ಹೆಸರಿನ ಹಸಿರು !

* ಹೆಸರಿನ ಹಸಿರು *
(ನಾಮಾಮೃತ)
ಹೆಸರುಗಳ ಹಾಸ್ಯ-ಹರಟೆ!!!

ಇದೇನಪ್ಪಾ ಇದು, “ಹೆಸರು ಕಾಳು ಹಸಿರು” ಅಂತ ಬರೀತಿದ್ದಾರಲ್ಲಾ, ಅದರಲ್ಲೇನು ವಿಶೇಷತೆ? ಅದು ಎಲ್ಲಾರಿಗೂ ಗೊತ್ತಿರುವ ವಿಷಯವಲ್ವೇ? ಅಂತ ಅಂದ್ ಕೊಂಡು ಇದನ್ನು ಓದದೇ ಇರಬೇಡಿ!  ಹೆಸರಿನಲ್ಲಿ (ಯಾವುದೇ ಹೆಸರಾಗಲಿ) ಏನಾದರೊಂದು ಯಾವಾಗಲೂ ವಿಶೇಷ, ತಮಾಷೆ ಇದ್ದೇ ಇರುತ್ತೆ, ಆ ಎವರ್ಗ್ರೀನ್ ನೇಚರ್ ಆಪ್”ನೇಮ್ಸ್” ಕುರಿತಾಗೇ ನಾನು ಈಗ ಬರೆಯಲು ಹೊರಟಿರೋದು.  ನನ್ನ ಹೆಸರು, “ಹೆಸರು-ಕಾಳು”, ಬೆಂದರೆ, “ಬೇಳೇ-ಕಾಳು” ಅಂತ ಜನಪ್ರಿಯ ವಾಗಿರುವ ಮಾತಿನಂತೆ, ಹೆಸರಿಗೂ-ಹೆಸರು ಬೇಳೇಗೂ ಎನೋ ಒಂದು ಕನೆಕ್ಶನ್ ಇದ್ದೇ ಇದೆ.  ಹೆಸರುಗಳು ಒಂದಲ್ಲಾ ಒಂದು ರೀತಿಯಲ್ಲಿ ಹಸಿರಿನ ತಮಾಷೆಗೆ ಕಾರಣವಾಗಿವೆ, ಅದನ್ನ ಮುಂದೆ ನೋಡೋಣ ಬನ್ನಿ.!

ನಾನು ಅಮೇರಿಕಾಗೆ ಹೊಸದಾಗಿ ಬಂದಾಗ, ನಮ್ಮ(ಭಾರತೀಯರ) ಹೆಸರುಗಳು ಇಲ್ಲಿಯವರಿಗೆ ಹೇಳಲು ಕಷ್ಟ ಮತ್ತು ತುಂಬಾ ಉದ್ದ ಅಂತ ಅಮೇರಿಕನ್ನರು (ಮತ್ತು ಇಲ್ಲಿಯ ಕನ್ನಡಿಗ ಸ್ನೇಹಿತರು) ಹೇಳಿದ್ದುಂಟು, ಮತ್ತು ಇನ್ನೂ ಹೇಳುತ್ತಿದ್ದಾರೆ ಇವತ್ತಿಗೂ. ನಮ್ಮ ಹೆಸರುಗಳು ಇರಲಿ, ಇಲ್ಲಿಯವರ ಹೆಸರುಗಳ ವಿಚಿತ್ರವನ್ನು ಮೊದಲು ವ್ಯಾಖ್ಯಾನಿಸೋಣ, ಏನಂತೀರ?

ಮೊದಲನೆಯದಾಗಿ ಇಲ್ಲಿಯವರ (ಅಮೇರಿಕಾದ) ಹೆಸರುಗಳೇನು ಕಡಿಮೆ ಉದ್ದ ಇರುವುದಿಲ್ಲ, ಆದರೆ ಮೂರು ನಿರ್ದಿಷ್ಟ ಭಾಗ ಗಳಿರುವುದರಿಂದ ಶಾರ್ಟ್ ಅನ್ನಿಸಬಹುದಷ್ಟೆ. ಉ.ದಾ…ವಿಲಿಯಮ್…ಜೆಫ಼್ಫರ್ಸನ್…ಫಿಟ್ಸ್ಜೆರಾಲ್ಡ್. ಇದರಲ್ಲಿ, ವಿಲಿಯಮ್…ಮೊದಲನೆ ಹೆಸರು, ಜೆಫ಼್ಫರ್ಸನ್…ಮಧ್ಯದ ಹೆಸರು, ಫಿಟ್ಸ್ಜೆರಾಲ್ಡ್…ಕಡೆಯ ಹೆಸರು. ಈ ಹೆಸರೇನು ಕಡಿಮೆ ಉದ್ದ ಇದೆಯಾ? ಇದನ್ನು ಇಂಗ್ಲೀಷ್ ನಲ್ಲಿ ಬರೆದರೆ, ಅಲ್ಲಿರುವ ಎಲ್ಲಾ ಅಕ್ಷರಗಳನ್ನೂ ಉಪಯೋಗಿಸಬೇಕಾಗಬಹುದಲ್ಲವೇ? ಸರ್ವೇ ಸಾಮಾನ್ಯವಾಗಿ ಇಲ್ಲಿ ಆಗುವುದಿಷ್ಟೆ, ಇಲ್ಲಿಯವರು ಅವರ ಹೆಸರುಗಳನ್ನು ಶಾರ್ಟ್ ಮಾಡುತ್ತಾರೆ, ಆದ್ದರಿಂದ ಅದು ಹನುಮಂತನ ಬಾಲವೆನಿಸುವುದಿಲ್ಲ. ಉದಾ: ವಿಲ್ಲಿಯಮ್ ಗೆ ಶಾರ್ಟ್ ಫ಼ಾರ್ಮ್…ಬಿಲ್ ಅಂತಲೂ, ಫಿಟ್ಸ್ಜೆರಾಲ್ಡ್ ಗೆ…ಜೆರ್ರಿ ಅಂತಲೂ ಕರೆದು ಹೆಸರುಗಳ ಬಾಲಗಳನ್ನು ಹೆಸರಿಲ್ಲದ ಹಾಗೆ ಕುಯ್ದು ಬಿಡುತ್ತಾರೆ.  ಹಾಗಾಗಿ, ಹೆಸರುಗಳು ಹೇಳುವುದು ತುಂಬಾ ಸುಲಭವಾಗಿ ಕಾಣುತ್ತೇ ಹೊರತು ತಮಾಷೆಗೇನೂ ಕಡಿಮೆಯಾಗಿಲ್ಲ.

ತುಂಬಾ ತಮಾಷೆ ಎಂದರೆ, ಇವರಿಗೆ ಹೆಸರಿಡಲು ಇಂತದ್ದೇ ಆಗಬೇಕು ಅಂತ ಎನೂ‌ಇಲ್ಲ, ಏನಾದರೂ ಆಗಬಹುದು. ಉದಾ….
ಬಣ್ಣದ ಹೆಸರುಗಳು:…. ಬ್ಲ್ಯಾಕ್, ವೈಟ್, ರೆಡ್, ಗ್ರೀನ್, ವೈಲೆಟ್, ಪಿಂಕ್ ಇತ್ಯಾದಿ.

ತಿಂಗಳುಗಳು:….ಏಪ್ರಿಲ್, ಮೇ, ಜೂನ್, ಜುಲೈ(ಜೂಲಿಯೋ)..(ಸ್ಪ್ಯಾನಿಷ್ನಲ್ಲಿ ಹೂಲಿಯೋ ಅಂತ ಕರೆಯುತ್ತಾರೆ.), ಆಗಸ್ಟ್,(ಅಗಸ್ಟಸ್) ಇತ್ಯಾದಿ..ಇತ್ಯಾದಿ.

ಹೂವಿನ ಹೆಸರುಗಳು:….ಜಾಸ್ಮಿನ್, ಡೈಸಿ, ರೋಸ್(ಗುಲಾಬಿ), ಲಿಲೀ, ಮುಂತಾದವು.

ಅಡ್ಜೆಕ್ಟೀವ್ಸ್ ಪದಗಳೂ ಕೂಡಾ ಇವರ ಹೆಸರಾಗಬಹುದು. ಉದಾ….
ಲಾಂಗ್, ಟಾಲ್, ಬಿಗ್ಗರ್, ಶಾರ್ಟ್, ಯಂಗ್..(ಸ್ಟೀವ್ ಯಂಗ್), ಓಲ್ಡ್( ಶರನ್ ಓಲ್ಡ್), ವೈನರ್(ಅಳುಮುಂಜಿ.. ಎರಿಕ್ ವೈನರ್), ನೈಲರ್(ಮೊಳೆ ಹೊಡೆಯುವವ-ಬ್ರಯನ್ ನೈಲರ್), ಬಾರ್ಕರ್, ಪಿಕರ್, ಪ್ಯಾಟರ್, ಫ಼್ರಾಂಕ್ ಇತ್ಯಾದಿ-ಇತ್ಯಾದಿ.

ಬಹಳಷ್ಟು ಹೆಸರುಗಳಿಗೆ ಇಲ್ಲಿ ಅರ್ಥ, ಕುಲ, ಗೋತ್ರ ಏನೂ ಇರುವುದಿಲ್ಲ. ಉದಾ….
ಲೂಕ್, ಕೆರಿ, ಜಿನ್, ಬಿನ್, ಪೇನ್, ಇತ್ಯಾದಿ-ಇತ್ಯಾದಿ.

ವಸ್ತುಗಳೂ ಹೆಸರುಗಳಾಗಬಹುದು,….
ಫ಼್ಲವರ್ಸ್…(ಜನ್ನಿಫ಼ರ್ ಫ಼್ಲವರ್ಸ್), ಸನ್, ಸ್ಟಾರ್, ಮಾರ್ಸ್, ನಗ್ಗೆಟ್, ಕ್ಯಾಂಡಿ, ಜೂವೆಲ್, ರೂಬಿ (ರೆಡ್ ಸ್ಟೋನ್), ಕುಕೀ (ಬಿಸ್ಕತ್..ಕುಕೀ ರಾಬರ್ಟ್ಸ್), ಮುಂತಾದವು. ಹೀಗೆ, ನೀವು ಯಾವ ಪದವನ್ನೇ ತಗೊಳ್ಳಿ ಅದೂ ಒಂದು ಹೆಸರಾಗಬಹುದು. (ನಮ್ಮ ದೇಶದಲ್ಲಿ ಹೆಸರು ಇಡುವುದಕ್ಕೆ ಹಿಂದೆ, ಮುಂದೆ, ಕುಲ, ಗೋತ್ರ, ನಕ್ಷತ್ರ ಎಲ್ಲಾ ನೋಡಿಯೂ ಹೆಸರುಗಳು ಹಾಸ್ಯಕ್ಕೆ ಒಳಗಾಗುವುದು ಬೇರೇ ವಿಷಯ ಬಿಡಿ!)

ಇಲ್ಲಿ ಮನುಷ್ಯರ ಹೆಸರುಗಳು ಇರಲಿ, ಬೇರೇ ಹೆಸರುಗಳೂ ನಮಗೆ ಕೇಳುವುದಕ್ಕೆ ಮಜಾ ಇರುತ್ತೆ. ಉದಾ: ಇಲ್ಲಿ ಒಂದು ಆಟೋಮೊಬಿಲ್ ಸರ್ವೀಸ್ ಸ್ಟೇಶನ್ ಗೆ * ಮೈದಾಸ್ * ಅಂತ ಹೆಸರಿದೆ. ನೀವೇನಾದರು ಅಲ್ಲಿಗೆ ಹಬ್ಬ-ಹುಣ್ಣಿಮೆ ದಿನ ಹೋಳಿಗೆ ಮಾಡಲು ಮೈದಾ ಹುಡುಕ್ಕೊಂಡು ಹೋದರೆ, ನಿಮಗೆ ಕರಿ ಮೈದಾ ಹಿಟ್ಟು ಖಂಡಿತಾ ಸಿಗುತ್ತೆ (ಬಿಳಿ ಮೈದಾ ಹಿಟ್ಟು ಸಿಗದಿದ್ದರೂ).

ಇಷ್ಟೇ ಸಾಲದು ಅಂತ ಅನ್ನಿಸಿದರೆ…..

ಇನ್ನೂ ಫ಼ನ್ ಬೇಕೆನಿಸಿದರೆ, ಇತ್ತೀಚೆಗೆ ಅಮೇರಿಕಾದ ಅಟಾರ್ನೀ ಜನರಲ್ ಆಗಿ ನೇಮಕಗೊಂಡವರ ಹೆಸರು ಕೇಳಿ, ಅವರ ಹೆಸರು ’ಮೈಕಲ್ ಮುಖೇಶಿ’ (ಎನ್.ಪಿ.ಆರ್. ನವರು ಈ ರೀತಿ ಉಚ್ಚರಿಸಿದರು), ಅವರ ಹೆಸರಿಗೆ ತದ್ವಿರುದ್ಧವಾಗಿ ಅವರ ಮುಖದಲ್ಲಿ ಕೇಶವೇ ಇಲ್ಲ (ಅರ್ಥಾತ್, ಗಡ್ಡ, ಮೀಸೆ, ಯಾವುದೂ ಇಲ್ಲ, ತಲೆ ಕೂದಲೂ ಅಷ್ಟಕಷ್ಟೇ). ಇವರು ಕಡೇ ಪಕ್ಷ ಅವರ ಕಡೆಯ ಹೆಸರನ್ನಾದರೂ “ನೊ ಮುಖೇಶಿ” ಅಥವಾ “ನಾನ್ ಮುಖೇಶಿ” ಅಂತ ಬದಲಿಸಬೇಕಾಗಬಹುದು.  ಹೀಗೆ ಅಮೇರಿಕಾದ ಹೆಸರುಗಳು ತಮಾಷೆಗೇನು ಹೊರತಲ್ಲ.

ಈಗ ನಮ್ಮ ಹೆಸರುಗಳ ತಿಳಿಯಾದ ಹಾಸ್ಯ ತಿಳಿಸೋಣವೇ?

ನಾನು ರೆಸಿಡೆನ್ಸಿ ತರಬೇತಿಯಲ್ಲಿದ್ದಾಗ (ಹತ್ತು ವರ್ಷಗಳ ಹಿಂದೆ), ತಮಿಳು ನಾಡಿನ ಇನ್ನೊಬ್ಬರು ವೈದ್ಯರು ಮೆಡಿಸಿನ್ ನಲ್ಲಿ ಟ್ರೈನಿಂಗ್ ಮಾಡುತ್ತಿದ್ದರು-ಅವರ ಹೆಸರು ಒಂದ್ತರ ತಮಾಷೆಯಾಗಿತ್ತು, ವೆಂಕಟೇಶ-ಶ್ರೀನಿವಾಸ-ಬಾಲಾಜಿ (ವೆಂಕಟೇಶ-ನಾಮಧೇಯ, ಶ್ರೀನಿವಾಸ-ತಾತನಿಂದ ಬಂದ ಹೆಸರು, ಬಾಲಾಜಿ-ಕಡೆಯ ನಾಮಾಂಕಿತ, ತಂದೆಯಿಂದ ಬಂದಿದ್ದು). ನಮ್ಮ ಹೆಸರುಗಳಿಗೆಲ್ಲಾ ಅರ್ಥ ಇದ್ದೇ ಇರುತ್ತೆ ಎಂದು ನಮ್ಮಿಂದ ತಿಳಿದ ಅಮೇರಿಕಾದ ಸ್ನೇಹಿತರೊಬ್ಬರು ಈ ಹೆಸರಿಗೆ ಅರ್ಥವನ್ನು ಕೇಳಿದರು. ನಾನು ಕಷ್ಟಪಟ್ಟು ಕಡೆಗೂ ಅವರಿಗೆ ’ ಈ ಮೂರೂ ಹೆಸರುಗಳಿಗೆ ಒಂದೇ ಅರ್ಥ, ಅದು ಹಿಂದೂ ಸುಪ್ರಸಿದ್ಧ ದೇವರ ಹೆಸರು (ವಿಷ್ಣುವಿನ-ಅವತಾರ) ಅಂತ ಹೆಮ್ಮೆಯಿಂದ ಹೇಳಿದ ತಡ, ಅವರ ಪ್ರತಿಕ್ರಿಯೆ ಈ ರೀತಿ ಇತ್ತು.  (ವೆಂಕಟೇಶ = ಶ್ರೀನಿವಾಸ = ಬಾಲಾಜಿ) = ಶ್ರೀನಿವಾಸ ಕ್ಯೂಬ್ = ವೆಂಕಟೇಶ ಕ್ಯೂಬ್ = ಬಾಲಾಜಿ ಕ್ಯೂಬ್ ಸೋ, ಶ್ರೀನಿವಾಸ ಕ್ಯೂಬ್ = ಶ್ರೀಕ್. ಶಾರ್ಟ್ ಫ಼ಾರಮ್ ನಲ್ಲಿ ನಾವು ಅವರಿಗೆ * ಡಾಕ್ಟರ್ ಶ್ರೀಕ್ * ಅಂತ ಕರೆಯಬಹುದಲ್ಲವೇ? ಎಂದರು.  “ಖಂಡಿತಾ ಕರೆಯಬಹುದು, ಆದರೆ, “ನಾನು ಹೇಳಿದೆ” ಅಂತ ಅವರಿಗೆ ದಯವಿಟ್ಟು ಹೇಳಬೇಡಿ”ಎಂದು, ಬೇರೇನೂ ಹೇಳಲು ತೋಚದೆ ಮಾತು ಮುಗಿಸಿದೆ.

ನಮ್ಮ ಹೆಸರುಗಳ ತಮಾಷೆಗೆ ಇನ್ನೊಂದು ಕಾರಣ ಎಂದರೆ, ಹೆಸರುಗಳು ವ್ಯಕ್ತಿಗೆ ಅನುಗುಣವಾಗಿ ಇರುವುದಿಲ್ಲ….

ಐಶ್ವರ್ಯ ರೈ ಗೆ ಈ ತೊಂದರೆ ಇಲ್ಲ ಬಿಡಿ!,  ಕೃಷ್ಣ ರೈ ಯಾವ ಕಾಲ ನೋಡಿ ಅವಳಿಗೆ ಆ ಹೆಸರು ಇಟ್ಟ್ರೋ, ಗೊತ್ತಿಲ್ಲಾ… ಐಶ್ವರ್ಯಕ್ಕೆ ಮಿತಿಯೇ ಇಲ್ಲದಾಯಿತು. ನಾವೆಲ್ಲಾ ದಿನ ನಿತ್ಯ ಆ ತರಹ ಹೆಸರುಗಳು ತಮಾಷೆಗೆ ಕಾರಣವಾಗಿರುವುದನ್ನು ಕೇಳುತ್ತಲೇ ಇರುತ್ತೇವೆ, ಉ.ದಾ: ಕಪ್ಪಗಿರುವ ಶ್ವೇತಾ, ಗಲಾಟೆಯ ಸೌಮ್ಯ, ವಿದ್ಯವೇ ಹತ್ತದ ವಿದ್ಯಾ ಶಂಕರ್, ಬೆಳ್ಳಗಿರುವ ಕರಿಯಪ್ಪ, ಹಲ್ಲುಬ್ಬಿನ ಸುಹಾಸಿನಿ, ರೂಪವಿಲ್ಲದ ಸೌಂದರ್ಯಾ, ಶೂರನಲ್ಲದ ವೀರೇಶ, ಹಣವಿಲ್ಲದ ಸಂಪತ್ತು, ಮೃದು ಸ್ವಭಾವದ ರುದ್ರಾಣಿ, ಮೃದುವಿಲ್ಲದ ನಮ್ರತಾ, ಇದಕ್ಕೆ ಮೊದಲುಂಟೆ? ಕೊನೆಯುಂಟೇ? ಎರಡೂ ಇಲ್ಲ. ಏನಪ್ಪಾ ಅಂದರೆ, ಈ ತಮಾಷೆಯನ್ನು ತಮಾಷೆಯಾಗೇ ತಗೊಂಡು, ಮನಸ್ಸನ್ನು ಹಗುರಾಗಿಸಿಕೊಂಡು, ಅದನ್ನು ಅಲ್ಲಿಗೇ ಬಿಟ್ಟು ಬಿಡಬೇಕು.

ನೀವೆಲ್ಲಾ ಹಾಗೆ ಮಾಡುವರೇ ಆದರೆ, ಇನ್ನಷ್ಟು ಫನ್ ಗೆ ಕೆಳಗೆ ಓದಿ………………….

ನಮ್ಮ ಸೀನಿಯರ್ ವೈದ್ಯರೊಬ್ಬರ ಹೆಸರು ’ಬದರಿ ನಾಥ್’ ಎಂದು, ಅಮೇರಿಕಾದಲ್ಲಿ ಕಡೆಯ ಹೆಸರು ಕರೆಯುವ ಅಭ್ಯಾಸವಿರುವುದರಿಂದ ಅವರಿಗೆ- ಡಾಕ್ಟರ್ ನಾಥ್- ಅಂತ ಕರೆಯುತ್ತಿದ್ದರು. ಹಾಗೆ ಒಂದು ಸಲ ಅರ್ಥ ವಿಮರ್ಶೆ ಮಾಡುವಾಗ ’ನಾಥ’ ಅನ್ನುವುದಕ್ಕೆ ಎರಡು ಅರ್ಥ ಇದೆ ಅಂತ ತಿಳಿದು, (ಒಡೆಯ ಮತ್ತು ಗಬ್ಬು ವಾಸನೆ ) ಡಾಕ್ಟರ್ ಸ್ಟಿಂಕಿ ಅಂತ ಅವರ ಹತ್ತಿರದ ಸ್ನೇಹಿತರು ಕರೆಯಲು ಶುರು ಮಾಡಿದ್ದರು. ಡಾ: ಬದರಿನಾಥ್, ಅದನ್ನು ಸರಿಪಡಿಸಲು ಹೋಗಿ ಮೊದಲನೆ ಹೆಸರು ಕರೆಯುವಂತೆ ಕೇಳಿದಾಗ… “ಬ್ಯಾಡರೀ ನಾಥ” ಹೋಗಿ “ಬ್ಯಾಡಾರೀ” ಆಗಿ, ಕಡೆಗೆ ” ಡಾಕ್ಟರ್ ಬ್ಯಾಡ್” ಅಂತ ಶಾರ್ಟ್ ಫ಼ಾರ್ಮ್ ಆಗಿ ಜನಪ್ರಿಯವಾಯಿತು ಅವರ ಹೆಸರು.  ಅಂತೂ ತುಂಬಾ ಒಳ್ಳೇ ಡಾಕ್ಟರ್ ಕೆಟ್ಟ ಡಾಕ್ಟರ್ ಆದ ಸುಲಭ ಮಾರ್ಗವಿದು.

ಬಹಳಷ್ಟು ಬಾರಿ, ಮೊದಲನೆ ಹೆಸರು ಸರಿ ಇದ್ದರೂ ಕಡೆಯ ಹೆಸರು ಫನ್ನಿ ಯಾಗಿರುತ್ತೆ. ನಮ್ಮ ಇಲ್ಲಿಯ ಕನ್ನಡಿಗ ಸ್ನೇಹಿತರೊಬ್ಬರ ಹೆಸರು “ಸುಧೀರ್ ನಗರ್‌ಕರ್” ಅಂತ.  ಅವರ ಕಡೆಯ ಹೆಸರು ಒಂಥರಾ ತಮಾಷೆಯಾಗಿದೆ, ಯಾಕೇಂತ ಕೇಳಿದ್ರಾ?  ನೀವು ಕೇಳದೇ ಇದ್ರೂ ನಾನೇ ಹೇಳಿಬಿಡೋಣ ಅನಿಸುತಿದೆ ಯಾಕೋ ಇಂದು, ಹೋಗಲಿ ನೀವು ಕೇಳಿಬಿಡಿ ಹಾ..ಗೇ ಸುಮ್ಮನೇ.   ಯಾರಾದ್ರೂ ಅಪ್ಪಿ ತಪ್ಪಿ ಸುಧೀರ್ ನ “ಮಿಸ್ಟರ್ ಹಳ್ಳಿಕರ್” ಅಂದು ಬಿಟ್ಟರೆ, ಸುಧೀರ್ ಗೆ “ಏನ್ರೀ, ನಮಗೆ “ಹಳ್ಳಿಕರ್” ಅಂತ ಕರೀತೀರಲ್ರೀ, ನಾವು ಸಿಟಿ ಅವ್ರು ಕಂಡ್ರೀ, ನಾವಿರೋದು ಅಮೇರಿಕಾದಲ್ಲಿ ಪ್ರಸಿದ್ಧವಾಗಿರುವ ಸಿಲಿಕಾನ್ ವ್ಯಾಲಿ ಅರ್ಥಾತ್ ಬೇ ಏರಿಯಾ ದಲ್ಲಿ. ಎಲ್ಲಬಿಟ್ಟು ನಮಗೆ ಹಳ್ಳಿಕರ್ ಅಂತ ಕರೀತೀರಲ್ರೀ, ಇನ್ಮೇಲೆ ಸರಿಯಾಗಿ ಸುಧೀರ್ ನಗರ್‌ಕರ್ -ಅಂತ ಕರೀಬೇಕು. ಗೊತ್ತಾಯ್ತೇನ್ರೀ?” ಅಂತ ಹೇಳುವ ಒಂದು ಅವಕಾಶ ಕಲ್ಪಿಸಿದೆ. ಅಂದಹಾಗೆ ಈ ಸುಧೀರ್ ನಗರ್ ಕರ್ ಬೇರ್ಯಾರೂ ಅಲ್ಲ, ನಮ್ಮ ಕನ್ನಡ ಚಲನ ಚಿತ್ರ ನಟಿ ಸುಮನ್ ನಗರ್ ಕರ್ ಅವರ ಅಗ್ರಜ. ಅಷ್ಟೇ ಅಲ್ಲದೆ, ಸುಧೀರ್ ಒಳ್ಳೇ ಹಾಡಗಾರರೂ ಹೌದು.

ಪದ್ಮ, ಪದ್ಮನಾಭ, ಈ ಹೆಸರುಗಳನ್ನು * ಪದ್ದು, ಪದ್ದಿ, * ಅಂತ ಶಾರ್ಟ್ ಆಗಿ ಕರೆಯುವುದು ತುಂಬಾ ಸಾಮಾನ್ಯವಾಗಿದೆ. ಆದರೆ ನನಗ್ಯಾಕೋ ಸ್ವಲ್ಪ ಭಯ ಹಾಗೆ ಕರೆಯೋದು ಅಂದ್ರೆ, ಯಾಕೆ ಗೊತ್ತಾ?  ಏನೋ “ಪದ್ದು” ಅಂತ ಹೇಳೋವಾಗ ನಾಲಿಗೆ ತಪ್ಪಿ ಪ ಕ್ಕೆ ( ಏತುವೆ ಸೇರಿಸಿ = ಪೆ ಆಗಿಬಿಟ್ಟರೆ ) ಪೆ ಆಗಿ ಮಾರ್ಪಾಡಾದರೆ, ನಮ್ಮ ದವಡೆ ಗತಿ ಏನಾಗಬೇಕು ಹೇಳ್ರೀ? ಹೇಗಾದರಾಗಲಿ, ಒಂದು ಮಾತು ಹೇಳುತ್ತೇನೆ, ನೀವೆಲ್ಲಾ ಈ ಹೆಸರು ಹೇಳೋವಾಗ ಸ್ವಲ್ಪ ಹುಷಾರಾಗಿರಿ !

ಉತ್ತರಕರ್ನಾಟಕ, ಧಾರವಾಡ, ಈ ಪ್ರದೇಶಗಳಲ್ಲಿನ ಹೆಸರುಗಳು (ಕೆಲವು) ವಿಚಿತ್ರ ಹಾಗೂ ಹಾಸ್ಯಮಯ. ಉ. ದಾ. ಉಳ್ಳಾಗಡ್ಡಿ, ಮೆಣಸಿನಕಾಯಿ,…. ಇವರುಗಳು ತರಕಾರಿ ಮಾರ್ಕೆಟ್ ಅಥವಾ ಸಂತೆಗೆ ಹೋದಾಗ ಜನರಿಗೆ ಕನ್ಫ್ಯುಸ್ ಆಗುವ ಸಂಭವ ಉಂಟು. ಈರುಳ್ಳಿ ವ್ಯಾಪಾರಿ ಹತ್ತಿರ ಹೋಗಿ, “ಉಳ್ಳಾಗಡ್ಡಿ” ಕೊಡಿ ಅಂದರೆ, ಅಲ್ಲೇ ಹೋಗುತ್ತಿದ್ದ ಉಳ್ಳಾಗಡ್ಡಿ ತಿರುಗಿ, ತಿರುಗಿ, ನೋಡಿ, ಕಾಲೆಡವಿ ಉಳ್ಳಾಗಡ್ಡಿ ಮೇಲೆ ಬೀಳುವ ಸಂಬವವೇನೂ ಕಡಿಮೆಯಿಲ್ಲ. ಈ ತರಹ ಹೆಸರುಗಳನ್ನು ತಮಾಷೆ ಗಾಗೇ ಇಟ್ಟು ಕೊಳ್ಳುತ್ತಾರಾ? ಎನ್ನುವುದು ನನಗೊಂದು ಸಂಶಯ.

ನಮ್ಮ ಹೆಸರುಗಳು ಇಲ್ಲಿಗೆ ಸಾಕು, ಸ್ವಲ್ಪ ನಮ್ಮ ಪಕ್ಕದ ಮನೆಯ ( ಪಕ್ಕದ ದೇಶ) ಚೈನೀಸ್ ಹೆಸರುಗಳನ್ನು ನೋಡೋಣ.

ಚೈನೀಸ್ ಗೆ * ಚ * ಕಾರ ಒಂದಿದ್ದರೆ ಸಾಕು, ಸಾವಿರಾರು ಹೆಸರಿಡುತ್ತಾರೆ ಅದರಲ್ಲಿ. ನೀವು ಕಾಗುಣಿತ ಶುರು ಮಾಡಿ- ಚ, ಚಾ, ಚಿ, ಚೀ, ಚು, ಚೂ, ಚೈ, ಚಮ್, ಚನ್, ಚಹ್ ಚಾಂಗ್ ಅಂದರೆ ಎಲ್ಲವೂ ಒಂದೊಂದು ಹೆಸರಾಗುತ್ತದೆ. ನಮ್ಮ ಕನ್ನಡ ಸ್ನೇಹಿತರೊಬ್ಬರು, ಸುನೀಲ್ ಶಂಕರ್ ಹೀಗೆ ಹೆಸರುಗಳ ಬಗ್ಗೆ ಹಾಸ್ಯವನ್ನು ವಸ್ತುವಾಗಿಟ್ಟು ಕೊಂಡು ಕನ್ನಡೋತ್ಸವದಲ್ಲಿ ಮಾತನಾಡಿದಾಗ, ” ಚೈನೀಸ್  ಯಾವ ಹೆಸರಿಡಬೇಕು ಮಗುಗೆ ಅಂತ ಡಿಸೈಡ್ ಮಾಡುವಾಗ, ಒಂದು ಹೆವಿ ಮೆಟಲ್ ಬಾಲ್ ಎಸೆಯುತ್ತಾರೆ. ಅದು ಎಲ್ಲೆಲ್ಲಿಗೆ ಹಿಟ್ ಆಗಿ ಯಾವ ಯಾವ ಶಬ್ದ ಗಳನ್ನು ಹೊರಪಡಿಸುತ್ತದೆಯೋ ಅದೆಲ್ಲ ಹೆಸರಾಗುತ್ತದೆ. ಉದಾ. ಬಾಲ್ ಮೊದಲು ಗಾರೆಗೆ ತಗುಲಿ * ಟ್ಯಾಂಗ್ * ಅಂತ ಶಬ್ದ ಮಾಡಿ, ಅಲ್ಲೇ ಎಲ್ಲೋ ನಾಯಿ ಮರಿಗೂ ತಗುಲಿ ಅದು ಚಿವ್ ಚೀವ್ ಅಂತ ಶಬ್ದ ಮಾಡಿದರೆ, ಆಗ ಹೆಸರು ಹೀಗಾಗುತ್ತದೆ * ಟ್ಯಾಂಗ್ ಚಿವ್ ಚೀವ್ * ಅಂತ ಹಾಸ್ಯವಾಗಿ ಹೇಳಿದ್ದರು. ”  ನಿಜಾನೇ ಆದರೂ, ಅನುಮಾನ ಬಿಲ್-ಕುಲ್ ಇಲ್ಲ ಬಿಡಿ!.

ಇಷ್ಟು ಹೇಳಿ, ಇಲ್ಲಿಗೆ ಇವತ್ತಿಗೆ ನನ್ನ “ಹಾಸ್ಯ ಹೆಸರಿನ ಹರಟೆಯನ್ನು” ಮುಗಿಸುತ್ತಾ ವಿರಮಿಸುತ್ತೇನೆ.  ಮುಂದಿನ ಹರಟೆಯಲ್ಲಿ ಭೇಟಿಯಾಗೋಣವೇ? ಖಂಡಿತ ಆಗೋಣ!!!

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಹರಟೆ !, ಹಾಸ್ಯ !. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s