂ ಹಾಯುವ ಹಾಗಿರಲಿಲ್ಲ. ಅಜ್ಜಿಗೂ ಅನುಮಾನ ಬಂದಿತ್ತು, ಇವು ಯಾರ ಮನೇದೋ ದೇವರನ್ನು ಕದ್ದಿವೆ ಎಂದು. ಆದರೆ ನಾರಾಯಣ ಮೈಪೂರ್ತಿ ಮಣ್ಣು ಅಂಟಿದ್ದರಿಂದ ಎಲ್ಲೋ ನೆಲದಲ್ಲಿ ಸಿಕ್ಕಿದೆ ಅಂತ ಖಚಿತವಾಗಿತ್ತು. ನಮಗೂ ಅಜ್ಜಿ ನಾರಯಣನನ್ನು ತೋರಿಸಿ, “ಎಷ್ಟು ಸುಂದರವಾದ ನಗು ಮುಖ ಈ ಮೂರ್ತಿದು” ಅಂತ ಖುಷಿ ಪಡುತ್ತಿತ್ತು. ಆದರೆ ಈ ನಾರಾಯಣ ಅಜ್ಜಿಗೆ ದಿವ್ಯ ದರ್ಶನ ಕೊಟ್ಟು ಓಡುತ್ತಾನೆ ಎಂಬ ಯಾವ ಸಂಶಯವೂ ಅಜ್ಜಿಗೆ ಬರಲಿಲ್ಲ. ಲಕ್ಷ್ಮಿ ಈ ವಿಗ್ರಹವನ್ನು ಒಂದೇ ಸಮ ಕುತೂಹಲದಿಂದ ನೋಡಿ ನುಡಿದಳು “ಅಜ್ಜೀ, ಈ ನಾರಾಯಣ ದೇವರು ಮಂಜಣ್ಣನ ಮನೇದು ಇದ್ದ ಹಾಗಿದೆ ( ಅವಳ ಚಿಕ್ಕಪ್ಪ) ಎಂದು, ಓಡಿ ಹೋಗಿ ಮಂಜಣ್ಣನ ಕರೆದೇ ತಂದಳು. ಅಷ್ಟರಲ್ಲಿ ಅಜ್ಜಿ ಆ ಹುಡುಗರಿಗೆ ಎಂಟು ಆಣೆ ಕೊಟ್ಟು, ಇನ್ನಿಲ್ಲ ನಡೀರಿ ಅಂತ ಹೇಳುತ್ತಿತ್ತು. ಆ ಹುಡುಗರು, ಮಂಜಣ್ಣ ಬರುವುದನ್ನು ನೋಡಿ, ಇನ್ನು ಅವರನ್ನು ಕಳ್ಳರು ಅಂತಾರೆ ಎಂದೆಣಿಸಿ ಓಟ ಶುರು ಮಾಡಿದರು.

ಅಜ್ಜಿ ಕೈಯಲ್ಲಿ ನಾರಾಯಣನನ್ನು ಇಟ್ಟುಕೊಂಡು ನೋಡಿದ್ದೇ ನೋಡಿದ್ದು. ಮಂಜಣ್ಣನ ಮನೆಗೆ ವರುಷಗಳ ಹಿಂದೆ ಕಳ್ಳರು ಕನ್ನ ಹಾಕಿ ಕೆಲವು ವಸ್ತುಗಳನ್ನೂ ಮತ್ತು ಒಡವೆಗಳನ್ನೂ ಕದ್ದು, ಸಂತೆ ಮಳದಾಚೆಗೆ ಓಡಿ ಅವಿತಿಟ್ಟುಕೊಂಡು, ದೇವರ ವಿಗ್ರಹಗಳನ್ನು, ಅಲ್ಲೇ ಮರದ ಅಡಿಯಲ್ಲಿ ಹೂತು ( ಆಮೇಲೆ ರಾತ್ರಿ ಬಂದು ಕೊಂಡೊಯ್ಯುವ ಯೋಜನೆ ಹಾಕಿಕೊಂಡು) ತಪ್ಪಿಸಿಕೊಂಡು ಓಡಿದ್ದರು. ಮಂಜಣ್ಣ ಓಡಿ ಬಂದು, “ಅಜ್ಜಿ ಕಳ್ಳ ಸಿಕ್ಕಿದ್ನಾ? ಎಲ್ಲಿ ಆ ಹುಡುಗರು ಅಂತ ಅವರನ್ನ ಹಿಡಿದು, ಅವರು ಕಳ್ಳರಲ್ಲ, ಅವರಿಗೆ ಈ ವಿಗ್ರಹ ಮತ್ತು ಕೆಲವು ಸಣ್ಣ ದೇವರ ವಸ್ತುಗಳು ಮರದಡಿಯಲ್ಲಿ ಸಿಕ್ಕಿದ್ದಷ್ಟೇ ಆಟ ಆಡುವಾಗ ಎಂಬುದನ್ನು ಖಚಿತಪಡಿಸಿ, ಆ ಮಕ್ಕಳನ್ನು ಬಿಟ್ಟು ಅಜ್ಜಿಯಲ್ಲಿಗೆ ನಡೆದು ಬಂದರು. ಅಜ್ಜಿ ಆಗತಾನೆ ದೇವರನ್ನು ತೊಳೆದು ಇನ್ನೇನು ದೇವರಮನೆಯಲ್ಲಿ ಇಡಬೇಕು ಅಂತಿರುವಾಗ ಮಂಜಣ್ಣ “ಅಜ್ಜಿ, ನಮ್ಮನೆ ದೇವರು ಅದು, ಕೊಡಿ ಅಂದರು”. ಅಜ್ಜಿ “ಹೋಗಲಿ ಬಿಡು ಮಂಜಣ್ಣ, ಎಲ್ಲಿದ್ದರೇನು ಅಂತ ಸಮಾಧಾನ ಹೇಳಲು ಯತ್ನಿಸಿತು”. ಆದ್ರೇ ಮಂಜಣ್ಣ ನಾರಾಯಣನ ಇಸ್ಕೊಂಡೇ ಬಿಟ್ರು. ಆಮೇಲೆ ಅಜ್ಜಿ “ನಾನು ಆ ಹುಡುಗ್ರುಗೆ ದುಡ್ಡು ಕೊಟ್ಟಿ ತಗೊಂಡಿದೀನಿ ಅಂತು”. ಮಂಜಣ್ಣ ಆ ಎಂಟಾಣೆನೂ ಅಜ್ಜಿಗೆ ಕೊಡದೇ ನಾರಾಯಣನನ್ನು ಸ್ವತ್ತಿಗೆ ಹಾಕ್ಕೊಂಡರು. ಲಕ್ಷ್ಮಿಗೆ ಹೆಮ್ಮೆಯೋ ಹೆಮ್ಮೆ “ಡೆಟೆಕ್ಟೀವ್” ಕೆಲಸ ಮಾಡಿ ಅದೂ ಯಶಸ್ವಿಯಾಯಿತು ಅಂತ. ಒಟ್ಟಿನಲ್ಲಿ ಅಜ್ಜಿಗೆ “ನಾರಾಯಣ ದರುಶನ” ಕೊಟ್ಟು ಮಾಯವಾಗಿದ್ದು ಹೀಗೆ. ಅಜ್ಜಿಗೆ ಕೈಗೆ ಬಂದಿದ್ದು ಬಾಯಿಗೆ ಬಂದಿರಲಿಲ್ಲ. ಮಂಜಣ್ಣನಿಗೆ ಅವರ ದೇವರು ದಕ್ಕಿತ್ತು. ಹುಡುಗರಿಗೆ ಎಂಟಾಣೆ ಗಿಟ್ಟಿತ್ತು. ನನಗೊಂದು ಅನುಭವ ಕಥನ ಮನಸಲ್ಲಿ ಬರೆಸಿತ್ತು. “ಓಂ ನಮೋ ನಾರಾಯಣಾಯ” ಇಗೋ.. ಅಕ್ಷರ ಸ್ವರೂಪ!

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ಕಾಣೆಯಾದ ಕಾಗದಗಳು!

ಕಾಣೆಯಾದ ಕಾಗದಗಳು !!!

rasikathe's picture
February 7, 2012 – 6:10am

ಕಾಣೆಯಾದ ಕಾಗದಗಳು

ಕಾಗದಗಳು ! ಅರ್ಥಾತ್ ಕಾಗದದ ಕಾಗದಗಳು (ಪೇಪರ್ ಲೆಟರ್ಸ್) ಮರೆಯಾಗಿ ಹೋಗಿವೆ. ಈ- ಪತ್ರಗಳ ಕಾಟದಿಂದ ಅವುಗಳು ಔಟ್ ಡೇಟೆಡ್ ಆಗಿ ಸತ್ತು ಹೋಗಿವೆ. ಅದನ್ನು ನೆನೆಸಿಕೊಂಡರೆ ಒಂದು ತರಹ ವ್ಯಥೆಯಾಗುವುದಷ್ಟೇ ಅಲ್ಲ, ಭಾವುಕತೆ ಕಟ್ಟೆ ಒಡೆದು ಕಣ್ಣಿನಲ್ಲಿ ನೀರೇ ಬರುತ್ತೆ. ಕಾಗದಗಳು ಎಷ್ಟೊಂದು ಎಮೋಶನಲ್ ಅಂದರೆ, ನೀವು ಹಳೆಯದೊಂದು ಪತ್ರವನ್ನು ಓದಿ ನೋಡಿ, ಆಗ ಅನುಭವವಾಗುತ್ತೆ. ಕೈಬರಹದಿಂದ ಬರೆದ ಕಾಗದಗಳು ವಿಷಯವಷ್ಟೇ ಅಲ್ಲ,  ಭಾವನೆಗಳನ್ನು ಕಟ್ಟಿ, ಒದುವಾಗ ಒಂದು ದೃಶ್ಯವನ್ನೇ ತರಿಸುವಂತಹ ಶಕ್ತಿಯನ್ನು ಹೊಂದಿರುತ್ತಿದ್ದವು. ಮನಸ್ಸಿನ ಮೇಲೆ ಪರಿಣಾಮ ಬೀರುವುದರಲ್ಲೂ ಯಶಸ್ವಿಯಾಗಿದ್ದವು. ಕಾಗದಗಳ ನೆನಪಿನ ದಾರಿಯಲ್ಲಿ ಪಯಣಿಸಿದಾಗ……..

ಅಣ್ಣನಿಗೆ ಅಂಚೆಯವನು ಮನೆ ಹತ್ತಿರ ಬಂದು ಪತ್ರ ಕೊಡುವರೆಗೂ ಸಮಾಧಾನವಿರಲಿಲ್ಲ. ನಮ್ಮಲ್ಲಿ ಯಾರನ್ನಾದರೂ ಪೋಸ್ಟ್ ಆಫೀಸ್ ಗೆ ಕಳಿಸಿ ಪತ್ರ ತರಿಸಿಕೊಳ್ಳುತ್ತಿದ್ದರು. ನಮ್ಮ ಅಕ್ಕ ಬೇರೆ ಊರಿಗೆ ಕಾಲೇಜ್ಗೆಂದು ಹೋದಾಗಲಂತೂ, ವಾರಕ್ಕೊಂದು ಕಾಗದ ಬರೆದು ಯೋಗಕ್ಷೇಮ ತಿಳಿಸಬೇಕೆಂದು ಹೇಳಿದ್ದರಿಂದ ವಾರಕ್ಕೊಂದಾದರೂ ಪತ್ರ ಬರುತ್ತಿತ್ತು. ಹೀಗೆ ಒಂದಲ್ಲ ಒಂದು ಪತ್ರಗಳು ಇದ್ದೇ ಇರುತ್ತಿದ್ದವು. ಒಂದು ರೀತಿಯ ಕುತೂಹಲ ಬೆಳಗ್ಗೆ ೮ ಗಂಟೆಯಾದಾಗ ಯಾವ ಪತ್ರ ಬರತ್ತೆ ಇವತ್ತು ಅಂತ?. ಪರೀಕ್ಷೆ ಫಲಿತಾಂಶ ಕ್ಕೆ ಕಾಯುವಾಗಲಂತೂ ( ಕಾಲೇಜ್ ನಲ್ಲಿ ಓದುವಾಗ) ತುಂಬಾ ತಮಾಷೆಗಳಾಗುತ್ತಿತ್ತು. ಸರಿಯಾದ ಸಮಯಕ್ಕೆ ಪತ್ರ ಬರಲಿಲ್ಲ ಅಂದರೆ, “ಎಲ್ಲೋ ಫೇಲ್ ಆಗಿರಬೇಕು, ಅದನ್ನೇನ್ ತಿಳಿಸೋದು ಅಂತ ಪತ್ರ ಬರೆದಿಲ್ಲ” ಅಂತ ಯಾರಾದರು ಶುರು ಮಾಡ್ತಾ ಇದ್ದರು. ಕೆಲವು ಸಲ ಮಕ್ಕಳು ಕಾಗದ ಬರೆದಿದ್ದರೆ, “ನಮಸ್ಕಾರ” ಬರೆಯುವ ಜಾಗದಲ್ಲಿ “ಆಶೀರ್ವಾದ” ಅಂತ ಬರೆದಿರುವುದು ಮತ್ತು ಕೆಲವು ಶಾರ್ಟ್ ಫಾರ್ಮ್ ಗಳು “ಮಾತೋಶ್ರೀ” ಅಂತ ಪೂರ್ತಿ ಹೇಳುವ ಬದಲು “ಮಾರವರು” ಅಂತ ಬರೆಯುವುದು ಎಲ್ಲ ರೂಢಿಯಲ್ಲಿತ್ತು. ಕೆಲವು ಸಲ ಮನಿ ಆರ್ಡರ್, ಚೆಕ್ ಬರುವುದಿದ್ದಾಗಂತೂ, ದಿನಾ ಮೈಲ್ ಗೆ ಕಾದು ಕುಳಿತಿರುವುದು, ಹೀಗಿತ್ತು ಆ ದಿನಗಳು.

ಪೋಸ್ಟ್ ಆಫೀಸ್ ಹತ್ತಿರ ಗುಂಪು ಗುಂಪಾಗಿ ಜನ ಕಾದು ಕುಳಿತಿರುತ್ತಿದ್ದರು. ಅಂಚೆಯವನು ಎಲ್ಲ ಪತ್ರಗಳನ್ನು ತನ್ನ ದೊಡ್ದ ಅಂಚೆ ಚೀಲಕ್ಕೆ ಹಾಕಿಕೊಂಡು, ಕೈಯಲ್ಲಿ ಕೆಲವು ಹಿಡಿದು ಕಟ್ಟಡದಿಂದ ಹೊರಗೆ ಬಂದು ಅಲ್ಲೇ ಜಗುಲಿಯ ಮೇಲೆ ಕೂತು “ಎಲ್ಲರಿಗೂ ನಿಮ್ಮ ಪತ್ರಗಳನ್ನು ಕೊಡುತ್ತೇನೆ, ಸ್ವಲ್ಪ ಗಲಾಟೆ ಮಾಡೆಬೇಡಿ ಅಂತ ಹೇಳಿ ” ಪೇಟೆ ಸೂರಿ”, “ಕೋಟೆ ಶೇಷಗಿರಿ”, ರಂಗೇ ಗೌಡ್ರು, ತಿಮ್ಮಾಪ್ಪಯ್ಯ, ಅಂಗಡಿ ಶಂಕ್ರು, ಕರಿಯಪ್ಪ, ಅಂತ ಕರೆದು, ಕರೆದು ಎಲ್ಲರಿಗು ಅವರವರ ಪತ್ರಗಳನ್ನು ಕೊಡುವುದು ಒಂದು ತರ “ಕಡ್ಲೇ ಪುರಿ” ಹಂಚಿದಹಾಗಿತ್ತು. ಕಡೆಗೆ ಗುಂಪೆಲ್ಲ ಕದರಿದಾಗ, ಕಡಿಮೆಯಾದಾಗ ನಮ್ಮನ್ನೆಲ್ಲ ( ಹುಡುಗಿಯರನ್ನೆಲ್ಲ) ಕೇಳುತ್ತಿದ್ದ: “ನಿಮ್ಮಪ್ಪ ಬರಲಿಲ್ವಾ ಇವತ್ತು, ಅವರು ನೋಡುತ್ತಿದ್ದ ಪತ್ರ ಇವತ್ ಬಂದಿದೆ ಅಂತ ನಮಗೆ ಕೊಟ್ಟು ಆಮೇಲೆ ಸೈಕಲ್ ಹತ್ತಿ ಮಿಕ್ಕ ಪತ್ರಗಳನ್ನು ಹಂಚಲು ಹೋಗುವ. ಅರ್ಧದಷ್ಟು ಪತ್ರಗಳು ಅಲ್ಲೇ ಖಾಲಿಯಾಗುತ್ತಿತ್ತು. ಆಮೇಲೆ ಸಂಧಿ ಗೊಂದಿಯಲ್ಲಿ ನುಸುಳಿ ಎಲ್ಲರಿಗೂ ಅವರವರ ಅಪತ್ರಗಳನ್ನು ತಲುಪಿಸುತ್ತಿದ್ದ. ಅವನ ಕೆಲಸ ಏನು ಸುಲಭ ಅಲ್ಲ, ಕೆಲವು ಸಲ ಪೂರ್ತಿ ವಿಳಾಸವೇ ಇರುತ್ತಿರಲಿಲ್ಲ ಲಕೋಟೆಯ ಮೇಲೆ. ಬೆಂಗಳೂರಿಂದ ಬರೆದವ್ರೆ “ಹೆಸರೇ ಬರೆದಿಲ್ಲ” ಚೆನ್ನಪ್ಪನ ವಠಾರ ಅಂತಷ್ಟೇ ಬರೆದಿದ್ದರೆ, ನಿಮಗೇನಾದ್ರೂ ಗೊತ್ತಾಗತ್ತ ಅಂತ ನಮಗೂ ತೋರಿಸುತ್ತಿದ್ದ. ವಠಾರದಲ್ಲಿ ಎಲ್ಲರಿಘು ಒಂದ್ ರೌಂಡ್ ತೋರಿಸಿ ಕಡೆಗೆ ತಲುಪಬೇಗಾದವರಿಗೆ ತಲುಪಿಸುತ್ತಿದ್ದ. ಇದನ್ನೆಲ್ಲ ನೆನೆಸಿಕೊಂಡರೆ ನಮ್ಮ ಭಾರತದ ಮೈಲ್ ಮನ್ ಅಷ್ಟು ಶ್ರದ್ಧೆವಹಿಸಿ ಪ್ರಪಂಚದಲ್ಲಿ ಯಾವ ದೇಶದ ಅಂಚೆಯವನೂ ಕೆಲಸ ಮಾಡುವುದಿಲ್ಲ. ಪೂರ್ಣ ವಿಳಾಸವಿದ್ದೇ ಇಲ್ಲಿ (ಅಮೇರಿಕಾದಲ್ಲಿ) ಮೈಲ್ ಗಳು ಮಿಸ್ ಆಗುತ್ತಿರುತ್ತೆ. ಕಾಗದಗಳ ಮಜವೇ ಬೇರೆ. ಕಾಗದ ಬರೆಯುವ ಶೈಲಿ, ಓದುವ ಧಾಟಿ, ಅವುಗಳು ತರುವ ಮನೋಲ್ಲಾಸ ಎಲ್ಲ ಒಂದು ತರಹ ಮನೋರಂಜನೆಯ ವಸ್ತುವಾಗಿತ್ತು. ಹಳೆಯ ಪತ್ರಗಳನ್ನು ಗಟ್ಟಿಯಾಗಿ ಶೇಕರಿಸಿಡಿ. ಇನ್ನು ಮುಂದೆ ಅವುಗಳು ಸಿಗುವುದಿಲ್ಲ. “ಅಪರೂಪದ ಅಮೂಲ್ಯವಾದ ಆಸ್ತಿ” ಎಂದರೆ ತಪ್ಪಾಗಲಾರದು !!!

Posted in ಲೇಖನ ! | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಮಕ್ಕಳ ಆರೋಗ್ಯ…..೨ ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್!

ಮಕ್ಕಳ ಆರೋಗ್ಯ…..೨ ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್!

rasikathe's picture
ಕ್ಯಾಲಿಫೋರ್ನಿಯ
October 28, 2011 – 11:36am
ಮಕ್ಕಳ ಆರೋಗ್ಯ.....೨  ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್!

ಮಕ್ಕಳ ಆರೋಗ್ಯ…..೨

ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್!

ಗರ್ಭಿಣಿಯಾದಾಗ ಸರಿಯಾದ ಆಹಾರ ಸೇವಿಸಬೇಕು, ಮಗುವಿನ ಬೆಳವಣಿಗೆ ಮತ್ತು ಆರೋಗ್ಯ ಚೆನ್ನಾಗಿರುವುದಕ್ಕೆ. ಮಗುವಿನ ಎಲ್ಲಾ ತರಹ ಬೆಳವಣಿಗೆ, ಉತ್ತಮವಾದ ಭೌತಿಕ (ಫಿಸಿಕಲ್) ಮತ್ತು ಮಾನಸಿಕ ಬೆಳವಣಿಗೆಗಳಿಗೆ ಪೌಷ್ಟಿಕವಾದ ಆಹಾರ ಅತ್ಯವಶ್ಯಕ. ಅಷ್ಟೇ ಅಲ್ಲದೆ, ಯಾವುದೇ ತರಹ ಟಾಕ್ಸಿಕ್ ಅಂಶಗಳನ್ನೂ ಸೇವಿಸಬಾರದು( ಆಲ್ಕೋಹಾಲ್, ಸಿಗರೇಟ್, ಡ್ರಗ್ಸ್(ಹಿರೋಯಿನ್, ಆಮ್ಫೆಟಮಿನ್ ಮುಂತಾದವು). ಇದರಿಂದ ಬೆಳೆಯುವ ಮಗುವಿನ ಮೇಲೆ ದುಶ್ಪರಿಣಾಮ ಉಂಟಾಗಿ ಮಗುವಿಗೆ ಬುದ್ಧಿ ಮಾಂದತೆ ( ಮೆಂಟಲ್ ರಿಟಾರ್ಡೇಶನ್), ಅಂಗಾಂಗಗಳ ಕೊರತೆ, ಮತ್ತು ಬೌತಿಕ ಬೆಳವಣಿಗೆಯ ಕೊರತೆ, ಇನ್ನೂ ಮುಂತಾದ ದುಶ್ಪರಿಣಾಮಗಳು ಆಗುವ ಸಾಧ್ಯತೆ ಹೆಚ್ಚಾಗಿರುತ್ತೆ.

ಗರ್ಭಿಣಿಯಾದಾಗ ಆಲ್ಕೋಹಾಲ್ ಸೇವಿಸುವುದರಿಂದ ಮಗುವಿಗೆ ಉಂಟಾಗುವ ಒಂದು ಸಿಂಡ್ರೋಮ್ ಗೆ “ಫೀಟಲ್ ಆಲ್ಕೋಹಾಲ್” ಎಂದು ಹೆಸರು. ಯಾವುದೇ ತರಹ ಆಲ್ಕೋಹಾಲ್, ಎಷ್ಟೇ ಪ್ರಮಾಣದ್ದಾದರೂ ಮಗುವು ಇದಕ್ಕೆ ತುತ್ತಾಗಬಹುದು. ಒಂದು ಸಂಶೋಧನೆಯ ಪ್ರಕಾರ ಗರ್ಭಿಣಿಯಾದಾಗ ….
ದಿನಕ್ಕೆ ಒಂದಕ್ಕಿಂತ ಹೆಚ್ಚಾಗಿ ೧.೫ ಔನ್ಸ್ ಡಿಸ್ಟಿಲ್ಡ್ ಸ್ಪಿರಿಟ್, ಅಥವಾ ೫ ಔನ್ಸ್ ವೈನ್, ಅಥವಾ ೧೨ ಔನ್ಸ್ ಬಿಯರ್ ಯಾವುದೇ ಸೇವಿಸಿದರೂ ಹುಟ್ಟುವ ಮಗುವಿಗೆ “ಫೀಟಲ್ ಆಲ್ಕೋಹಾಲ್ ಸಿನ್ಡ್ರೋಮ್ ಬರುವ ಸಾಧ್ಯತೆ ಇರುತ್ತದೆ (ಮಿಲ್ಸ್ ಸಂಶೋಧನೆ).

ಫೀಟಲ್ ಆಲ್ಕೊಹಾಲ್ ಸಿನ್ಡ್ರೋಮ್ ಲಕ್ಷಣಗಳೇನು? …..
ಬುದ್ಧಿ ಮಾಂದ್ಯತೆ, ಭೌತಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಕುಂದು, ಕೊರತೆ,  ಮೈಕ್ರೋಕೆಫಾಲಿ ( ಸಣ್ಣ ತಲೆ ಮತ್ತು ಮೆದುಳು), ಹೈಪೋಟೋನಿಯ ( ಮಸಲ್ ನಿಶ್ಯಕ್ತಿ), ಮೋಟಾರ್ ಮತ್ತು ಸ್ಪೀಚ್ ಡಿಲೇ ( ಮಾತಿನ ಬೆಳವಣಿಗೆ, ಮತ್ತು ನಡೆಯುವುದು, ಓಡುವುದು ಮುಂತಾದ ಮಸಲ್ ಆಕ್ಟಿವಿಟೀಸ್ ನಲ್ಲಿ ಹಿಂದುಳಿಯುವಿಕೆ), ಕಾರ್ಡಿಯಕ್ ಡಿಫೆಕ್ಟ್ಸ್, ( ಹೃದಯದಲ್ಲಿ ಬೆಳವಣಿಗೆ ಮತ್ತು ಕಾರ್ಯಗಳ ಕೊರತೆಗಳು), ಬಿಹ್ಯಾವಿಯರಲ್ ತೊಂದರೆಗಳು ( ಅಂದರೆ ಹೈಪರ್ ಆಕ್ಟಿವಿಟಿ, ಅಟೆನ್ಶನ್ ಪ್ರಾಬ್ಲಮ್, ಸೋಶಿಯಲ್ ರಿಲೇಶನ್ಶಿಪ್ ಪ್ರಾಬ್ಲಮ್ಸ್…ಒಂಟಿತನ, ಬೇರೇ ಮಕ್ಕಳೊಂದಿಗೆ ಹೊಂದಾಣಿಕೆ ಇಲ್ಲದಿರುವುದು ಮುಂತಾದವುಗಳು), ಕಿವಿ ಮತ್ತು ಕಣ್ಣುಗಳ ಬೆಳವಣಿಗೆ ಮತ್ತು ನೋಟ ಮತ್ತು ಶ್ರವಣಗಳ ತೊಂದರೆಗಳು, ಮೆಂಟಲ್ ರಿಟಾರ್ಡೇಶನ್ (ಬುದ್ಧಿ ಮಾಂಧ್ಯತೆ), ಹಿಮ್ಯಾನ್ಜಿಯೋಮಾಸ್ ( ಸಣ್ನ ರಕ್ತನಾಳಗಳ ಎಕ್ಸಸ್ ಗ್ರೋತ್ ಯಿಂದ ಉಂಟಾಗುವ ಟ್ಯೂಮರ್ಗಳು), ಮುಖದಲ್ಲಿ ಸಣ್ಣ ಕಪಾಲಗಳು, ಸಣ್ಣ ಗಲ್ಲ, ಹರಿದ ತುಟಿ, ಹರಿದ ಪ್ಯಾಲೇಟ್, ಕೋ-ಆರ್ಡಿನೇಶನ್ ತೊಂದರೆಗಳು, ಕೈನಡುಕ, ಕ್ಲಮ್ಸಿನೆಸ್, ಗ್ರೋತ್ ಡಿಫಿಶಿಯನ್ಸಿ…ಭೌತಿಕ ಬೆಳವಣಿಗೆಯ ತೊಂದರೆ ಎಲ್ಲ ಅಂಗಾಂಗಳಲ್ಲೂ, ಇನ್ನೂ ಮುಂತಾದ ಡಿಫೆಕ್ಟ್ಸ್ಗಳು ಉಂಟಾಗಬಹುದು. ಲಕ್ಷಣಗಳು ಆಲ್ಕೋಹಾಲ್ ಎಕ್ಸ್ಪೋಶರ್ ಪ್ರಮಾಣದಮೇಲೂ ಅವಲಂಬಿಸಿರುತ್ತೆ.

ಬುದ್ಧಿ ಮಾಂಧ್ಯತೆಯ ಲಕ್ಷಣಗಳು…….ಮ್ಯಾತೆಮ್ಯಾಟಿಕಲ್ ಡಿಫಿಶಿಯನ್ಸಿ – ಗಣಿತ ಜ್ಞಾನ, ಲೆಕ್ಕಾ – ಚಾರ ಅರ್ಥವಾಗದಿರುವಿಕೆ, ಮೆಮೊರಿ ಡಿಫಿಸಿಟ್ – ಮರೆವು (ನೆನಪಿಲ್ಲದಿರಿವಿಕೆ), ಜಡ್ಜ್ಮೆಂಟ್ ಪ್ರಾಬ್ಲಮ್ಸ್…ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲದಿರುವಿಕೆ, ಅಬ್ಸ್ಟ್ರಕ್ಟ್ ತಿಂಕಿಂಗ್ ಇಲ್ಲದಿರುವುದು – ಬುದ್ಧಿವಂತಿಕೆಯಿಂದ ಅಲೋಚಿಸುವುದರ ಕೊರತೆ, ಲಾಜಿಕನ್ನು ಸಾಮಾನ್ಯವಾಗಿ ವಿವಿಧ ಕಾರ್ಯಗಳಲ್ಲಿ ಅಳವಡಿಸಿಕೊಳ್ಳುವ ಜಾಣ್ಮೆ ಇಲ್ಲದಿರುವಿಕೆ, ಸಂಯಮದ ಕೊರತೆ( ಅಟೆನ್ಶನ್ ಪ್ರಾಬ್ಲಮ್), ತಾಳ್ಮೆ – ಸಹನೆಯ ಕೊರತೆ, ಕಲಿಯುವ ತೊಂದರೆಗಳು ( ಲರ್ನಿಂಗ್ ಪ್ರಾಬ್ಲಮ್) ಮುಂತಾದವುಗಳನ್ನೊಳಗೊಂಡಿರುತ್ತದೆ.

ಬಿಹ್ಯಾವಿಯೊರಲ್ ಪ್ರಾಬ್ಲಮ್ಸ್…..ಹೈಪರ್ ಯಾಕ್ಟಿವಿಟಿ – ಒಂದುಕಡೆ ಕೂರದೆ ಒಂದೇ ಸಮ ಮೂರು ಮತ್ತೊಂದು ಕೆಲಸದಲ್ಲಿ ತೊಡಗುವುದು, ಯಾವುದೇ ಒಂದು ಕೆಲಸವನ್ನು ಯಶಸ್ವಿಯಾಗಿ ಮುಗಿಸದೇ ಬೇರೆ ಕೆಲಸ ಹಚ್ಚಿಕೊಳ್ಳುವುದು. ಅಟೆನ್ಶನ್ ಇಲ್ಲದಿರುವುದು, ಸುಳ್ಳು ಹೇಳುವುದು, ಕದಿಯುವುದು ಇನ್ನೂ ಅನೇಕ ಲಕ್ಷಣಗಳನ್ನು ಕಾಣಬಹುದು.

ಪಾಶ್ಚಿಮಾತ್ಯ ದೇಶಗಳಲ್ಲಿ “ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್” ಬರ್ತ್ ಡಿಫೆಕ್ಟ್ಸ್, ಮೆಂಟಲ್ ರಿಟಾರ್ಡೇಶನ್ ಗೆ ಒಂದು ಪ್ರಮುಖ ಕಾರಣವಾಗಿದೆ. ಬೆಳೆಯುತ್ತಿರುವ ದೇಶಗಳಲ್ಲೂ ಇದರ ಸಂಖೆ ಹೆಚ್ಚುತ್ತಾ ಇದೆ. ಮದ್ಯಪಾನ ಹೆಂಗಸರಲ್ಲಿ ಹೆಚ್ಚಿದಂತೆ ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್ ಸಂಖೆ ಬೆಳೆಯುವ ಸಾಧ್ಯತೆ ಇದೆ.

ಚಿತ್ರ ಕೃಪೆ: ಗೂಗಲ್ – ಎಫ್. ಏ. ಎಸ್.

Posted in ಆರೋಗ್ಯ...ಟಿಪ್ಪಣಿ ! | Tagged | ನಿಮ್ಮ ಟಿಪ್ಪಣಿ ಬರೆಯಿರಿ