ಕಡೂರಿನ ದಿನಗಳು – ನವರಾತ್ರಿ!

ಕಡೂರಿನ ದಿನಗಳು – ನವರಾತ್ರಿ!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ!

ನವರಾತ್ರಿ ಅಂದರೆ ಸಾಕು ಇವತ್ತಿಗೂ “ನಾವು ಆಚರಿಸುತ್ತಿದ್ದ ನವರಾತ್ರಿ ಕಡೂರಿನಲ್ಲಿ” ಯ ಸುಂದರ ನೆನಪು ಕಣ್ಣಿಗೆ ಕಟ್ಟಿದಂತಿದೆ. ನಾವಿದ್ದುದು ಕಡೂರಿನ ಕೋಟೆಯಲ್ಲಿ. ನಮ್ಮ ಮನೆಯ ಸುತ್ತಲೂ ದೇವಸ್ಥಾನಗಳು, ಹಿತ್ತಲ ಬಾಗಿಲ ಮುಂದೆ ಆಂಜನೇಯನ ಗುಡಿ, ಮುಂಬಾಗಿಲ ಮುಂದೆ ಕೇಶವ ದೇವರ ದೇವಸ್ಥಾನ, ಒಂದು ಪಕ್ಕಕ್ಕೆ ರಾಯರ ಮಠ! ಅದಕ್ಕೆ ಅಂಟಿಕೊಂಡಂತೆ ಈಶ್ವರನ ಗುಡಿ. ಇಷ್ಟಾದ ಮೇಲೆ ಇನ್ನೇನು ಹೇಳುವುದೇ ಬೇಡ, ಹಬ್ಬ ಹರಿದಿನಗಳು ನಮ್ಮ ಕೋಟೆಯಲ್ಲಿ ಹೇಗೆ ನಡೆಯಬಹುದೆಂದು. ಕೋಟೆ ಒಂದು ತರಹ ಬ್ರಾಹ್ಮಣರ ವಠಾರ ದೊಡ್ಡ ಪ್ರಮಾಣದಲ್ಲಿ ಎನ್ನಬಹುದಿತ್ತು. ಎಲ್ಲರ ಮನೆಯಲ್ಲೂ ಎಲ್ಲ ಹಬ್ಬಗಳನ್ನು ಪಾಂಗತವಾಗಿ ಚಾಚೂ ತಪ್ಪದೇ ಆಚರಿಸುತ್ತಿದ್ದೆವು.

ನವರಾತ್ರಿ ಸಡಗರ ಪಾಡ್ಯದ ಹಿಂದಿನದಿನದಿಂದಲೇ ಶುರುವಾಗುತಿತ್ತು, ಏಕೆಂದರೆ ಪಾಡ್ಯದ ಹೊತ್ತಿಗೆ ಬೊಂಬೆಗಳನ್ನೆಲ್ಲಾ ಕೂರಿಸಿ ರಡಿಮಾಡಬೇಕಿತ್ತು. ಹಬ್ಬ ಒಂದುವಾರ ಇದೆ ಅನ್ನುವಾಗಲೇ ಪೆಟ್ಟಿಗೆಯಿಂದ ಪಟ್ಟದ ಗೊಂಬೆಗಳನ್ನು ತೆಗೆದು, ಸೀರೆ, ಪಂಚೆ, ಪೇಟ, ಪಟ್ಟಿ ಎಲ್ಲ ಸರಿ ಇದೆಯಾ ಅಂತ ನೋಡಿ, ಇಲ್ಲದಿದ್ದರೆ ಹೊಸ ಸೀರೆ ಉಡಿಸಿ, ರವಿಕೆ ತೊಡಿಸಿ, ಸರ, ವಡವೆ ಎಲ್ಲ ಹೊಲೆದು ಹಾಕಿ ತಯ್ಯಾರು ಮಾಡುತ್ತಿದ್ದೆವು. ನಮ್ಮ ಮನೆಯ ತುಂಬ ಹೆಣ್ಣು ಮಕ್ಕಳು – ೬ ಜನ ಅಕ್ಕ ತಂಗಿಯರು ಇದ್ದುದ್ದರಿಂದ ಈ ಕೆಲಸಗಳು ಶೀಘ್ರದಲ್ಲಿ ಮುಗಿಯುತ್ತಿತ್ತು. ನಮ್ಮ ಅಮ್ಮ ಒಂದು “ಕಲೆಯ ಸ್ವರೂಪ” ಅಂದರೆ ಅತಿಶಯೋಕ್ತಿ ಆಗುವುದಿಲ್ಲ. ಅವರ ಹೆಸರೇ “ಪಾರ್ವತಿ”, ಅದಕ್ಕೆ ಸರಿಯಾಗಿ, ಹಾಡು, ಹಸೆ, ಕಲೆ ಎಲ್ಲ ಸ್ವಾಭಾವಿಕವಾಗಿ ಬಂದಿತ್ತು. ಅದನ್ನು ನಮಗೆಲ್ಲ ಹೇಳಿಕೊಟ್ಟು ನಮ್ಮ ಮನೆಯಲ್ಲಿ ಯಾವಾಗಲೂ ಇವೆಲ್ಲ ತಡೆರಹಿತವಾಗಿ ಹರಿದಿತ್ತು. ನಮ್ಮ ದೊಡ್ದ ಅಕ್ಕ, ಅಮ್ಮ ಮತ್ತು ಅಮ್ಮನ ಸ್ನೇಹಿತರಿಂದ ಬಹಳ ಕಲಿತು ನಮಗೆಲ್ಲ ಕಲಿಸುತ್ತಿದ್ದಳು. ಹೀಗೆ ಎಲ್ಲ ಸೇರಿ ಉತ್ಸಾಹದಿಂದ ಈ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದೆವು.

ನಮ್ಮ ಮನೆಯಲ್ಲಿ ೩- ದೊಡ್ಡ ಮೆಟ್ಟಲುಗಳನ್ನು ಮಾಡಿ, ಮುಖ್ಯವಾದ ಬೊಂಬೆಗಳನ್ನು ಇಡುತ್ತಿದ್ದೆವು. ಆದರೆ, ಕೆಳಗಡೆ ಉಧ್ಯಾನವನ ರಾಗಿ ಪೈರನ್ನು ಬೆಳೆಸಿ, ಮಾಡುತ್ತಿದ್ದೆವು. ಸಣ್ಣ ಸಣ್ಣ ಕಲ್ಲುಗಳನ್ನು ಕೊನೆಯಲ್ಲಿ ಇಟ್ಟು, ಪಾರ್ಕ್ ಒಳಗೆ ಹುಲ್ಲು, ಗೊಂಬೆಗಳು, ನೀರಿನ ಕೊಳ ಎಲ್ಲ ಮಾಡುತ್ತಿದ್ದೆವು. ಅದರ ಸಡಗರನೇ ಅದಕ್ಕಿಂತ ಖುಷಿ ಕೊಡುತ್ತಿತ್ತು. ನಾವೆಲ್ಲ ಹೊರಗಡೆ ಬೊಂಬೆ ಆರತಿಗೆ ಬೇರೆ ಮನೆಗಳಿಗೆ ಹೋದಾಗ, ನಮ್ಮ ಅಮ್ಮ, ಅಜ್ಜಿ ನಮ್ಮ ಮನೆಗೆ ಬಂದವರಿಗೆಲ್ಲಾ “ಬೊಂಬೆ ಬಾಗಿನ” ಕೊಡುತ್ತಿದ್ದರು. ಅಮ್ಮ ೩- ೪ ದಿನಏನಾದರೂ ಮನೆಯಲ್ಲೇ ಮಾಡುತ್ತಿದ್ದರು ಬೊಂಬೆ ಬಾಗಿನಕ್ಕೆ, ಮತ್ತೆ ಕೆಲವು ದಿನ, ಬ್ರೆಡ್ ಐಯಂಗಾರ್ ಬೇಕರಿ ಯಿಂದ ನಿಪ್ಪಟ್ಟು, ಖಾರದ ಬಿಸ್ಕತ್, ಬೆಣ್ಣೆ ಬಿಸ್ಕತ್, ಕೊಬ್ಬರಿ ಬಿಸ್ಕತ್, ಇಲ್ಲ, ರಸ್ಕ್, ಹೀಗೇನಾದರೂ ತಂದು ಕೊಡುತ್ತಿದ್ದೆವು. ನಮ್ಮ ಅಣ್ನ ನಾವೆಲ್ಲ ಬೊಂಬೆ ಆರತಿ ಮುಗಿಸಿ ಬರೋದನ್ನೇ ಕಾಯುತ್ತಿದ್ದ, ಏನು ಗಿಟ್ಟಿಸಿಕೊಂಡು ಬಂದ್ರೇ? ಅಂತ ಕೇಳಿ ನಮ್ಮ ಕೈಯಿಂದ ಅವನಿಗೆ ಇಷ್ಟವಾಗಿದ್ದನ್ನ ಇಸ್ಕೊಂಡು ತಿಂತಾ ಇದ್ದ. ಬೆಣ್ಣೇ ಬಿಸ್ಕತ್, ಉಸ್ಲಿ, ಕೊಬ್ಬರಿ ಬಿಸ್ಕತ್, ನಿಪ್ಪಟ್ಟು ಎಲ್ಲ ಇಸ್ಕೊಂಡು, ಸಾದಾ ಬಿಸ್ಕತ್ ಎಲ್ಲ ನೀವೇ ತಿನ್ರಿ ಅಂತಾ ಇದ್ದ. ಕೆಲವರ ಮನೆಯಲ್ಲಿ “ಅತ್ರಸ” ಕೂಡಾ ಸಿಗುತ್ತಿತ್ತು. ಹಬ್ಬದ ದಿನದ ಊಟಕ್ಕೆ ಮಾಡುವಾಗ ಜಾಸ್ತಿ ಮಾಡಿ ಅದನ್ನೇ ಬೊಂಬೆ ಬಾಗಿನಕ್ಕೂ ಕೊಡುತ್ತಿದ್ದರು. ತುಂಬಾ ಮನೆಗಳಲ್ಲಿ ಸರಸ್ವತಿ ಪೂಜೆ ದಿನ ಕಡ್ಲೇ ಹಿಟ್ಟು ಅರ್ಥಾತ್ “ಗನ್ ಪೌಡರ್” ಹಾಗಂತ ನಾವು ಕರೀತಿದ್ವಿ, ಕೊಡುತ್ತಿದ್ದರು.

ಗೊಂಬೆ ಆರತಿಗೆ ಹೋದಾಗ ತುಂಬಾ ತಮಾಷೆಗಳೂ ಆಗುತ್ತಿದ್ದವು. ನಮ್ಮ ಕ್ಲಾಸ್ ಮೇಟ್ಸ್, ಕೆಲವರು ಹುಡುಗರು ಅವರ ಮನೆಯ ಹೊರಗೆ, ಸ್ನೇಹಿತರೊಡನೆ ಹರಟೆ ಹೊಡೀತಾ ಕುಳಿತ್ತಿರುತ್ತಿದ್ದರು. ನಾವೇನಾದರೂ “ಗೊಂಬೆ ಕೂರಿಸಿದ್ದೀರಾ”? ಅಂತ ಕೇಳಿದರೆ, “ಇಲ್ಲ ಗೂಬೆ ಕೂರಿಸಿದ್ದೀವಿ” ಅಂತ ತಮಾಷೆ ಮಾಡುತ್ತಿದ್ದರು. ಇಲ್ಲದೇ ಹೋದ್ರೆ, “ನೀವೆಲ್ಲ ಆಗ್ಲೇ ಬಂದು ಚರಪು ಇಸ್ಕೊಂಡು ಹೋದ್ರಲ್ಲಾ” ಅಂತ ನಮ್ಮನ್ನೆಲ್ಲಾ ರೇಗಿಸುತ್ತಿದ್ದರು. ಅಷ್ಟೊತ್ತಿಗೆ, ಅವರಮ್ಮನೋ, ಅಕ್ಕನೋ ಹೊರಗೆ ಬಂದು, ಬನ್ನಿ ಅಂತ ನಮ್ಮನ್ನೆಲ್ಲಾ ಕರೆದು ಹಾಡು ಹೇಳಿಸಿ, ಬೊಂಬೆ ಬಾಗಿನ ಕೊಡುವರು. ನಾವು ಬೀಗುತ್ತಾ ಇವರನ್ನೆಲ್ಲಾ ನೋಡಿಕೊಂಡು ನಗುತ್ತಿದ್ದೆವು.

ಕೆಲವು ನಮ್ಮ ಸ್ನೇಹಿತರ ಮನೆಯಲ್ಲಿ ಹಾಡು ಹೇಳೋವರೆಗೂ ಬೊಂಬೆ ಬಾಗಿನ ಕೊಡುತ್ತಿರಲಿಲ್ಲ. ಹಾಡು ಬರಲ್ಲಾ ಅಂದರೆ, ಇಲ್ಲ ನಮಗೆಲ್ಲಾ ಗೊತ್ತು, ಸ್ವಲ್ಪನಾದ್ರು ಬರತ್ತೆ ಅಂತ ಬಲವಂತ ಮಾಡುತ್ತಿದ್ದರು. ಹಾಗಾಗಿ ನಾವೆಲ್ಲ ಸಣ್ಣ ಪುಟ್ಟ ಹಾಡುಗಳನ್ನು ಕಲಿತುಕೊಂಡು, ಅಭ್ಯಾಸಮಾಡಿಕೊಂಡು ರಡಿಯಾಗುತ್ತಿದ್ದೆವು. ಯುದ್ಧ ಕಾಲೇ ಶಸ್ತ್ರಾಭ್ಯಾಸ ಅಂದಹಾಗೆ ಆಗಷ್ಟೇ ಕಲಿತ ಹಾಡುಗಳು “ಪೂಜಿಸಲೆಂದೇ ಹೂವ್ಗಳ ತಂದೇ”, ಗಜಮುಖನೇ ಗಣಪತಿಯೇ, ಇತ್ಯಾದಿ. ಹಾಗೆ ಹಾಡು ಹೇಳುವಾಗ…ಒಬ್ಬರು “ಸ್ವಾಮಿ” ಅಂತ ಹೇಳಿದಾಗ ಇನ್ನೊಬ್ಬರು “ರಾಮ” (ಪೂಜಿಸಲೆಂದೇ ಹಾಡಿನಲ್ಲಿ)ಅಂತ ಹಾಡಿ ಅನಾಹುತ ಆಗುತ್ತಿತ್ತು. ಆಮೇಲೆ ಕೆಲವು ಹಾಡುಗಳನ್ನು ಅರ್ಧಕ್ಕೇ ನಿಲ್ಲಿಸಿಬಿಡುತ್ತಿದ್ವಿ, ಮರೆತು ಹೋದಾಗ. ಅಷ್ಟರಲ್ಲಿ, ಅವರೇ ಬೊಂಬೆ ಬಾಗಿನ ಕೊಟ್ಟು ಕಳಿಸುತ್ತಿದ್ದರು. ಇದನ್ನೆಲ್ಲಾ ನೆನಪಿಸಿಕೊಂಡರೆ, ಎಷ್ಟೊಂದು ಸಂಭ್ರಮ, ಸಡಗರ, ತಮಾಷೆ, ಸ್ನೇಹ, ಸಂಬಂಧ ಇತ್ತು ಆಗ ಅನ್ನಿಸುತ್ತೆ. ಹಬ್ಬ ಮುಗಿದಮೇಲೆ ಮುಂದಿನ ಹಬ್ಬಕ್ಕಾಗಿ ಕಾಯುತ್ತಿದ್ದೆವು. ಹೀಗೆ ನವರಾತ್ರಿ ವಿಜಯದಶಮಿ ಆಗೋವರೆಗೂ ದಿನಾ ಉತ್ಸಾಹದಿಂದ ನಲಿದಾಡುತ್ತಿದ್ದೆವು. ಹೊಸಬಟ್ಟೆಗಳನ್ನು ಹಾಕಿ ಕೊಂಡು, ತಿಂಡಿ ತಿನಿಸುಗಳನ್ನು ತಿಂದು, ಆಟ ಆಡಿ, ಹಾಡು ಹಾಡಿ, ವಿಜಯದಶಮಿ ದಿನ ಬನ್ನಿ ಮಂಟಪಕ್ಕೆ ಹೋಗಿ, ಬನ್ನಿ ಸೊಪ್ಪು ತಂದು, “ಶಮೀ ಶಮಿಯತೇ ಪಾಪಮ್ …” ಅಂತ ಶ್ಲೋಕ ಹೇಳಿ, ದೊಡ್ಡವರಿಗೆಲ್ಲಾ ನಮಸ್ಕರಿಸಿ, ನವರಾತ್ರಿಯನ್ನು ವಿಜಯ ದಶಮಿ ದಿನ ಬೀಳ್ಕೊಡುತ್ತಿದ್ದೆವು!

ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು!! ಎಲ್ಲರ ಬಾಳಲ್ಲೂ ನವರಾತ್ರಿ ಸುಖ ಸಂತೋಷವನ್ನು ತರಲಿ!!!331694_10150334112748246_619338245_8436761_2048631308_o

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಪ್ರಭಂದ !. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s