ಅಣ್ಣನ ನೆನಪಿನಲಿ !

ಅಣ್ಣನ ನೆನಪಿನಲಿ………….

“ಸೋಮವಾರ್ ಅಮಾವಾಸ್ಯೆಗಾಗೋಷ್ಟು ಜನ ಇದೀರ, ಇದೊಂದು ಕೆಲಸಮಾಡೋಕ್ ಆಗ್ತಾಇರಲಿಲ್ವಾ?” ಅಂತ ಯಾವಾಗ್ಲೂ ನಮಗೆಲ್ಲಾ ಬೈತಾ ಇದ್ದರು ಅಣ್ಣ (ನಮ್ಮ ತಂದೆ). ನನಗಂತೂ ಇವತ್ತಿಗೂ ಅರ್ಥ ಆಗಿಲ್ಲ, ಸೋಮವಾರ್ ಅಮಾವಾಸ್ಯೆಗೆ ತುಂಬಾ ಜನ ಬೇಕಾ? , ನಾವಿದ್ದಿದ್ದು ಅಣ್ಣ – ಅಮ್ಮಂಗೆ ೭ -ಜನ ಮಕ್ಕಳು, ಗಂಡೊಂದು ಹೆಣ್ಣಾರು. ಅಷ್ಟಕ್ಕೇ ಹಾಗೆ ಹೇಳ್ಬೇಕಿತ್ತಾ? ಅಣ್ಣ ಎಷ್ಟೇ ಬೈದರೂ ಅಷ್ಟೇ ತಮಾಷೆ ಮತ್ತು ಪ್ರೀತಿ ನಮ್ಮೆಲ್ಲರ ಮೇಲೂ ಮತ್ತು ಹೊರಗಿನವರ ಮೇಲೂ ತೋರಿಸುತ್ತಿದ್ದರು. ಅದಕ್ಕೋಸ್ಕರವೇ ದಿನ ನಿತ್ಯದ ಬಾಳಲ್ಲಿ ದಿನಕ್ಕೆ ಹಲವಾರು ಸಾರಿ ಬಂದು ಮಾತಾಡಿಸಿ ಹೋಗುತ್ತಾರೆ. ಅವರ ನೆನಪು ನಿತ್ಯ ನೂತನ. ಸತ್ತು ಸುಮಾರು ೩೨ ವರ್ಷಗಳು ಸಂದಿವೆ, ಆದರೂ ಒಡನಾಟ ಹಾಗೇ ಇದೆ. ಇವತ್ತು ತಂದೆಯ ದಿನವಾದ್ದರಿಂದ ಇದಕ್ಕೆ ಒಂದು ಅಕ್ಷರರೂಪ ಕೊಟ್ಟೇ ಕೊಡಬೇಕೆಂದು ತೀರ್ಮಾನಿಸಿದ ಪ್ರತಿಫಲವಿದು.

ವೃತ್ತಿಯಲ್ಲಿ ಬಹುರೂಪ, ಶಾನುಭೋಗರು, ಲ್ಯಾಂಡ್ ಲಾರ್ಡ್, (ಅಂದರೆ, ಹೊಲ, ಗದ್ಧೆ ಮತ್ತು ಜಮೀನು ಹೊಂದಿದವರು ಅಂತ ಆಗ ಹೇಳುತ್ತಿದ್ದಿದ್ದು) ಫೇರ್ ಪ್ರೈಸ್ ಶಾಪ್ ಫ಼್ರಂಚೈಸ್ ಹೊಲ್ಡರ್, ಡ್ರಗ್ಶಾಪ್ ಓನರ್, ಕಡೆಗೆ ಒಂದು ಕಾಲದಲ್ಲಿ ಟೈಲರ್ ಕೂಡಾ ಆಗಿ ಡುಡಿದಿದ್ದಾರೆ ಬಾಂಬೆಯಲ್ಲಿ “ಬುಕ್ಕಸಾಗರ ಟೈಲರ್ಸ್” ಅನ್ನುವ ಹೆಸರಿನಲ್ಲಿ. ಅದರ ಅಂಗಿಗಳಿಗೆ ಹಾಕುವ ಲೇಬಲ್ ರೋಲ್ ಈಗಲೂ ನಮ್ಮ ಮನೆಯಲ್ಲಿದೆ. ಅಣ್ಣ ಬಹು ಭಾಷಾ ಪಾರಂಗತರು, ಹಾಗೆ ಅವರಕಾಲದಲ್ಲಿದ್ದ “ಸ್ವಾತಂತ್ರ್ಯಕ್ಕೋಸ್ಕರ” ಆದ ಕಾರ್ಯಗಳಲ್ಲಿ ಪಾಲ್ಗೊಂಡವರು. ಊರಿಗೆ ತಿಳಿದವರೂ, ಹೇಳಿ ಕೇಳಿ ಶಾನುಭೋಗರಾದ್ದರಿಂದ ಅಗಾಗ್ಗೆ “ಪಂಚಾಯಿತಿ” ನಡೆಸಿ ಜನರಿಗೆ “ನ್ಯಾಯ” ಒದಗಿಸಿತ್ತಿದ್ದರು. ಊರಲ್ಲಿ ಎಲ್ಲರ ಪ್ರೀತಿಯನ್ನು ಗಳಿಸಿದರೂ ಸ್ವಲ್ಪ ಸಿಟ್ಟಿನ ಸ್ವಭಾವದವರಾಗಿದ್ದಿದು ಒಂದು ಅಚ್ಚರಿಯ ವಿಷಯ. ಅಣ್ನ ಭಾರತದ ಮೂಲೆ ಮೂಲೆಗೂ ಪ್ರವಾಸ ಮಾಡಿದ್ದರು. “ದೇಶ ಸುತ್ತಿ ಕೋಶ ಕಲಿ” ಅಂದಹಾಗೆ, ಎಲ್ಲ ಭಾಷೆಗಳು, ಜನಜೀವನ, ಆಡಳಿತ ಎಲ್ಲ ತಿಳಿದುಕೊಂಡಿದ್ದರು. ಅಷ್ಟೇ ಅಲ್ಲದೇ ಅದನ್ನು ಜನರಸೇವೆಗಾಗಿ ಸದುಪಯೋಗಿಸಿಕೊಂಡವರು. ಯಾರಾದರೂ ಓದಿಸಿದ್ದರೆ, ಅಣ್ಣ ಅವರಿಗೆ ಏನು ಬೇಕೋ ಅದಾಗಬಹುದಿತ್ತು, ಆದರೆ, ಅದಕ್ಕೆ ಅವಕಾಶವಿಲ್ಲದಂತೆ ತಮ್ಮ ಎಳೆಯವಯಸ್ಸಿನಲ್ಲೇ ಅಂದರೆ ೫- ವರುಷ ವಯಸ್ಸಿದ್ದಾಗಲೇ ತಂದೆಯನ್ನು ಕಳೆದುಕೊಂಡು, ತಮ್ಮ ಅಕ್ಕನಿಗೆ ಭಾರವಾಗಬಾರದೆಂದು ಯಾರಿಗೂ ಗೊತ್ತಿಲ್ಲದೇ ಊರುಬಿಟ್ಟು ಹೋಗಿ, “ಚೈಲ್ಡ್ ಲೇಬರ್” ಮಾಡಿಕೊಂಡು, ವಿದ್ಯೆಗಳನ್ನು ಮತ್ತು ಭಾಷೆಗಳನ್ನೂ ಕಲಿತು, ದೊಡ್ಡವರಾದಮೇಲೆ ಊರಿಗೆ ಹಿಂತಿರುಗಿ ಕೆಲಸಮಾಡಲು ಶುರುಮಾಡಿದ್ದರಂತೆ. ನಮ್ಮ ಅಜ್ಜಿ ಮಗಳ ಮದುವೆ ಮಾಡಿ ಅವರೊಡನೆ ಇದ್ದು, ಅಣ್ಣ ಬಂದಮೇಲೆ ಅವರಲ್ಲಿಗೆ ಬಂದು ಅವರಿಗೆ ಮದುವೆ ಮಾಡಿದರಂತೆ.

ಶಾನುಭೋಗರ ಕೆಲಸದಲ್ಲಿ ಮನೆ ಭರ್ತಿ ಕಾಗದ ಪತ್ರಗಳು, ಯಾವಾಗಲೂ ಬರವಣಿಗೆ, ರೈತರು ಯಾವಾಗಲೂ ನಮ್ಮ ಮನೆಗೆ ಬಂದಿರುತ್ತಿದ್ದರು. ಹೀಗೇ, ಹೊರಗೆ ಅಂಗಳದಲ್ಲಿ ಅವರೊಡನೆ ಏನೋ ಕಾರ್ಯದಲ್ಲಿ ತೊಡಗಿದಾಗ, ನಾವ್ಯಾರಾದರೂ ಅಡಿಗೆಮನೆಯಲ್ಲಿ “ಸ್ಟೀಲ್ ತಟ್ಟೆ, ಲೋಟ” ಬೀಳಿಸಿ ಜೋರಾಗಿ ಶಬ್ಧ ಮಾಡಿದಾಗ ಅಣ್ಣ ನಮಗಿಂತಲೂ ಜೋರಾಗಿ ಕೂಗಿ “ಏನ್ರೋ ಅದು “ಅನಾಹುತ” ಅಂತ ಕೇಳುತ್ತಿದ್ದರು.  ನಾವೆಲ್ಲ ಸಣ್ಣವರು ನಮ್ಮ ಅಮ್ಮನ್ನ “ಅನಾಹುತ” ಅಂದ್ರೆ ಏನು? ಅಂತ ಕೇಳಿದಾಗ ನಮ್ಮ ಅಣ್ಣ ನಮಗಿಂತ ಸ್ವಲ್ಪ ದೊಡ್ಡವನು ಎಲ್ಲ ಚೆನ್ನಾಗಿ ಅರ್ಥವಾದವನಂತೆ “ಅನಾಹುತ” ಅಂದ್ರೆ, ತಟ್ಟೆ, ಲೋಟ ಎಲ್ಲ ಬೀಳಿಸೋದು ಅಂತ ಹೇಳಿ ನಮ್ಮಮ್ಮನ ಹತ್ರ ಬೈಸಿಕೊಂಡಿದ್ದ “ಅನಾಹುತ ಅನ್ನೋ ಪದಕ್ಕೇ ಅನಾಹುತ ಮಾಡ್ಬಿತ್ಯಲ್ಲೋ” ಅಂತ. ಹೇಎಗೆ ತಮಾಷೆ ಜೊತೆಗೆ ಪದಗಳ ಅರ್ಥ ತಿಳೀತಿದ್ವಿ. ಅಣ್ಣ ಊಟದಜೊತೆಗೆ ಬೆಳ್ಳುಳ್ಳಿ ಆರೋಗ್ಯ ಅಂತ ತಿನ್ನುತ್ತಿದ್ದರು. ಬೇರೆಯವರಿಗೆ ಇಷ್ಟೈಲ್ಲ ಅಂತ ನಮ್ಮಮ್ಮ ಅಡಿಗೆಗೆ ಹಾಕ್ತಾ ಇರಲಿಲ್ಲ. ಹೀಗೇ ಒಂದು ಸಲ ಊಟಕ್ಕೆ ಕುಳಿತುಕೊಳ್ಳುವ ಮೊದಲು ಕೈ ತೊಳೆಯುತ್ತಾ ಅಲ್ಲೇ ಇದ್ದ ನಮ್ಮಣ್ಣನಿಗೆ ಹೇಳಿದ್ರು “ಗಾರ್ಲಿಕ್” ತಗೊಂಡ್ಬಾ” ಅಂತ. ಯಾವಾಗಲೂ ಬೆಳ್ಳುಳ್ಳಿ ಅಂತನೇ ಹೇಳ್ತಾ ಇದ್ದರು, ಅದ್ಯಾಕೋ ಅವತ್ತು “ಗಾರ್ಲಿಕ್” ಅಂದ್ರು. ಅಣ್ಣನಿಗೆ ಗಾರ್ಲಿಕ್ ಅಂದ್ರೆ ಏನು ಅಂತ ಗೊತ್ತಿರಲಿಲ್ಲ (ಅನಾಹುತ ಅಂದ್ರೆ ಏನು ಅಂತ ಅರ್ಥಮಾಡಿಕೊಂಡಷ್ಟು ಸುಲಭವಾಗಿರಲಿಲ್ಲ), ಹಾಗೇ ಸ್ವಲ್ಪ ಕಾಮನ್ಸೆನ್ಸ್ ಉಪಯೋಗಿಸಿದ. ಹೇಗಿದ್ರೂ ಕೈ ತೊಳೆದುಕೊಳ್ಳುತ್ತಿದ್ದರು, ಅಮ್ಮ ಊಟಕ್ಕೆ ತಟ್ಟೆ ಇಟ್ಟಿದ್ದರು, ಈಗನೋಡಿ ತಮಾಷೆನಾ…….ಅಣ್ಣ ಒಂದು ಟವಲ್ ತಂದು ನಮ್ಮ ತಂದೆಗೆ ಕೊಡುತ್ತಾ “ಟವಲ್ಲಾ” ಅಂದ. ನಮಗೂ ಗಾರ್ಲಿಕ್ ಅಂದ್ರೆ ಗೊತ್ತಿರಲಿಲ್ಲ, ಆದ್ರೂ ನಗು ಚೆನ್ನಾಗಿ ಬರುತಿತ್ತು. ನಮ್ತಂದೆ ಟವಲ್ ನೋಡಿ “ಏ ಗಾರ್ಲಿಕ್ ತಗೊಂಡ್ಬಾರೋ ಅಂದ್ರೇ ತವಲ್ ತಂದಿದ್ದಾನೆ, ಪೆದ್ ಮುಂಡೇದೆ. ನಿಮ್ಮ ಅಮ್ಮನ ಮುಖ ಏನ್ ನೋಡ್ತೀಯಾ? ಇನ್ನೊಂದ್ ಸಲ “ಗಾರ್ಲಿಕ್ ತಗೊಂಡ್ಬಾ” ಅಂದ್ರು. ಅಮ್ಮನ ಮುಖಬೇರೆ ನೋಡ್ಬೇಡಾ ಅಂತ ಹೇಳಿದ್ರು, ಈಗ ಏನ್ ಮಾಡೋದು ಅಂತ ಯೋಚಿಸಿ, “ಚಾಪೆ” ತಂದು ಊಟದ ತಟ್ಟೆ ಹಿಂದಿಟ್ಟ. ಈಗ ನಮ್ತಂದೆಗೆ ಒಂದ್ಕಡೆ ನಗು, ಮತ್ತೊಂದ್ ಕಡೆ ಸಿಟ್ಟು ಬಂತು. ಈಗಲೂ ಬೆಳ್ಳುಳ್ಳಿ ಅಂತ ಹೇಳಲಿಲ್ಲ, ಮತ್ತೆ ಗಾರ್ಲಿಕ್ ಅಂದ್ರು. ನಮ್ಮಮ್ಮ ಇವನು ಮತ್ತೆ ಇನ್ನೇನೋ ತರ್ತಾನೆ ಅಂತ ನೀರು ತರುತ್ತಾ “ಅಲ್ಲಿ ಬೆಳ್ಳುಳ್ಳಿ” ಇದೆಯಲ್ಲಾ ಅದರಲ್ಲೊಂದ್ ಬೆಳ್ಳುಳ್ಳಿ ತಗೊಂಡ್ಬಾ ಅಂತ ನಮ್ಮ ಅಣ್ಣನಿಗೆ ಹೇಳಿದ್ರು. ಅಲ್ಲೇ ಇದ್ದ ನಾವೆಲ್ಲಾ ಕೈಯಲ್ಲಿ ಒಂದೊಂದು ಬೆಳ್ಳುಳ್ಳಿ ಹಿಡಿದ್ಕೊಂಡ್ ಬಂದು ನಮ್ಮತಂದೆಗೆ ಕೊಟ್ಟು, ಅಣ್ಣನಿಗೆ ಬೈಸಿದ್ವಿ “ನಿನಗಿಂತ ಸಣ್ಣವರಿಗೇ ಗೊತ್ತು ಗಾರ್ಲಿಕ್ ಅಂದ್ರೆ ಬೆಳ್ಳುಳ್ಳಿ” ಅಂತ ಅಂದ್ರು. ಹೀಗೆ ಅಣ್ಣ ನಮಗೆ ಕನ್ನಡ, ಇಂಗ್ಲೀಷ್ ಎಲ್ಲ ಒಟ್ಟಿಗೇ ಕಲಿಸುತ್ತಿದ್ದರು.

ಅಮ್ಮ- ಅಣ್ಣನ ಮದುವೆಯಾಗಿ ಹೊಸದಂತೆ, ಮನೆಯ ಎದುರಿನಲ್ಲಿ ದೇವಸ್ತಾನ, ಅದರ ಪಕ್ಕ ಅರ್ಚಕರ ಮನೆ, ಅರ್ಚಕರಿಗೆ ಎಲ್ಲರೂ “ಭಟ್ಟರು” ಅಂತ ಕರೆಯುವುದು. ಅವರ ಮಕ್ಕಳೆಲ್ಲ ನಮ್ಮ ಮನೆಗೆ ತುಂಬಾ ಬಂದು ಆಟವಾಡಿಕೊಳ್ಳುತ್ತಿದ್ದರು. ಅಣ್ಣ ಅವರ ಗಂಡು ಮಕ್ಕಳಿಗೆ (ತುಂಬಾ ಬಾಳೆ ಹಣ್ಣು ತಿನ್ನುತ್ತಿದ್ದರಿಂದ) ಪುಟ್ಟಬಾಳೆ, ರಸಬಾಳೆ, ಏಲಕ್ಕಿಬಾಳೆ ಅಂತ ಹೆಸರಿಟ್ಟಿದ್ದರು. ಅಮ್ಮನಿಗೆ ಆ ವಿಷಯ ಸರಿಯಾಗಿ ಗೊತ್ತಿತ್ತು, “ರಸಬಾಳೆ” ಬಂದ, ತಿಂಡಿಕೊಡು ಅಂದರೆ ಯಾರ್ ಬಂದಿದಾರೆ ಅಮ್ಮನಿಗೆ ಗೊತ್ತಾಗುತಿತ್ತು. ಆದರೆ, ಅಣ್ಣ ಒಂದು ದಿನ ಪಾರ್ವತಿ, “ಬಟ್ಸನ್ ಬಂದಿದಾನೆ” ಏನಾದ್ರೂ ತಿನ್ನಕ್ಕೆ ಕೊಡು ಅಂದ್ರಂತೆ. ಅಮ್ಮ “ಯಾರು ಬಟ್ಸನ್” ಅಂದ್ರೆ ? ನಾನ್ಯಾವತ್ತೂ ನೋಡೇ ಇಲ್ಲ, ಎಷ್ಟು ವರುಷಾ? ಏನೋ ಕಿರಿಸ್ತಾನರ ಹೆಸರಿದ್ದ ಹಾಗೆ ಇದೆ ಅಂದ್ಕೊಂಡು ಅಡಿಗೆಮನೆಯಿಂದ ವರಾಂಡಕ್ಕೆ ಬಂದ್ ನೋಡಿದ್ರೇ, “ರಸಬಾಳೆ” ನಮ್ಮತಂದೆ ತೊಡೆಮೇಲೆ ಕೂತಿತ್ತಂತೆ. ಅಣ್ಣನ ಲಾಜಿಕ್ ನಲ್ಲಿ “ಭಟ್ಟರ ಮಗ” = ಬಟ್ಸನ್ ಆಗಿದ್ದು ಅಮ್ಮನಿಗೆ ಊಹಿಸಲೂ ಸಾಧ್ಯವಾಗಿರಲಿಲ್ಲ.

ಅಣ್ಣನ ದಿನನಿತ್ಯದ ತಮಾಷೆಗೆ ಮಿತಿಯೇ ಇರಲಿಲ್ಲ. ಅಣ್ಣ ಮತ್ತು ಭಟ್ಟರು ತುಂಬಾ ಸ್ನೇಹಿತರು. ಪ್ರತಿದಿನಾ ಸಂಜೆ ಸ್ವಲ್ಪ ಹೊತ್ತು ನಮ್ಮ ಮನೆಯ ಮುಂದೆ ಕುಳಿತು ಹೋಗೋರ್-ಬರೋರ್ನೆಲ್ಲ ಮಾತಾಡಿಸಿಕೊಂಡು ಹರಟೆ ಹೋಡೀದಿದ್ರೆ, ಇಬ್ರಿಗೂ ನಿದ್ದೇ ಬರುತ್ತಿರಲಿಲ್ಲ. ತುಂಬಾ ಸ್ನೇಹವಿದ್ದಿದ್ದರಿಂದ ಸಲಿಗೆಯು ಅಷ್ಟೇ ಇತ್ತು. ಒಬ್ಬರನ್ನೊಬ್ಬರು ಚೆನ್ನಾಗಿ ಆಡಿಕೊಂಡು ನಗುತ್ತಿದ್ದರು. ಭಟ್ಟರು ಒಂದುಸಲ ಏನೋ ಮಾತಾಡುತ್ತಾ, “ನಿಮಗಷ್ಟು ಮಡಿ, ಮೈಲಿಗೆ ಇಲ್ಲ” ಅಂದರು. ಅಣ್ಣನಿಗೆ ಮಾತಾಡಕ್ಕೆ ಹೇಳ್ಕೊಡಬೇಕಾ? ” ನೀವೇನ್ ಸಾಚ ಬಿಡಿ ಭಟ್ರೇ, “ಕಂಬವೇ ತಣ್ಣಿ” ಅಂತ ತೀರ್ಥ ಕುಡಿದು, ಎಂಜಲು ಅಲ್ಲೇ ಕಂಬಕ್ಕೆ ಒರಸಿಬಿಡ್ತೀರಲ್ಲ” ಅಂತ ಹೇಳಿ ಇಬ್ಬರೂ ಜೋರಾಗಿ ನಗೋಕ್ಕೆ ಶುರುಮಾಡಿಬಿಡುತ್ತಿದ್ದರು. ನಗೋಕೆ ದಿನಾ ವಿಷಯಗಳು ಇರುತ್ತಿದ್ದವು. ನಾವೆಲ್ಲಾ ಮನೆಯಿಂದ ಹೊರಗೆ ಹೊಗಿ, ಬಂದು ಮಾಡೋವಾಗ ಇವೆಲ್ಲಾ ಕಿವಿಗೆ ಬೀಳುತ್ತಿತ್ತು ( ಅದರಿಂದ ಮೇಲಿನ ಕೊಟೇಶನ್ ಅಲ್ಲಿ ಪದಗಳು ತಪ್ಪಿರಲೂ ಬಹುದು).

ಮುಂದುವರೆಯುವುದು………..

(ಇವತ್ತಿಗೆ ಇಷ್ಟು ಸಾಕು, ಸಮಯಸಿಕ್ಕಿದಾಗ ಮುಂದುವರೆಸುತ್ತೇನೆ)

ಜಗತ್ತಿನ ಎಲ್ಲಾ ತಂದೆಯರಿಗೆ “ತಂದೆಯ ದಿನದ ಹಾರ್ದಿಕ ಶುಭಾಶಯಗಳು”!!!!!

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಲೇಖನ !. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s