ಕಡೂರಿನ ದಿನಗಳು – ಚಹರೆಗಳು!

ಕಡೂರಿನ ದಿನಗಳು – ಚಹರೆಗಳು!

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಅದೇನು ಮನಸ್ಸಿನ ಪ್ರವೃತ್ತಿಯೋ ಕಾಣೆ? ಕೆಲವೊಂದು ಮುಖ ಚಹರೆಗಳು ಅಗಾಗ ಅಲ್ಲಲ್ಲಿ ಮನಸ್ಸಿನಾಳದಿಂದ ಹೊರಬಂದು ಕಣ್ಣ ಮುಂದೆ ಸುತ್ತಾಡಿ ಒಂದು ರೀತಿಯ ಸವಿಯಾದ ಉತ್ಕಂಠತೆಯನ್ನು ನೀಡಿ ಸದ್ದಿಲ್ಲದೇ ತನ್ನಪಾಡಿಗೆ ತಾನೇ ಮರೆಯಾಗುವುದು. ಈ ನೆನಪಿನ ಶಕ್ತಿ ಮುಖದ ಚಹರೆಗಳನ್ನು ನೆನಪಿಸುವ ಮಟ್ಟಿಗೆ ಬೇರೆಯದನ್ನು ನೆನಪಿಸಲು ಅಶಕ್ತವಾದಂತೆನಿಸುತ್ತದೆ. ಕೆಲವೊಂದು ಮುಖಗಳು ತುಂಬಾ ಪರಿಚಯವಾಗಿರಬೇಕಿಲ್ಲ, ಬರೀ ಒಂದೇ ಸಾರಿ ನೋಡಿ ಮಾತನಾಡಿಸಿರಬಹುದು, ಮತ್ತೆ ಕೆಲವು ಚಿರಪರಿಚಿತವಾಗಿದ್ದರೂ ಇರಬಹುದು, ಇನ್ನಷ್ಟೂ ಊಹಾಪೂರಕವಾಗಿರಲೂಬಹುದು. ಇದೊಂದು ವಿಸ್ಮಯವೇ ಸರಿ, ಕೆಲವೊಮ್ಮೆ ಪರಿಚಯ ಮುಂಚಿತವಾಗಿ ಅವರ ಬಗ್ಗೆ ಕಲ್ಪನೆಯನ್ನು ಕಟ್ಟಿ, ಅವರ ಧ್ವನಿಯನ್ನು ದೂರವಾಣಿಯಲ್ಲಿ ಆಲಿಸಿ, ಅವರು ಹೀಗಿರಬಹುದೆಂದು ಮನಸ್ಸಿನಲ್ಲಿ ಊಹಿಸಿ ಒಂದು ಚಹರೆಯನ್ನು ಕಟ್ಟಿ ಅವರ ಮುಖಾ ಮುಖಿ ಭೇಟಿಯಾದಾಗ ಆಶ್ಚರ್ಯವೆಸಗಲೂ ಬಹುದು.

ಕಡೂರಿನ ಮುಖಗಳು (ಚಹರೆಗಳು) ದಿನ ನಿತ್ಯವೂ ಮನಸಲ್ಲಿ ಬಂದು ಹೋಗುತ್ತವೆ. ಕಡೂರು ಬಿಟ್ಟು ಸುಮಾರು ೪೦ ವರುಷಗಳು ಕಳೆದಿವೆ. ಕಾಲಾಯ ತಸ್ಮೈ ನಮಃ – ವರ್ತಮಾನದಲ್ಲಿ ಇರುವಂತೆ ಹಂದರವನ್ನು ಕಟ್ಟುತ್ತೆ ಈ ಮನಸ್ಸು. ಅಂತಹ ಚಹರೆಗಳಲ್ಲಿ ಮೊದಲು ಬರುವನು ಹಾಲಿನ ವಿಶ್ವಣ್ಣ. ವಿಶ್ವಣ್ಣನ ಮುಖ ಉದ್ದಗಿತ್ತು, ನೀಳನಾಸಿಕ, ದೊಡ್ಡ ಹಣೆಯಲ್ಲಿ ಒಂದೆರಡು ಅಡ್ಡ ಗೆರೆಗಳು. ತಲೆಕೂದಲು ಸ್ವಲ್ಪ ನೆರೆದಿತ್ತು ( ಅರ್ಧ ಕಪ್ಪು/ ಅರ್ಧ ಬಿಳಿ), ಎಣ್ಣೆ ಹಚ್ಚಿ ಬಾಚುತ್ತಿದ್ದ, ಹಾಗೇ ಮುಂದಲೆಯಲ್ಲೊಂದು ಸಣ್ಣ ಗುಂಗುರು ಬಿಟ್ಟು ಬೇರೇ ಕೂದಲನ್ನು ಎಣ್ಣೆಯಿಂದ ತೀಡಿ ಪಕ್ಕಕ್ಕೆ ಬಾಚುತ್ತಿದ್ದ. ಮೀಸೆ ಗಡ್ಡಕ್ಕೆ ಮುಖದಲ್ಲಿ ಅವಕಾಶವಿರಲಿಲ್ಲ. ಯಾವಾಗಲೂ ಹಸು, ಕರು, ಎಮ್ಮೆಗಳ ಕೊಠಡಿಯಲ್ಲಿ ಕೆಲಸಮಾಡುತ್ತಿದ್ದರೂ ಹೊರಗೆ ಹೊರಟಾಗ ಬಿಳಿ ಪಂಚೆ ಮತ್ತು ತುಂಬು ತೋಳಿನ ಶರಟು ಹಾಕೇ ಬರುತ್ತಿದ್ದಿದ್ದು. ಎಲ್ಲರ ಮನೆಗೆ ಹಾಲನ್ನು ಚೊಂಬಿನಲ್ಲಿ ತಗೊಂಡು ಬರುತ್ತಿದ್ದ. ಮನೆಗೆ ಹಾಲು ತರುವುದರ ಜೊತೆ ಹೊಸ ಹೊಸ ವಿಷಯಗಳನ್ನೂ ತಂದು ತಿಳಿಸುತ್ತಿದ್ದ. ಅದಕ್ಕೇ ಹಾಲಿನ ವಿಶ್ವಣ್ಣ ಅಂದ್ರೇ ಕಡೂರಿನ ಕೋಟೆಯಲ್ಲಿ ತುಂಬಾ ಖ್ಯಾತಿಯಾಗಿದ್ದ. ಬಿಸಿ ಬಿಸಿ ಸುದ್ಧಿಗಳನ್ನು ಒಂದು ಮನೆಯಿಂದ ಇನ್ನೊಂದು ಮನೆಗೆ ಹೇಳುತ್ತಿದ್ದರಿಂದಲೋ ಏನೋ ಕೆಲವರು ಅವನನ್ನು ಖ್ಯಾತೆ ವಿಶ್ವಣ್ಣ ಅಂತಲೂ ಕರೆದಿದ್ದುಂಟು.

ಭಾಗೀರತಮ್ಮ ನಮ್ಮ ಮನೆಯಿಂದ ಒಂದು ನಾಲ್ಕಾರು ಮನೆಯಿಂದಾಚೆಗೆ ವಾಸವಿದ್ದರು. ಕರೀ ಮುಖ, ಮೂಗು ಸ್ವಲ್ಪನೀಳವಾಗೇ ಇತ್ತು, ಅದಕ್ಕೊಂದು ೩- ಬಿಳಿ ಹರಳಿನ ಮೂಗುತಿ, ಬಹಳಷ್ಟು ನೆರೆತ ಕೂದಲು. ಕೂದಲನ್ನು ಚೆನ್ನಾಗಿ ಹಿಂದಕ್ಕೆ ಬಾಚಿ ಜಡೆ ಹೆಣೆಯುತ್ತಿದ್ದರು. ಮೂಗುತಿಯ ಹರಳು ಫಳ ಫಳ ಹೊಳೆಯುತ್ತಿದ್ದು ಮುಖಕ್ಕೆ ಕೊಳೆಯಿದ್ದರೂ ಕಳೆ ಕೊಡುತ್ತಿತ್ತು. ಹೆಸರಿಗೆ ತಕ್ಕಂತೆ ಅವರ ಉಧ್ಯಾನವನದಲ್ಲಿ ಗಿಡಗಳಿಗೆ ಚೆನ್ನಾಗಿ ನೀರೆರೆದು ಕನಕಾಂಬರ, ಮಲ್ಲಿಗೆ, ಜಾಜಿ , ಸಂಪಿಗೆ ಎಲ್ಲ ಹೂವುಗಳ ಗಿಡಗಳನ್ನು ಬೆಳೆಸಿದ್ದರು. ಅವರು ಪೇಟೆ ಹೂವಾಡಗಿತ್ತಿಗೆ ಕನಕಾಂಬರವನ್ನು ಖರೀದಿಗೆ ಸಹ ಕೊಡುತ್ತಿದ್ದರು. ನಮ್ಮ ಮನೆಯಲ್ಲಿ ದುಂಡು ಮಲ್ಲಿಗೆ ಚೆನ್ನಾಗಿ ಬೆಳೆದಿತ್ತು. ಅದ್ಯಾಕೋ ಕನಕಾಂಬರ ಚೆನ್ನಾಗಿ ಬರುತ್ತಿರಲಿಲ್ಲ. ನಮ್ಮ ಅಜ್ಜಿ ಕೋಟೆಯಲ್ಲಿ ದಿನ ನಿತ್ಯವೂ ವಾಯು ವಿಹಾರಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ಅವರ ಜೊತೆ ನಾವೂ ಕೆಲವೊಮ್ಮೆ ಹೋಗಿದ್ದುಂಟು. ಅಜ್ಜಿ ಭಾಗೀರತಮ್ಮನ್ನ ಕನಕಾಂಬರ ಸಸಿ ಕೊಡಿ ಎಂದು ತುಂಬಾ ನಮ್ರತೆಯಿಂದ ಕೇಳುತ್ತಿತ್ತು. ಆದರೂ ಭಾಗೀರತಮ್ಮ ನಗುಮುಖದಿಂದ, ಅದಿನ್ನೂ ಸಣ್ಣ ಸಸಿಗಳು ಬೆಳೆದಮೇಲೆ ಕೋಡುತ್ತೀನಿ ಅನ್ನುವರೇ ಹೊರತು ಕೊಡುತ್ತಿರಲಿಲ್ಲ. ಅಜ್ಜಿ ಮಲ್ಲಿಗೆ ಬಳ್ಳಿ ತಗೊಂಡು, ಟ್ರೇಡ್ ಇನ್ ತರಹವೂ ಪ್ರಯತ್ನ ಮಾಡಿ ವಿಫಲವಾಗಿತ್ತು ಕನಕಾಂಬರ ಸಸಿ ಗಿಟ್ಟಿಸುವುದರಲ್ಲಿ. ಹಾಗಾಗಿ ಭಾಗೀರತಮ್ಮನ ಮುಖ ಪರಿಚಯ ತುಂಬಾ ಇತ್ತು ನಮಗೆಲ್ಲ.

ವೆಂಕಮ್ಮ ಒಬ್ಬರು ಬಡ ಹೆಂಗಸು. ಗಂಡ ಶಾಲಾ ಪ್ರಾಧ್ಯಪಕರಾಗಿದ್ದರೂ ಮನೆ ತುಂಬಾ ಮಕ್ಕಳು, ಹಾಗಾಗಿ ಮೆಣಸಿನಪುಡಿ, ಚಟ್ನಿ ಪುಡಿ, ಇದನ್ನೆಲ್ಲ ಮನೆ ಮನೆಗಳಿಗೆ ಹೋಗಿ ಮಾಡಿ ಸ್ವಲ್ಪ ಹಣಕಾಸು ತಂದು ಸಂಸಾರದ ಹಣಕಾಸು ತೊಂದರೆ ನಿವಾರಿಸುತ್ತಿದ್ದರು. ತುಂಬಾ ನಾಚಿಕೆ ಸ್ವಭಾವದವರು. ಮಧ್ಯಮ ಬಣ್ಣದ ಮುಖ, ಸುಂದರವಾಗೇ ಇದ್ದರೂ ತಲೆಯ ಮೇಲೆ ಸೆರಗು ಹಾಕಿದ್ದರಿಂದ ಮುಖ ಪೂರ್ತಿ ಕಾಣಿಸುತ್ತಿರಲಿಲ್ಲ. ಮೇಲಿನ ಹಲ್ಲು ಸ್ವಲ್ಪ ಉಬ್ಬಾಗಿತ್ತು, ಆದರೂ ಹಸನ್ಮುಖಿಯಾಗಿದ್ದರು. ಅವರು ಅವರ ಗಂಡನ ವಿಷಯ ಹೇಳುವಾಗಲೂ “ಗಂಡ” ಅಂತ ಹೇಳುತ್ತಿರಲಿಲ್ಲ. “ಗಂಡಸರು” ಅಂತ ಬಹುವಚನದಲ್ಲಿ ತುಂಬಾ ಸಣ್ಣ ಧ್ವನಿಯಲ್ಲಿ ಹೇಳಿ, ಆಮೇಲೆ ಬೇರೆ ಪದಗಳನ್ನು ಸ್ವಲ್ಪ ಜೋರಾಗಿ ಹೇಳುತ್ತಿದ್ದರು. ಉದಾ: ನನಗೆ ಅವತ್ತು ಬರಲಾಗಲಿಲ್ಲ ಮೆಣಸಿನಪುಡಿ ಕುಟ್ಟಕ್ಕೆ ಏಕೆಂದರೆ, “ಗಂಡಸರು” ಮನೆಯಲ್ಲಿರಲಿಲ್ಲ ( ಅಂದರೆ, ಅವರ ಗಂಡ ಎಲ್ಲೋ ಹೊರಗೆ ಹೋಗಿದ್ದರು, ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರಲಾಗಲಿಲ್ಲ ಅಂತ). ಈ ಗಂಡಸರು ವಿಷಯಕ್ಕಾಗಿ ನಮಗೆಲ್ಲ ಅವರ ಮುಖ ಪರಿಚಯ ಬಹಳವಾಗೇ ಇತ್ತು ಅನ್ನಬಹುದು.

ಬಾಂಬೆರಾಣಿ ವಿಷಯ ಅಂತೂ ಹೇಳಲೇ ಬೇಕು. ಆಸ್ಪತ್ರೆ ಕಾಂಪೌಂಡರ್ ನಾಗಮ್ಮನ ಮಗಳೇ ಬಾಂಬೆರಾಣಿ. ಅವಳಿಗೆ ಬಾಂಬೆರಾಣಿ ಅಂತ ಕರೆಯುತ್ತಿದ್ದಿದ್ದು ಯಾಕೆ ಅಂದರೆ…ಅವಳಿಗೆ ಬಾಂಬೆಯಲ್ಲಿ ಕೆಲಸ. ಅವಳು ವರುಷದಲ್ಲಿ ಒಂದು ತಿಂಗಳಿಗೆ ಕಡೂರಿಗೆ ರಜಕ್ಕೆ ಬರುತ್ತಿದ್ದಳು. ಬಂದಾಗ ದಿನನಿತ್ಯವೂ ಚೆನ್ನಾಗಿ ಅಲಂಕರಿಸಿಕೊಂಡು ಕೋಟೆಯಿಂದ ಪೇಟೆಗೆ ಹೋಗುತ್ತಿದ್ದಳು. ಹೆಸರು ಸುಂದರಿ, ಮುಖವೆಲ್ಲಾ ವಂದರಿ ಅನ್ನೋಹಾಗೆ ಅವಳ ಮುಖವೆಲ್ಲಾ ಮೊಡವೆಗಳಿಂದ ತೂತಾಗಿತ್ತು. ಆದರೂ ಮೇಕಪ್ ಹಾಕಿ ಮುಚ್ಚುತ್ತಿದ್ದಳು. ಚೌರಿ ಹಾಕಿ, ಉದ್ದದ ಜಡೆಹಾಕಿ, ಹಣೆಗೆ ದೊಡ್ಡ ಕುಂಕುಮವಿಟ್ಟು, ತುಟಿಗೆ ಬಣ್ಣ ಬಳಿಯದೇ ಹೊರಗೆ ಬರುತ್ತಿರಲಿಲ್ಲ. ಕಲಿತ ಹುಡುಗಿ ಕುದುರೆ ನಡಿಗೆ ಹಾಕುತ್ತ ಬರುತಿತ್ತು ಅನ್ನುವ ಹಾಗೆ ಹೈ ಹೀಲ್ಸ್ ಹಾಕಿ ನಡೆಯುತ್ತಿದ್ದಳು. ಕಿವಿಗೆ ಭಾರದ ಲೋಲಕ್ ಕಿವಿತೂತವನ್ನು ದೊಡ್ದ ಕಿಂಡಿ ಮಾಡಿತ್ತು. ನಾಗಮ್ಮ ಅವಳ ಹಿಂದೆ ನಡೆಯುತ್ತಿದ್ದಳು….ನನ್ನ ಮಗಳು ಅಂತ ಬೀಗುತ್ತಾ. ಅವಳು ಬೀದಿಯಲ್ಲಿ ಬಂದಳೆಂದರೆ ಸಾಕು, ಎಲ್ಲರೂ ಬಾಂಬೆರಾಣಿ ಬಂದಳು ಅಂತ ಜಾಗ ಬಿಡುತ್ತಿದ್ದರು.

ಹೀಗೆ ಹತ್ತು ಹಲವಾರು ಮುಖ ಚಹರೆಗಳು ಮನಸ್ಸಿನಲ್ಲಿ ಆಗಾಗ ಬಂದು ನೆನಪಿನ ಸುಳಿಯನ್ನು ತಂದು ಮರೆಯಾಗುತ್ತಿರುತ್ತವೆ.

Advertisements
Posted in ಪ್ರಭಂದ ! | Tagged | ನಿಮ್ಮ ಟಿಪ್ಪಣಿ ಬರೆಯಿರಿ

ಭಾರತ ಕಂಡ ದಾರ್ಶನಿಕರು – ಶ್ರೀ ರಾಘವೇಂದ್ರ ಸ್ವಾಮಿ!!!

ಭಾರತ ಕಂಡ ದಾರ್ಶನಿಕರು – ಶ್ರೀ ರಾಘವೇಂದ್ರ ಸ್ವಾಮಿ!!!

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಶ್ರೀ ರಾಘವೇಂದ್ರ ಸ್ವಾಮಿಯವರು ಕ್ರಿಸ್ತ ಶಕ ೧೫೮೧ ರಲ್ಲಿ ತಮ್ಮಣ್ಣ ಭಟ್ಟರಿಗೆ ಎರಡನೇ ಮಗನಾಗಿ ಜನಿಸಿದರು. ತಮ್ಮಣ್ಣ ಭಟ್ಟರು ವಿಜಯನಗರದ ಆಸ್ಥಾನದಲ್ಲಿ ವಿಧ್ವಾಂಸರಾಗಿದ್ದರು. ವಿಜಯನಗರ ಆಸ್ಥಾನ ಅಧಃಪತನದ ನಂತರ ತಮ್ಮಣ್ಣ ಭಟ್ಟರು ಕಂಚೀಪುರಂ ಹತ್ತಿರದ ಭುವನಗಿರಿ ಎಂಬ ಹಳ್ಳಿಯಲ್ಲಿ ನೆಲಸಿದರು. ಶ್ರೀ ರಾಘವೇಂದ್ರ ಸ್ವಾಮಿಯವರು ವೆಂಕಟೇಶ್ವರನ ಅನುಗ್ರಹದಿಂದ ಭುವನಗಿರಿಯಲ್ಲಿ ಜನಿಸಿದ್ದರಿಂದ ಅವರಿಗೆ ವೆಂಕಟನಾಥ ಎಂದು ಹೆಸರಿಡಲಾಯಿತು. ವೆಂಕಟೇಶ್ವರ ದೇವರು ತಮ್ಮಣ್ಣ ಭಟ್ಟರಿಗೆ ಕನಸಿನಲ್ಲಿ ಬಂದು ಈ ಪುತ್ರನನ್ನು ಅನುಗ್ರಹಿಸಿದರಂತೆ. ಹೀಗೆ ಹುಟ್ಟುವಾಗಲೇ ದೈವತ್ವ ಗುಣ ಅವರದಾಗಿತ್ತು.

ವೆಂಕಟನಾಥನಿಗೆ ಸಣ್ಣ ವಯಸ್ಸಿನಲ್ಲೇ ದೇವರ ಗುಣಗಳಿದ್ದವು. ಅವನ ಅಕ್ಷರಾಭ್ಯಾಸದ ಮೊದಲ ದಿನವೇ ಅವನು ತಂದೆಯನ್ನು ಕೇಳಿದ ಪ್ರಶ್ನೆ ಹೀಗಿತ್ತು – ಓಂ ಕಾರವು ಹೇಗೆ ಭಗವಂತನ ಸರ್ವಾಂತಯಾಮಿ ಸತ್ಯವನ್ನು ಪ್ರತಿನಿಧಿಸುತ್ತೇ??? ಅವನು ಸಣ್ಣ ವಯಸ್ಸಿನ್ನಿಂದಲೇ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಅತಿ ವೇಗದಿಂದ ತನ್ನನ್ನು ತೊಡಗಿಸಿಕೊಂಡನು. ಪ್ರವಚನಗಳಲ್ಲಿ ಅತಿ ಆಸಕ್ತಿಯಿಂದ ತನ್ನ ಪ್ರಶ್ನೆಗಳನ್ನು ಗುರುವರ್ಯರನ್ನು ಕೇಳಿ, ತನ್ನ ಅನಿಸಿಕೆಯನ್ನು ಹಂಚ್ಕೊಂಡು, ಅದಕ್ಕೆ ಅರ್ಥವನ್ನು ಹುಡುಕಿಕೊಳ್ಳುತ್ತಿದ್ದನು. ಅವನು ಸಂಗೀತ, ಜಪ ತಪ, ಈಜುವುದು, ಆಧ್ಯಾತ್ಮ ಇದರಲ್ಲೆಲ್ಲ ಸಣ್ಣ ವಯಸ್ಸಿನಲ್ಲೇ ಎತ್ತಿದ ಕೈ ಆಗಿದ್ದನು. ಸ್ವಲ್ಪ ದೊಡ್ಡವನಾದ ಮೇಲೆ ಇವನಿಗೆ ಸರಸ್ವತಿ ಬಾಯಿಯೊಂದಿಗೆ ಮದುವೆಯಾಯಿತು. ನಂತರ ಒಂದು ಗಂಡು ಮಗುವೂ ಜನಿಸಿತು. ರಾಘವೇಂದ್ರರು ಮುಂದೆ ಮಧ್ವಾಚಾರ್ಯರ ತತ್ವಗಳಲ್ಲಿ ಮತ್ತು ದ್ವೈತ ಫಿಲಾಸಫಿಯಲ್ಲಿ ಪರಿಣತರಾದರು. ಆದರೂ ಬಡತನ ಅವರನ್ನ ಬಿಡಲಿಲ್ಲ. ಬಡತನದಿಂದಾಗಿ ಒಂದು ಊರಲ್ಲಿ ನಿಲ್ಲದೇ ಊರಿಂದೂರಿಗೆ ಪ್ರಯಾಣ ಮಾಡತೊಡಗಿದರು.

ಹೀಗೇ ಒಂದು ಹಳ್ಳಿಯಲ್ಲಿದ್ದಾಗ, ಪುರೋಹಿತರೊಬ್ಬರು ಅವರಿಗೆ ಶ್ರೀಗಂಧ ತೇಯಲು ಕೊಟ್ಟಾಗ, ರಾಘವೇಂದ್ರರು ಅಗ್ನಿ ಸೂಕ್ತವನ್ನು ಪಠಿಸುತ್ತಾ ಗಂಧ ತೇಯಿದರಂತೆ. ಅದನ್ನು ಭಕ್ತಾದಿಗಳು ಲೇಪಿಸಿದಾಗ ಅವರಿಗೆ ಏನೋ ಒಂದು ತರಹ ಉರಿಯಾದಂತಾಯಿತಂತೆ. ಮತ್ತೊಮ್ಮೆ ಗಂಧ ತೇಯುವಾಗ ವರುಣ ಸೂಕ್ತ ವನ್ನು ಪಠಿಸಿದರಂತೆ. ಆಗ ಭಕತಾದಿಗಳು ಅದನ್ನು ಲೇಪಿಸಿದಾಗ ಒಂದು ತರಹ ತಣ್ಣನೆಯ ಅನುಭವ ಆಯಿತಂತೆ. ಇದನ್ನ ನೋಡಿ ಭಕ್ತಾದಿಗಳೆಲ್ಲ ಅದು ದೇವರ ಮಹಿಮೆ, ಅವರೇ ದೇವರ ಸಾಕಾರ ಎಂದು ಕಾಲಿಗೆ ಬಿದ್ದರಂತೆ. ಹೀಗೆ ಅವರಲ್ಲಿದ್ದ ದೇವರ ಗುಣಗಳು ಒಂದೊಂದಾಗಿ ಹೊರಬೀಳಲಾರಂಭಿಸಿದವು. ಮುಂದೆ ರಾಘವೇಂದ್ರರು ಮುಂದಿನ ಶಿಕ್ಷಣ ಮತ್ತು ಜೀವನಕ್ಕಾಗಿ ಕುಂಭಕೋಣಮ್ ಗೆ ಪ್ರಯಾಣ ಬೆಳೆಸಿದರು.

ಕುಂಭಕೋಣಮ್ ನ ಶ್ರೀ ಮಠದಲ್ಲಿ ವಾಸ ಮತ್ತು ಶ್ರೀ ಮಠದ ಶ್ರೀ ಸುಧೀಂದ್ರ ಅವರಲ್ಲಿ ಶಿಷ್ಯಾಚಾರ ಸ್ವೀಕರಣೆ ಸ್ವಲ್ಪಸಮಯದಲ್ಲೇ ನಡೆಯಿತು. ಕೆಲ ಸಮಯದಲ್ಲೇ ಶ್ರೀ ಸುಧೀಂದ್ರ ಗುರುವು ಇವರ ಜ್ಞಾನವನ್ನು ಗುರುತಿಸಿ ತಕ್ಷಣ ಇವರನ್ನು ಆಸ್ಥಾನ ವಿದ್ವಾನ್ ಸ್ಥಾನಕ್ಕೆ ಏರಿಸಿದರು. ಇಲ್ಲಿದ್ದಾಗ ರಾಘವೇಂದ್ರರು ಅವರ ಆಧ್ಯಾತ್ಮಿಕ ತಿಳುವಳಿಕೆಯನ್ನು ಇನ್ನಷ್ಟು ಬಲವಾಗಿಸಿಕೊಂಡರು. ನಂತರ ದೇವರ ಇಚ್ಚೆಯಂತೆ ಶ್ರೀ ಸುಧೀಂದ್ರರ ನಂತರ ಸನ್ಯಾಸವನ್ನು ಸ್ವೀಕರಿಸಿ, ಶ್ರೀ ಮಠದ ಸ್ವಾಮಿಯಾದರು. ಇಲ್ಲಿದ್ದಾಗಲೇ ರಾಘವೇಂದ್ರರು ಮಂತ್ರ – ಮಾಯೆಗಳನ್ನು ಭಕ್ತಾದಿಗಳಿಗೆ ತೋರಿಸಿದರು – ಕಣ್ಣು ಕಾಣದವರಿಗೆ ದಿವ್ಯ ದೃಷ್ಠಿ, ಮಾತನಾಡದವರಿಗೆ ಮಾತಿನ ಶಕ್ತಿ, ಬಲಹೀನರಾದವರಿಗೆ ನಡೆಯುವ ಶಕ್ತಿ, ಇದೆಲ್ಲವುದನ್ನು ಅನುಗ್ರಹಿಸುವ ಮೂಲಕ. ರಾಘವೇಂದ್ರರು ವರುಣ ಯಜ್ಞವನ್ನು ಮಾಡುವಾಗ ಮಳೆಯನ್ನೇ ತರಿಸುತ್ತಿದ್ದರಂತೆ. ಇದನ್ನು ನೋಡಿದ ಶ್ರೀ ಮಠದ ಭಕ್ತಾದಿಗಳು ಇವರ ತತ್ವ ವಿಚಾರಗಳ ಅನುಯಾಯಿಗಳಾದರು. ರಾಘವೇಂದ್ರರು ಶ್ರೀ ಮಠದ ಮುಖ್ಯಸ್ಥರಾಗಿದ್ದಾಗಲೇ ಪರಿವ್ರಾಜಕ ಸೇವೆಯನ್ನೂ ಆರಂಭಿಸಿದರು.

ಶ್ರೀ ರಾಘವೇಂದ್ರರು ವೇದಾಂತ ಸಾರವನ್ನು ಎಲ್ಲ ಕಡೆಗಳಲ್ಲಿ ಸಾರಿ ಜನ ಸಾಮಾನ್ಯರ ಆಧ್ಯಾತ್ಮಿಕ ತಿಳುವಳಿಕೆಯನ್ನು ಹೆಚ್ಚಿಸಿದರು. ಅವರು ವೇದಾಂತ ಕೃತಿಗಳನ್ನೂ ರಚಿಸಿದರು – ಚಂದ್ರಿಕಾ, ನ್ಯಾಯ ಸುಧಾ, ತಂತ್ರ ದೀಪಿಕಾ, ನ್ಯಾಯ ಮುಕ್ತಾವಳಿ ಮುಂತಾದವು. ಇವರ ಕಾಲದ ಬಹು ಮಂದಿ ಮುಸಲ್ಮಾನ ಆಡಲಿತಕಾರರೂ ಇವರನ್ನು ಸನ್ಮಾನಿಸಿದರು. ಆಧ್ಯಾತ್ಮ ಚಳುವಳಿಯ ನಂತರ, ಇಚ್ಚಾಪೂರಣವಾಗಿ ಶ್ರೀ ರಾಘವೇಂದ್ರರು ೧೬೭೧ ರಲ್ಲಿ ಮಂಚಾಲ (ಮಂತ್ರಾಲಯ) ಎಂಬ ಹಳ್ಳಿಯಲ್ಲಿ ಬೃಂದಾವನವನ್ನು ಸೇರಿ ದೇವರಲ್ಲಿ ಲೀನವಾದರು.

ಉಪದೇಶ/ ತತ್ವಗಳು: ಶ್ರೀ ರಾಘವೇಂದ್ರರು ದ್ವೈತ ತತ್ವ (ಮಧ್ವಾಚಾರ್ಯರ) ಮತ್ತು ವೈಷ್ಣವ ಸಂಪ್ರದಾಯವನ್ನು ಭೋಧಿಸಿದರು. ಆತ್ಮ ಬರೀ ಖಾಲಿಯಲ್ಲ, ಅದರಲ್ಲಿ ದೈವಸಾರವಿದೆ. ಆತ್ಮದ ಸಾರ – ಈ ಬೆಳಕು ಒಳಗಡೆಯಿಂದ ಬರಬೇಕು. ಯೋಗವು ಮುಕ್ತಿಗೆ ಬೇಕಾದ ಉಪಕರಣ, ಅದರಿಂದಲೇ ಮನಸ್ಸಿನ ನಿಯಂತ್ರತೆ ಸಾಧ್ಯ. ಆಸೆ, ಮೋಹ ಮುಂತಾದ ತಾತ್ಕಾಲಿಕವಾಗಿ ಸಂತಸ ನೀಡುವ ಗುಣಗಳನ್ನು ನಿಯಂತ್ರಿಸಿದಾಗಲೇ ಅತ್ಯಂತ ಎತ್ತರದಲ್ಲಿರುವ ಒಳಗಡೆಯ ಬೆಳಕು ಗೋಚರವಾಗುವುದು, ಇದಕ್ಕೆ ಶಾಸ್ತ್ರಗಳ ಅರಿವು ಬೇಕಾದ ವಸ್ತು. ಶಾಸ್ತ್ರಗಳು ಸರಿ, ತಪ್ಪುಗಳನ್ನು ತೋರಿಸಿ, ಸರಿಯಾದ ಮಾರ್ಗದರ್ಶನ ನೀಡುತ್ತವೆ.

ಶ್ರೀ ರಾಘವೇಂದ್ರರು, “ಶಂಕು ತೀರ್ಥ” ಎಂಬ ಬ್ರಹ್ಮನ ಆಸ್ಥಾನದಲ್ಲಿದ್ದ  ಕರ್ಮಜ ದೇವರು, ಮುಂದೆ ಪ್ರಹ್ಲಾದರಾಗಿ, ಬಾಹ್ಲೀಕರಾಜರಾಗಿ, ಶ್ರೀ ವ್ಯಾಸರಾಜರಾಗಿ, ಮೂಲರಾಮನ ಪೂಜೆಗಾಗಿ ಶ್ರೀ ರಾಘವೇಂದ್ರರಾಗಿ ಅವತರಿಸಿದರು ಎಂದು “ಶ್ರೀ ನೃಸಿಂಹ ಪುರಾಣ” ಹೇಳುತ್ತದೆ ಈ ಪದ್ಯದಲ್ಲಿ …..ಶಂಕುಕರ್ಣಾಕ್ಯದೇವಸ್ತು……

 

 

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ಬ್ರೆಡ್ ಐಯ್ಯಂಗಾರ್!

Bread Iyengar by Sreevathsa Duglapura!ಕಡೂರಿನ ದಿನಗಳು – ಬ್ರೆಡ್ ಐಯ್ಯಂಗಾರ್!

ಸಣ್ಣ ಊರಾಗಿದ್ದರಿಂದ ಕಡೂರಲ್ಲಿ ನಾವೆಲ್ಲ ಸಣ್ಣವರಿದ್ದಾಗ ಇದ್ದಿದ್ದು ಒಂದು ಬ್ರೆಡ್ ಅಂಗಡಿ – ಬೇಕರಿ. ಇನ್ನೊಂದು ಸಣ್ಣದು ಇತ್ತೇನೋ, ಆದರೆ ಇದು ಪ್ರಸಿದ್ಧವಾಗಿದ್ದರಿಂದ ನನ್ನ ನೆನಪಿನಲ್ಲಿ ಇದೇ ಉಳಿಯಿತು. ಬ್ರೆಡ್ ಐಯ್ಯಂಗಾರ್ಗಳು ಇಬ್ಬರು ಅಣ್ಣ, ತಮ್ಮಂದಿರು ಇದನ್ನು ನಡೆಸುತ್ತಿದ್ದರು. ಇದು ಪೇಟೆಯಲ್ಲಿ, ಬೇರೆ ಮಾರುಕಟ್ಟೆಗಳ ಮಧ್ಯೆ ಇತ್ತು. ಊರಿನವರೆಲ್ಲಾ ಈ ಬೇಕರಿಗೆ ಬಂದೇ ಬರುತ್ತಿದ್ದರು. ಹುಷಾರು ತಪ್ಪಿದಾಗ, ಬ್ರೆಡ್ ಕೊಳ್ಳಲು, ಬೇರೆ ಸಮಯದಲ್ಲಿ, ಪಫ್, ನಿಪ್ಪಟ್ಟು, ಬೆಣ್ಣೇ ಬಿಸ್ಕತ್ತು, ಕೊಬ್ಬರಿ ಬಿಸ್ಕತ್ತು, ಖಾರ ಶೇವಿಗೆ, ಖಾರಾ ಪುರಿ, ಎಲ್ಲಾ ತಿಂಡಿಗಳನ್ನೂ ಕೊಂಡು ಹೋಗಲು. ಬ್ರೆಡ್ ಐಯ್ಯಂಗಾರ್ಗಳು ಈ ಎಲ್ಲಾ ತಿಂಡಿಗಳನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು. “ಇಂಗೂ – ತೆಂಗೂ ಹಾಕಿದರೆ ಮಂಗನಂತವನೂ ಚೆನ್ನಾಗಿ ಮಾಡುತ್ತಾನೆ” ಅನ್ನುವ ಹಾಗೆ, ಬೆಣ್ಣೇ, ಸಕ್ಕರೆ, ಓಂ ಕಾಳೂ (ಕೋಡುಬಳೆ, ನಿಪ್ಪಟ್ಟಿಗೆ), ಖಾರ, ಮಸಾಲೆ ಎಲ್ಲ ಚೆನ್ನಾಗಿ ಜೋಡಿಸುತ್ತಿದ್ದರು. ನಾವೆಲ್ಲ ಬೇಕರಿಗೆ ಹೋದಾಗ, ಇನ್ನೂ ಬ್ರೆಡ್ ಬೇಕ್ ಆಗುವುದಕ್ಕೆ ಸಮಯ ಇದ್ದಾಗ, ಅಲ್ಲೇ ನಿಂತು, ಹಿಟ್ಟು, ಕಲಿಸುವುದು, ಮಸಾಲ ಬೆರೆಸುವುದು, ಒತ್ತುವುದು ಎಲ್ಲ ನೋಡುತ್ತಾ, ಅಲ್ಲೇ ವಾಸನೆ ಕುಡಿಯುತ್ತಾ ನಿಂತಿರುತ್ತಿದ್ವಿ. ಬೇರೆ ವ್ಯಾಪಾರಿಗಳು ಬಂದಾಗ ಬ್ರೆಡ್ ಐಯ್ಯಂಗಾರ್ ನಮ್ಮನ್ನುದ್ಧೇಶಿಸಿ: ಸ್ವಲ್ಪ ಜಾಗ ಬಿಡಿ ಅವರಿಗೆ, ಇನ್ನೂ ೧೫ ನಿಮಿಷ ಆಗತ್ತೆ ಬ್ರೆಡ್ ಆಗಲು ಅಂತ ಲಘುವಾಗಿ ಗದರುತ್ತಿದ್ದರು. ಸ್ವಲ್ಪ ಊರ ಪ್ರಮುಖರು ಬಂದರೆ, ಅವರಿಗೆ ರುಚಿ ನೋಡಲು ನಿಪ್ಪಟ್ಟು ಎಲ್ಲ ಕೊಟ್ಟು, ಇದನ್ನೂ ಪ್ಯಾಕ್ ಮಾಡಲಾ ಅಂತ ಕೇಳುತ್ತಿದ್ದರು. ನಾವೂ ಆಗ ಕೈ ಒಡ್ಡುತ್ತಿದ್ವಿ ಯಾವ ನಾಚಿಗೆಯೂ ಇಲ್ಲದೇ. ಅಲ್ಲೀವರೆಗೂ ಘಮ ಘಮ ವಾಸನೆ ಕುಡಿದು ಕಾಯುತ್ತಿದ್ದ ನಮಗೆ ನಿಪ್ಪಟ್ಟು ತಿನ್ನಲು ಆಸೆಯಾಗುತ್ತಿತ್ತು. ನಮ್ಮ ಅಣ್ಣನಿಗೆ ತುಂಬಾ ಸ್ನೇಹಿತರಿದ್ದರಿಂದ ಅಣ್ಣನ ಸ್ನೇಹಿತರು ಯಾರಾದರೂ ಬ್ರೆಡ್ ಅಂಗಡಿಗೆ ನಾವಿದ್ದಾಗ ಬಂದರೆ, ಅವರು ಖರೀದಿಸಿದರಲ್ಲಿ ನಮಗೆಲ್ಲಾ ಒಂದು ಪೀಸ್ ಕೊಡಲು ಮರೆಯುತ್ತಿರಲಿಲ್ಲ. ಆಗ ನಾವು ಬ್ರೆಡ್ ಐಯ್ಯಂಗಾರ್ ನ ನೋಡಿಕೊಂಡು ಗರಮ್ ಗರಮ್ ಅಂತ ಶಬ್ಧಮಾಡಿಕೊಂಡು ತಿನ್ನುತ್ತಿದ್ವಿ.

ಬ್ರೆಡ್ ಐಯ್ಯಂಗಾರ್ ಬೇಕರಿಯಲ್ಲಿ ಒಳಗೆ ತುಂಬಾ ಬಿಸಿಯಾಗಿರುತ್ತಿತ್ತು. ಬೇಸಿಗೆಯ ಬೇಸಿಗೆ, ಮತ್ತು ಅವನ್ ನ ಹೀಟು ಎಲ್ಲ ಸೇರಿ. ಅವರು ತುಂಬಾ ಕಷ್ಟ ಪಟ್ಟೂ ಬಿಸಿಯಲ್ಲಿ ಬೆವರು ಸುರಿಸಿ ಕೆಲಸಮಾಡುತ್ತಿದ್ದರು. ಹಾಗಾಗಿ ಒಂದು ತೆಳು ಪಂಚೆ, ಅದರ ಮೇಲೆ ಒಂದು ಖೋರಾ ಬಟ್ಟೆಯಲ್ಲಿ ಹೊಲಿದ ತೋಳಿಲ್ಲದ ಬನಿಯನ್ ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಎಣ್ಣೆ, ಬೆಣ್ಣೆ, ಎಲ್ಲ ಮುಟ್ಟಿದ ಕೈಯನ್ನು ಬನಿಯನ್ ಮೇಲೆ ಅಥವಾ ಪಂಚೆಗೆ ವರೆಸುತ್ತಿದ್ದರು. ಬೆಳಗ್ಗೆ ಉಟ್ಟಿ ಬಂದ ಬಿಳಿ ಪಂಚೆ, ಬನಿಯನ್ ಎರಡೂ , ಕೆಲಸ ಮುಗಿಸೋಹೊತ್ತಿಗೆ ಕೊಳೆ, ಕಪ್ಪಿನ ಬನಿಯನ್ ಮತ್ತು ಪಂಚೆಗಳಾಗುತ್ತಿತ್ತು. ನಮ್ಮ ಅಣ್ಣ (ನಮ್ಮ ತಂದೆ), ನಮ್ಮನ್ನೆಲ್ಲಾ “ಸ್ನಾನ ಆಯ್ತಾ? ಅಂತ ಯಾವಾಗಲಾದರೂ ಕೇಳಿದಾಗ, ನಾವು “ಇನ್ನೂ ಇಲ್ಲ” ಅಂದರೆ, “ಶೊಬಚಿ’ ಅಂತ ಬೈಯುತ್ತಿದ್ದರು. ನಮ್ಮ ಅಮ್ಮನ ಕೇಳಿದಾಗ ಶೊಬಚಿ ಅಂದರೆ “ಕೊಳಕು” ಅಂತ ತಿಳಿದಮೇಲೆ, ಅಣ್ಣ ಶೊಬಚಿ ಅಂದಾಗಲೆಲ್ಲ ನಾವುಗಳು: “ನಾವಲ್ಲ ಕೊಳಕು, ಅದು ಬ್ರೆಡ್ ಐಯ್ಯಂಗಾರ್ ಅಂತಿದ್ವಿ” ಏಕೆಂದರೆ ಅವರ ಬಟ್ಟೆ ಎಲ್ಲ, ಎಣ್ಣೆ ಜಿಡ್ಡು, ಕೊಳೆ ಎಲ್ಲ ಸೇರಿ ಕಪ್ಪಗೆ ಆಗಿದ್ದರಿಂದ. ಆಗ ನಮ್ಮ ಅಮ್ಮ ಹೀಗೆ ಹೇಳಿದ್ದರು…. ಖಾರ, ಎಣ್ಣೆ, ಬೆಣ್ಣೇ, ಕರಿದ ಕನುಗು ಎಲ್ಲ ಸೇರಿ ಹಾಗೆ ಕಾಣಿಸುತ್ತೆ ಅವರ ಬಟ್ಟೆ ಅಷ್ಟೇ. ಅವರು ಬೆಳಗ್ಗೆ ಕ್ಲೀನಾದ ಬಟ್ಟೆಯನ್ನೇ ಹಾಕಿರುತ್ತಾರೆ ಎಂದು ತಿಳಿ ಹೇಳಿದ್ದರು.

ಬ್ರೆಡ್ ಐಯ್ಯಂಗಾರ್ ಹೇಗಿದ್ದರು ಅಂತ ಹೇಳಲೇಬೇಕು. ನಾವು ಬ್ರೆಡ್ ಅಂಗಡಿಗೆ ಹೋದಾಗ ಯಾವ ಅವಸರವೂ ಇರುತ್ತಿರಲಿಲ್ಲ. ಆದ್ದರಿಂದ ಅಲ್ಲೇ ನಿಂತು ಅವರ ಮುಖ ಚಹರೆ, ಅವರ ಆಕ್ಶನ್ಸ್ (ಕೆಲಸಗಳನ್ನು) ಅಚ್ಚುಕಟ್ಟಾಗಿ ನೋಡುತ್ತಿದ್ದೆವು. ನೋಡಿ ಕಲಿಯುವುದೂ ಒಂದು ಉದ್ಧೇಶವಾಗಿತ್ತು. ಅವರು ಬ್ರೆಡ್ ಅನ್ನು ಅವನ್ ಇಂದ ತೆಗೆಯುವುದು, ಲೋಫ಼್ ಅನ್ನು ಸಣ್ಣದಾಗಿ ಸ್ಲೈಸ್ ಮಾಡುವುದು, ಹಳೇ ನ್ಯೂಸ್ ಪೇಪರ್ ಮೇಲೆ ಇಟ್ಟು ಪ್ಯಾಕ್ ಮಾಡುವುದು, ಆಮೇಲೆ ಹತ್ತಿಯ ತೆಳು ದಾರದಿಂದ ಕಟ್ಟುವುದು ಗಿರಾಕಿಗೆ ಕೊಡುವ ಮೊದಲು, ಹೀಗೆ ಪ್ರತಿಯೊಂದು ಸ್ಟೆಪ್ಗಳನ್ನು ಚಾಚೂ ತಪ್ಪದೇ ನೋಡುತ್ತಿದ್ದೆವು. ಮತ್ತು ಅದನ್ನು ಕಲಿಯುತ್ತಿದ್ದೆವು. ಮನೆಯಲ್ಲಿ ಏನಾದರೂ ಕಟ್ ಮಾಡಬೇಕಾದರೆ – ಸೌತೆಕಾಯಿ, ಅವರ ಬ್ರೆಡ್ ಕಟ್ ಮಾಡುವ ಟೆಕ್ನಿಕ್ (ವಿಧಾನ) ಉಪಯೋಗಿಸುತ್ತಿದ್ವಿ. ನೋಡಿ ಕಲಿಯುವುದು ತುಂಬಾ ಸುಲಭವಾದ ವಿಧಾನ ನನ್ನ ಪ್ರಕಾರ. ಹಾಗೇ ನಾನು ಬಹಳ ವಿಷಯಗಳನ್ನು ನೋಡೇ ಕಲಿತಿರುವುದು.

ಹೀಗೆ ಊರವಿರಿಗೆಲ್ಲಾ ಬ್ರೆಡ್ ಐಯ್ಯಂಗಾರ್ ತುಂಬಾ ಅಚ್ಚುಮೆಚ್ಚಾಗಿದ್ದರು. ಬಿಸಿ – ಬಿಸಿ, ಖಾರ, ಸಿಹಿ, ಘರಮ್, ಆದ ತರ ತರಾವರಿ ತಿನಿಸುಗಳನ್ನೆಲ್ಲಾ ಸಮಯಕ್ಕೆ ಸರಿಯಾಗಿ ರೆಡಿಮಾಡಿ ಕೊಡುತ್ತಿದ್ದರು. ಬ್ರೆಡ್ ಐಯ್ಯಂಗಾರ್ಗಳು ಇಬ್ಬರೂ, ಕುಳ್ಳಗೆ, ದಪ್ಪಗೆ, ಕಪ್ಪಗೆ ಇದ್ದರು. ಡೊಡ್ಡವರು ಸಣ್ಣವರಿಗಿಂತ ಸ್ವಲ್ಪ ಜಾಸ್ತಿ ದಪ್ಪ ಇದ್ದರು. ಏಕೆಂದರೆ ಅವರಿಗೆ ಬೆಣ್ಣೆ ಬಿಸ್ಕತ್ ಮಾಡಿ, ಮಾಡಿ, ಅದರ ರುಚಿನೋಡಿ ಜಾಸ್ತಿ ವರುಷಗಳ ಅನುಭವ ಇತ್ತು. ತುಂಬಿದ ಕೆನ್ನೆಗಳು, ಸ್ವಲ್ಪ ಚೌಕಾಕಾರದ ಮುಖಕಟ್ಟು, ಕೂತಿದ್ದ ಕತ್ತು, ಒಂದಕ್ಕಿಂತ ಹೆಚ್ಚು ಗಲ್ಲಗಳು, ಕತ್ತಿನಲ್ಲಿ ಒಂದೆರಡು ಫೋಲ್ಡ್ಸ್ ಗಳೂ ಇದ್ದವು. ತುಂಬಾ ಸೆಕೆಯಾದ್ದರಿಂದ ಅವರುಗಳು ಒಂದು ಖೋರಾ ಬಟ್ಟೆಯಲ್ಲಿ ಹೊಲಿದ ತೋಳಿಲ್ಲದ ಬನಿಯನ್ ಹಾಕುತ್ತಿದ್ದರು. ಅದಕ್ಕೆ ಎರಡೂ ಪಕ್ಕದಲ್ಲೂ ಒಂದೊಂದು ಜೇಬು ಇತ್ತು. ಆ ಜೇಬಿನೊಳಗೆ ಕೆಲಸಕ್ಕೆ ಅನುಕೂಲವಾಗುವಂತೆ ಕೆಲವು ಸಣ್ಣ, ಪುಟ್ಟ, ಸಾಮಾನುಗಳನ್ನು ಇಟ್ಟುಕೊಳ್ಳುತ್ತಿದ್ದರು. ಉದಾಹರಣೆಗೆ, ಸಣ್ಣ ಕತ್ತರಿ, ವರೆಸುವ ಬಟ್ಟೆ, ಅಥವಾ ಸಣ್ಣ ಕರವಸ್ತ್ರ, ಕೆಲವೊಮ್ಮೆ ಹಸಿ ಹತ್ತಿ ದಾರದ ಉಂಡೆ ಹೀಗೆ ಮುಂತಾದುವುಗಳನ್ನು ಕೈಗೆ ಸುಲಭವಾಗಿ ಸಿಗುವಂತೆ ಜೋಪಾನವಾಗಿ ಶೇಕರಿಸಿಡುತ್ತಿದ್ದರು. ಎಣ್ಣೆ, ಬೆಣ್ಣೆ, ಖಾರ, ಜಿಡ್ಡು, ಮತ್ತು ನ್ಯೂಸ್ ಪೇಪರ್ ಕರಿ ಮಸಿ, ಇದರ ಜೊತೆ ಕೆಲಸಮಾಡುತ್ತಿದ್ದರಿಂದ ಕೈಯನ್ನು ಬನಿಯನ್ ಮೇಲೆ, ಜೇಬಿನ ಹೊರಗಡೆ ಮತ್ತು ಹೊಟ್ಟೆಯ ಮೇಲೆ ಪದೇ ಪದೇ ಸವರಿಕೊಳ್ಳುತ್ತಿದ್ದರಿಂದ, ಆ ಜಾಗಗಳಲ್ಲಿ ಕರೀ ಕೊಳೆತರಹ ಅಂಟಿಕೊಂಡಿರುತ್ತಿತ್ತು. ಅದು ಒಂದು ಕೊಳೆ ತರ ಕಂಡರೂ ಅದೂ ಬರೀ ಜಿಡ್ಡಿನ ಖಲೆಯಾಗಿತ್ತು. ಬಿಳಿ ಮಲ್ ಪಂಚೆ ಮೇಲಕ್ಕೆ ಎತ್ತಿ ಕಟ್ಟಿರುತ್ತಿದ್ದರು. ಅದು ದಿನದ ಕೊನೆಯವೇಳೆಗೆ ಒಂದು ತರ ಕೊಳೆ ಪಂಚೆ ತರಹ ಕಾಣುತ್ತಿತ್ತು.

ದಿನಾ ಬೆಳಗ್ಗೆ ಹೋದರೆ ಅಂಗಡಿಗೆ, ಮಧ್ಯ್ಹಾನ ೨ ಘಂಟೆಗೆ ಮನೆಗೆ ಊಟಕ್ಕೆ ಬಂದು ಮತ್ತೆ ೩-೪ ಘಂಟೆ ಹೊತ್ತಿಗೆ ಅಂಗಡಿಗೆ ಹೋಗುವರು. ಅಂಗಡಿ ಮುಚ್ಚುತ್ತಿದ್ದಿದ್ದು ರಾತ್ರಿ ೯ ಘಂಟೆಗೆ. ಹೀಗೆ ಅಣ್ಣ – ತಮ್ಮಂದಿರಿಬ್ಬರೂ ತುಂಬಾ ಕಷ್ಟ ಪಟ್ಟು ಬೇಕರಿಯನ್ನು ಬೆಳೆಸಿದ್ದರು. ಮಕ್ಕಳು ಸ್ವಲ್ಪ ದೊಡ್ದವರಾಗುವ ಹೊತ್ತಿಗೆ ಅಣ್ಣ – ತಮ್ಮಂದಿರು ಬೇರೆ, ಬೇರೆಯಾಗಿ ಬೇರೆ ಮನೆಗಳನ್ನು ಮಾಡಿಕೊಂಡಿದ್ದರು. ದೊಡ್ಡವರು ಪೇಟೆಯಲ್ಲೇ ಉಳಿದು, ಸಣ್ಣವರು ಕೋಟೆಗೆ ಬಂದಿದ್ದರು. ಕೋಟೆಯಲ್ಲಿದ್ದವರ ಮಗಳು ರತ್ನ ನನ್ನ ಕ್ಲಾಸ್ಮೇಟ್ ಆಗಿದ್ದಳು. ನಾವೆಲ್ಲರೂ ಸಾಯಂಕಾಲ ಒಟ್ಟಿಗೇ ಆಟ ಆಡುತ್ತಿದ್ದೆವು. ಆಟಕ್ಕೆ ಕರೆಯಲು ನಾವುಗಳೇ ಅವಳ ಮನೆಗೆ ಹೋಗುತ್ತಿದ್ದೆವು. ಅವರ ಮನೆಗೆ ಹೋದಾಗಲೆಲ್ಲ, ಬೆಣ್ಣೆ ಬಿಸ್ಕತ್, ಕರಿದ ತಿಂಡಿ ವಾಸನೆ ಜೋರಾಗಿ ಬರುತ್ತಿತ್ತು. ಅವರಮ್ಮ ಏನಾದರೂ ಕೊಡುವವರೆಗೂ ನಾವು ಗಾಡಿ ಬಿಡುತ್ತಿರಲಿಲ್ಲ ಅವರ ಮನೆಯಿಂದ. ಅವರಮ್ಮ ನಮಗೆ ಸ್ವಲ್ಪ ಜಾಸ್ತಿ ತಿಂಡಿ ಕೊಟ್ಟಿದ್ದರೆ ಅವರ ಮಕ್ಕಳಿಗೆ ಸ್ವಲ್ಪ ನ್ಯಾಚುರಲ್ ಡಯಟ್ ಆಗುತ್ತಿತ್ತು. ಆದರೆ ಹಾಗಾಗುತ್ತಿರಲಿಲ್ಲ. ನಾವು ಗೇಟ್ ಹತ್ತಿರ ಹೋದಾಗಲೆ ಅವರ ಅಮ್ಮ ಅವಳನ್ನು ಹೊರಗೆ ಕಳಿಸುತ್ತಿದ್ದರು. “ನಿನ್ನ ಫ್ರೆಂಡ್ಸ್ ಬಂದರು ಹೋಗು” ಅಂತ ಹೇಳಿ. ಆದರೂ ನಾವು ಬಿಡಬೇಕಲ್ಲ, ಅವಳನ್ನು ವಾಪಸ್ ಮನೆಯೊಳಗೆ ಕಳಿಸಿ, ನಿಪ್ಪಟ್ಟು ಅಥವಾ ಬಿಸ್ಕತ್ ಎಲ್ಲ ತರಿಸುತ್ತಿದ್ವಿ. ಆ ತಿಂಡಿಗಳ ರುಚಿ ಇನ್ನೂ ನೆನಪಿನಲ್ಲಿದೆ. ಸ್ವಲ್ಪ ಯೋಚಿಸಿದರೆ, ಪೂರ್ತಿ ರೆಸಿಪಿ ಬಿಲ್ಡ್ ಮಾಡಬಹುದು. ಓಮ್ ಕಾಳು ಘಮ ಘಮ, ಜೀರಿಗೆ ಮೆಣಸು ಫ಼್ಲೇವರ್ರು ಎಲ್ಲಾ ಒಂದು “ಸವಿಯಾದ ನಾಸ್ಟಾಲ್ಜಿಯಾ – ಉತ್ಕಂಠತೆ” ಅಂದರೆ ತಪ್ಪಾಗಲಾರದು. ನೀವೆಲ್ಲರೂ ಇದೇ ರೀತಿ ಈ ಬರಹವನ್ನು ಸವಿಯುತ್ತೀರೆಂದು ಇಲ್ಲಿ ಹಂಚಿಕೊಳ್ಳುತ್ತಾ, ಈ ಸಂಚಿಕೆಯನ್ನು ಮುಗಿಸುತ್ತಿದ್ದೇನೆ.

ಈ ಬರಹಕ್ಕೆ ಚಿತ್ರ ರಚಿಸಿದವರು : ಕಲೆಗಾರರೂ ಮತ್ತು ಸ್ನೇಹಿತರೂ ಆದ ಶ್ರೀ: ಶ್ರೀವತ್ಸ ದುಗ್ಲಾಪುರ ಅವರು. ಸುಂದರವಾದ ಚಿತ್ರವನ್ನು ಬರೆದುಕೊಟ್ಟ ಶ್ರೀವತ್ಸ ಅವರಿಗೆ ನನ್ನ ವಂದನೆ ಮತ್ತು ಅಭಿನಂದನೆಗಳು!!!

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ರಾಯರು ಮತ್ತು ನಾನು (ರಾಘವೇಂದ್ರ – ರಾಯರ ಮಠ!!)

Sri Krishna Vrundaavana Temple in San Jose!

ಡಾ: ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ.

ಕಡೂರಿನ ಕೋಟೆಯಲ್ಲಿದ್ದ ನಮ್ಮ ಮನೆಯ ಸುತ್ತಲೂ ದೇವಸ್ಥಾನಗಳಿದ್ದವು. ದೇವರುಗಳ ಮಧ್ಯದಲ್ಲಿ ನಾವು ವಾಸ ಇದ್ದೆವು ಅಂದರೆ ತಪ್ಪಾಗಲಾರದು. ಮುಂಬಾಗಿಲಿನ ಎದುರುಗಡೆ ಕೇಶವ ದೇವರ ದೇವಸ್ಥಾನವಾದರೆ, ಹಿತ್ತಲ ಬಾಗಿಲ ಎದುರು ಆಂಜನೇಯ ದೇವರ ಗುಡಿ, ಒಂದು ಪಕ್ಕದಲಿ ರಾಯರ ಮಠ, ಮತ್ತೊಂದು ಪಕ್ಕದಲ್ಲಿ ಈಶ್ವರನ ಗುಡಿ ಮತ್ತು ಅದರ ಮುಂದೆ ಹೊಂಡವಿತ್ತು. ಕಾರ್ತೀಕ ಮಾಸ, ಧನುರ್ಮಾಸ, ಶ್ರಾವಣ ಮಾಸ ಎಲ್ಲ ಮಾಸಗಳಲ್ಲೂ ಒಂದಲ್ಲ ಒಂದು ವಿಶೇಷ ಪೂಜೆಗಳು ನಡೆಯುತ್ತಿತ್ತು. ನಾವು ಸಣ್ಣವರಾಗಿದ್ದಾಗ ಎಲ್ಲ ಪೂಜೆಗಳಿಗೂ ಹೋಗಿ, ಪ್ರಸಾದವನ್ನು ಇಸ್ಕೊಂಡು ತಿಂದು ಬರುತ್ತಿದ್ದೆವು. ಕೆಲವೊಮ್ಮೆ ಮೊದಲಿಂದ ಪೂಜೆ ನೋಡಲಾಗದಿದ್ದರೂ ಮಂಗಳಾರತಿ, ಹೊತ್ತಿಗೆ ಹೋಗಿ ಆಮೇಲೆ ಪ್ರಸಾದ ಪಡೆಯುವುದನ್ನು ಮರೆತಿರಲಿಲ್ಲ. ರಾಘವೇಂದ್ರ ಮಠದಲ್ಲಿ ಗುರುವಾರ ವಿಶೇಷ ಪೂಜೆ, ಭಜನೆ, ಮಂಗಳಾರತಿ, ಆಮೇಲೆ ಪ್ರಸಾದ ಇದೆಲ್ಲ ಮುಗಿದ ಮೇಲೇ ಮನೆಗೆ ಬರುತ್ತಿದ್ದಿದ್ದು.

ಪ್ರತೀ ಗುರುವಾರ ತಪ್ಪದೇ ಹೋಗುತ್ತಿದ್ದೆ ನಾನು. ಅಲ್ಲಿ ಮಾಡುವ ಭಜನೆಗಳನ್ನೆಲ್ಲಾ ಮತ್ತು ಹಾಡುಗಳನ್ನೆಲ್ಲಾ ಚೆನ್ನಾಗಿ ಕಲಿತಿದ್ದೆ. ಮನೆಯಲ್ಲಿ ಕೂಡ ಕೆಲವೊಮ್ಮೆ ನಾವು ಗೆಳತಿಯರು ಮತ್ತು ಅಕ್ಕ ತಂಗಿಯರು ಹಾಡುಗಳನ್ನೆಲ್ಲಾ ಹೇಳಿಕೊಳ್ಳುತ್ತಿದ್ದೆವು. ಮನಸ್ಸಿಗೆ ಒಂದು ತರಹ ಹಿತ ತರುತ್ತಿತ್ತು ಈ ಅಭ್ಯಾಸಗಳು. ನನಗೆ ಮಠದ ಗೀಳು ಜಾಸ್ತಿನೇ ಇತ್ತು ನಮ್ಮ ಮನೆಯವರ ಪೈಕಿ. ಒಂದು ಥರಾ ಮಠ ನನ್ನದೇ ಅನ್ನೋತರಹ ಅನ್ನಿಸುತ್ತಿತ್ತು, ಅದು ಹಾಗೆ ಆಡಿಸುತ್ತಿತ್ತು ಕೂಡಾ. ನಮ್ಮ ಮನೆಯವರೊಂದಿಗೆ ನಾನು ಮಠಕ್ಕೆ ಹೋದಾಗ ಹಾಗೆ ಆಡುತ್ತಿದ್ದೆ. ನಮ್ಮ ಅಮ್ಮ ನನ್ನ ಜೊತೆ ಮಠಕ್ಕೆ ಹೋದಾಗ, ಅಮ್ಮ ಹೀಗೆ ಬಾ, ಅಲ್ಲಿ ನಿಂತ್ಕೋಬೇಕು ತೀರ್ಥ ತಗೊಳಕ್ಕೆ, ಆಚಾರ್ರು, ಒಳಗಡೆ ಕ್ಲೀನ್ ಮಾಡ್ತಾ ಇದಾರೆ, ಬರ್ತಾರೆ, ಹೀಗೆಲ್ಲ ಹೇಳುತ್ತಿದ್ದೆ. ನಾನಷ್ಟೇ ಮಠಕ್ಕೆ ಹೋದಾಗ, ಒಂದು ಸ್ಟೀಲ್ ಲೋಟವನ್ನು ತಗೊಂಡು ಹೋಗಿ, ಎಲ್ಲರಿಗೂ ತೀರ್ಥ, ಮಂತ್ರಾಕ್ಷತೆಯನ್ನು ತಂದು ಮನೆಯವರಿಗೆಲ್ಲಾ ಕೊಡುತ್ತಿದ್ದೆ. ಹೀಗೆ ಏಷ್ಟೊಂದು ಸಲ ಲೋಟ ಅಲ್ಲೇ ಮರೆತುಬಿಡುತ್ತಿದ್ದೆ. ನಮ್ಮ ಅಮ್ಮ ಮಠಕ್ಕೆ ಹೋದಾಗ, ಆಚಾರ್ಯರು “ಮೀನ ಈ ಲೋಟಗಳನ್ನೆಲ್ಲ ಇಲ್ಲೇ ಮರೆತುಬಿಟ್ಟೀದ್ದಾಳೆ” ಅಂತ ಹೇಳಿ ಅಮ್ಮನ ಹತ್ತಿರ ಕೊಡುತ್ತಿದ್ದರು. ಅವರಿಗೆ ಚೆನ್ನಾಗಿ ಗೊತ್ತಿತ್ತು ನನ್ನ ಲೋಟಗಳು ಯಾವುದು ಅಂತ. ನಾವೇನಾದರೂ ರಾತ್ರಿ ನಿದ್ದೇ ಸರಿಯಾಗಿ ಮಾಡದಿದ್ದರೆ, ಬೆಚ್ಚಿದ್ದಾರೆ ಅಂತ ನಮ್ಮ ಅಮ್ಮ ನಮ್ಮನ್ನೆಲ್ಲಾ ಮಠಕ್ಕೆ ಕರೆದು ಕೊಂಡು ಹೋಗಿ ರಾಯರಿಗೆ ಪೂಜೆ ಮಾಡಿಸುತ್ತಿದ್ದರು. ಆಗ, ಆಚಾರ್ಯರು ಮಂತ್ರ ಹೇಳಿ ನಮಗೆಲ್ಲ ತೀರ್ಥ, ಮತ್ತು ಮಂತ್ರಾಕ್ಷತೆ ಯನ್ನು ತಲೆಯ ಮೇಲೆ ಹಾಕುತ್ತಿದ್ದರು. ನಮ್ಮ ಅಮ್ಮನಿಗೆ ಆವಾಗಲೇ ಸಮಾಧಾನವಾಗುತ್ತಿದ್ದಿದ್ದು. ಆಮೇಲೆ ನಾವು ಸರಿಯಾಗಿ ನಿದ್ದೆ ಮಾಡುತ್ತಿದ್ವಂತೆ. ಮಠದ ಅಚಾರ್ಯರಿಗೂ, ನಮಗೂ (ಮಕ್ಕಳೊಂದಿಗೆ) ತುಂಬಾ ಸ್ನೇಹವಿತ್ತು. ಅವರು ಎಲ್ಲ ಮಕ್ಕಳೊಡನೆ ತುಂಬಾ ತಾಳ್ಮೆಯಿಂದ, ಸ್ನೇಹದಿಂದ ವರ್ತಿಸುತ್ತಿದ್ದರು. ನಾನು ಮುಂಚೆ ಹೋದರೆ ಕೆಲವು ಸಲ, ಅಲ್ಲಿ ಕಸಗುಡಿಸಿ, ಹೂವುಗಳನ್ನೆಲ್ಲಾ ಕಟ್ಟಿ ಹಾರ ಮಾಡಿ ಸಹಾಯ ಮಾಡುತ್ತಿದ್ದೆ. ಇದೆಲ್ಲಾ ತುಂಬಾ ಖುಷಿ ಕೊಡುತ್ತಿತ್ತು ಮನಸ್ಸಿಗೆ.

ರಾಯರ ಮಠ ನಮ್ಮ ಮನೆ ಪಕ್ಕದಲ್ಲೇ ಇದ್ದಿದ್ದರಿಂದ ಯಾವಾಗಬೇಕೋ ಆಗ ಹೋಗಲು ಅನುಕೂಲ ಮಾಡಿಕೊಟ್ಟಿತ್ತು. ನನ್ನ ಆಪ್ತ ಗೆಳತಿ ಸಾವಿತ್ರಿ, ಅವಳ ತಂದೆ ನರಸಿಂಹಯ್ಯನವರು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವಳು ಚೆನ್ನಾಗಿ ಓದುತ್ತಿದ್ದಳು, ಹಾಗೇ ಒಳ್ಳೇ ಮಾರ್ಕ್ಸ್ಗಳನ್ನು ಪಡೆಯುತ್ತಿದ್ದಳು. ಅವರು ಒಂದು ಹೊಸ ಮನೆ ಕಟ್ಟಿದ್ದರು, ಅದನ್ನ ನೋಡಲು ಸಾವಿತ್ರಿ ನಮ್ಮನ್ನೆಲ್ಲಾ ಕರೆದಿದ್ದಳು. ಮನೆ ಸುಮಾರು ಮುಗಿದಿತ್ತು, ಸ್ವಲ್ಪ ಕೆಲಸ ಬಾಕಿ ಇತ್ತು. ಮನೆಯ ಮುಂದಿನ ವೃಂದಾವನ ಸೀಮೆಂಟ್ ನಲ್ಲಿ ದೊಡ್ಡದಾಗಿ ಕಟ್ಟಿಸುತ್ತಿದ್ದರು. ನರಸಿಂಹಯ್ಯನವರು ನಮಗೆಲ್ಲ ಮನೆ ತೋರಿಸಿ, ನಮ್ಮನ್ನೆಲ್ಲಾ ಹೊರಗೆ ಕರೆದು ತೋರಿಸಿ ಹೇಳಿದರು “ಸಾವಿತ್ರಿ, ಇಲ್ಲೇ ವೃಂದಾವನ ಬರತ್ತೆ, ನಿನಗೆ ಪ್ರದಕ್ಷಿಣೆ ಹಾಕಲು ತುಂಬಾ ಜಾಗ ಇರುತ್ತೋ ಇಲ್ಲವೋ ಎಂದರು”. ಸಾವಿತ್ರಿ ದಿನಾ ಎದ್ದ ತಕ್ಷಣ ವೃಂದಾವನಕ್ಕೆ ನಮಸ್ಕಾರ ಮಾಡದೇ ಬೇರೇನನ್ನೂ ಮಾಡುತ್ತಿರಲಿಲ್ವಂತೆ. ಅವಳು ವೃಂದಾವನ ಬೇಗ ಇಡಿಸಿ ಅಂತ ಅವಳಪ್ಪನಿಗೆ ಹೇಳಿದಳು. ಆಮೇಲೆ, ಅವತ್ತೇ ನಮ್ಮ ಪರೀಕ್ಷೆ ಫಲಿತಾಂಶ ಬಂದಿತ್ತು. ನಮ್ಮೆಲ್ಲರನ್ನೂ ಅವಳಪ್ಪ ರಿಸಲ್ಟ್ ಕೇಳಿದರು. ಸಾವಿತ್ರಿ ಫಸ್ಟ್ ಕ್ಲಾಸ್ ಬಂದಿದ್ದಳು, ಅವರ ಅಪ್ಪ ತಕ್ಷಣ ಹೇಳಿದರು: “ನೋಡು ನೀನು ದಿನಾ ವೃಂದಾವನಕ್ಕೆ ನಮಸ್ಕಾರ ಮಾಡಿದ್ದರಿಂದ ನಿನಗೆ ಒಳಿತಾಗಿದೆ, ನೀವು ಎಲ್ಲ ವೃಂದಾವನಕ್ಕೆ ದಿನಾ ನಮಸ್ಕರಿಸಿದರೆ, ಎಲ್ಲರಿಗೂ ಒಳ್ಳೇದಾಗತ್ತೆ. ದೇವರು ನಿಮಗೆ ಎಲ್ಲ ಶಕ್ತಿಯನ್ನು ಕರುಣಿಸುತ್ತಾನೆ.” ಎಂದರು. ಅವತ್ತು ಅದನ್ನು ಕೇಳಿದ ತಕ್ಷಣ ನನ್ನ ಮನಸ್ಸಿನಲ್ಲಿ ಅದು ಹೊಕ್ಕಿತು. ಅದೂ ಅಲ್ಲದೇ ನಮ್ಮ ಮನೆಯಿಂದ ಎಡವಿ ಬಿದ್ದರೆ ರಾಯರ ಮಠ ಇದ್ದಿದರಿಂದ ಇನ್ನು ಕಷ್ಟವೇನು ದೇವರನು ನೋಡಲು? ಅಥವಾ ರಾಯರು ಸುಮ್ಮನೆ ಬಿಟ್ಟಾರೆ ನಮ್ಮನ್ನೆಲ್ಲಾ? ಅವತ್ತೇ ನಿರ್ಧಾರಮಾಡಿದೆ ಮನಸ್ಸಿನಲ್ಲಿ ವೃಂದಾವನಕ್ಕೆ ನಮಸ್ಕಾರ ಮಾಡುವುದು, ಅದಾಗಾದಾಗ ರಾಯರ ಮಠಕ್ಕೆ ಹೋಗುವುದು. ಹಾಗಾಗಿ ಪ್ರತಿ ಗುರುವಾರನೂ ಹೋಗುತ್ತಿದ್ದೆ. ತುಂಬಾ ಜನರ ಪರಿಚಯವಾಯಿತು. ಸಾವಿತ್ರಿನೂ ಪ್ರತೀ ಗುರುವಾರ ಮತ್ತು ವಿಶೇಷ ಪೂಜೆಗಳಿದ್ದಾಗ ಬರುವಳು. ಒಟ್ಟಿಗೇ ಕೂತು ದೇವರ ಭಜನೆಯನ್ನು ಮಾಡುತ್ತಿದ್ದೆವು. ಪ್ರತೀ ಗುರುವಾರ “ಪಾಹಿ ಪಾಹಿ ರಾಘವೇಂಧ್ರ ಗುರು, ತ್ರಾಹಿ ತ್ರಾಹಿ ಗುಣಸಾಂಧ್ರ ಗುರು ಇಂದ ಹಿಡಿದು ಮಂಗಳ ವರೆಗೂ, ಕೀರ್ತನ, ಲಾಲಿ, ಎಲ್ಲ ಹಾಡಿ ಮಹಾ ಮಂಗಳಾರತಿವರೆಗೂ ಇದ್ದು, ಪ್ರಸಾದ ಪಡೆದು ಮನೆಗೆ ಬರುತ್ತಿದ್ದೆ. ನಾನೊಬ್ಬಳೇ ಹೋಗಿದ್ದ ದಿನ, ಪ್ರಸಾದವನ್ನು ಒಂದು ಸಲ ತಿಂದು, ಇನ್ನೊಮ್ಮೆ ಇಸ್ಕೊಂಡು ಮನೆಗೆ ತರುತ್ತಿದ್ದೆ. ನಮ್ಮ ಅಮ್ಮ ನನ್ನ ಹೊಗಳಿದಾಗ, ನನ್ನ ಅಣ್ಣ ತಮಾಷೆ ಮಾಡುತ್ತಿದ್ದ “ಅವಳು ತಿಂಡಿ ಪೋತಿ, ಚರಪಿಗೆ, ಕೊಬ್ಬರಿ ಸಕ್ರೆ ಎಲ್ಲ ತಿನ್ನಕ್ಕೆ ಹೋಗ್ತಾಳೆ” ಅಂತ.

ರಾಯರ ಜೊತೆ ಒಡನಾಟ ದಿನ ದಿನಕ್ಕೆ ಬೆಳೆಯಿತು. ಮಠಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಮನೆಯಲ್ಲೇ ನೆನೆಯುತ್ತಿದ್ದೆ. ನಮ್ಮ ತಂದೆ ನಾನು ೧೬ ವರುಷವಿದ್ದಾಗಲೇ ತೀರಿಕೊಂಡಾಗ, ರಾಯರ ಮೇಲೆ ಕೋಪ ಬಂದಿತ್ತು. ಅವರ ಕಾಲ ಮುಗಿದಿತ್ತು ಅಂತ ಹೇಳಿ ನನ್ನನ್ನು ಸಮಾಧಾನ ಮಾಡಿದ್ದರು. ಆಮೇಲೆ ಬೆಂಗಳೂರಿಗೆ ಬಂದೆ ನ್ಯಾಶನಲ್ ಕಾಲೇಜ್ ಸೇರಿಕೊಂಡೆ. ನಮ್ಮ ದೊಡ್ಡಮ್ಮನ ಮನೆಯಲ್ಲಿ ಜಯನಗರ ೯ ನೇ ಬ್ಲಾಕ್ ನಲ್ಲಿ ಇದ್ದೆ. ಒಂದು ವರುಷವಾದ ನಂತರ ಜಯನಗರ ೪ ನೇ ಟಿ ಬ್ಲಾಕ್ ನಲ್ಲಿರುವ “ರಾಯರ ಮಠ, ರಾಮ ಮಂದಿರ” ಪಕ್ಕದಲ್ಲಿರುವ ಮನೆಗೇ ಬಾಡಿಗೆಗೆ ಬಂದೆವು. ಇದು ರಾಯರ ಅನುಗ್ರಹ ಅಂತಲೇ ಹೇಳಬೇಕು. ರಾಯರ ಮಠದ ಜೊತೆಗೆ ಪಕ್ಕದಲ್ಲೇ ರಾಮ ಮಂದಿರ. ಹೀಗೆ ಬೆಂಗಳೂರಿಗೆ ಬಂದ ತಕ್ಷಣವೇ ನನ್ನನ್ನು ಪಕ್ಕದಲ್ಲಿ ಕರೆಸಿಕೊಂಡಿದ್ದರು ರಾಯರು. ನಾನು ಮೈಸೂರು ಮೆಡಿಕಲ್ ಕಾಲೇಜ್ಗೆಂದು ಮೈಸೂರಿಗೆ ಬಂದಾಗ, ಕ್ರಿಷ್ಣಮೂರ್ತಿಪುರಂ ನಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಅಲ್ಲೂ ರಾಯರ ಮಠ ಗಣೇಶ ಟಾಕೀಸ್ ಹಿಂಬಾಗದಲ್ಲೇ ನಮ್ಮ ಬಡಾವಣೆಯಲ್ಲೇ ಇತ್ತು. ಅಲ್ಲೂ ನಾನು ರಾಯರ ಮಠಕ್ಕೆ ಹತ್ತಿರವಾಗಿರುವ ಯೋಗ ನನ್ನದಾಗಿತ್ತು. ಮೆಡಿಕಲ್ ಕಾಲೇಜ್ ಆದ್ದರಿಂದ ನನಗೆ ಜಾಸ್ತಿ ಹೋಗಲು ಕಾಲಾವಕಾಶ ವಾಗುತ್ತಿರಲಿಲ್ಲ. ಮನೆಯಲ್ಲೇ ರಾಯರನ್ನು ನೆನೆಯುತ್ತಿದ್ದೆ. ಕಡೆಗೆ ಅಮೇರಿಕಾಕ್ಕೆ ಬಂದಮೇಲೆ ಕ್ಯಾಲಿಫೋರ್ನಿಯದಲ್ಲಿ ಸುಮಾರು ದಿನದಿಂದ ರಾಯರ ಮಠ ಇರಲಿಲ್ಲ. ಇತ್ತೀಚೆಗೆ ಈಗ ಸುಮಾರು ಒಂದೂ ವರೆ ವರುಷದಿಂದ ಶ್ರೀ ಕೃಷ್ಣ ವೃಂದಾವನ ಸ್ಯಾನ್ ಹೋಸೆ ಯಲ್ಲಿ ಕಟ್ಟಿದ್ದಾರೆ. ಈಗಾಗಲೇ ೩- ೪ ಸಲ ಭೇಟಿ ಕೊಟ್ಟಿದ್ದೇನೆ.

ಕಡೂರಿನಲ್ಲಿ ದೇವರುಗಳ ಮಧ್ಯೆ ಬೆಳೆದ ನನಗೆ ದೇವರಿರುವ ಅನುಭವ ಚೆನ್ನಾಗಿ ಆಗಿತ್ತು. ಈಗಲೂ ನನಗೆ ಅದೇ ಅನುಭವ ಇದೆ. ರಾಯರು ಸದಾ ನಮ್ಮನ್ನೆಲ್ಲಾ ಕಾಯುತ್ತಿದ್ದಾರೆ. ರಾಯರಿಗೊಂದು ನಮಸ್ಕಾರ ಹಾಕಿ ಈ ಸಂಚಿಕೆಯನ್ನು ಮುಗಿಸೋಣ….

“ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ”

ಶ್ರೀ ರಾಘವೇಂದ್ರಾಯ ನಮಃ!!!!!

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ನವರಾತ್ರಿ!

ಕಡೂರಿನ ದಿನಗಳು – ನವರಾತ್ರಿ!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ!

ನವರಾತ್ರಿ ಅಂದರೆ ಸಾಕು ಇವತ್ತಿಗೂ “ನಾವು ಆಚರಿಸುತ್ತಿದ್ದ ನವರಾತ್ರಿ ಕಡೂರಿನಲ್ಲಿ” ಯ ಸುಂದರ ನೆನಪು ಕಣ್ಣಿಗೆ ಕಟ್ಟಿದಂತಿದೆ. ನಾವಿದ್ದುದು ಕಡೂರಿನ ಕೋಟೆಯಲ್ಲಿ. ನಮ್ಮ ಮನೆಯ ಸುತ್ತಲೂ ದೇವಸ್ಥಾನಗಳು, ಹಿತ್ತಲ ಬಾಗಿಲ ಮುಂದೆ ಆಂಜನೇಯನ ಗುಡಿ, ಮುಂಬಾಗಿಲ ಮುಂದೆ ಕೇಶವ ದೇವರ ದೇವಸ್ಥಾನ, ಒಂದು ಪಕ್ಕಕ್ಕೆ ರಾಯರ ಮಠ! ಅದಕ್ಕೆ ಅಂಟಿಕೊಂಡಂತೆ ಈಶ್ವರನ ಗುಡಿ. ಇಷ್ಟಾದ ಮೇಲೆ ಇನ್ನೇನು ಹೇಳುವುದೇ ಬೇಡ, ಹಬ್ಬ ಹರಿದಿನಗಳು ನಮ್ಮ ಕೋಟೆಯಲ್ಲಿ ಹೇಗೆ ನಡೆಯಬಹುದೆಂದು. ಕೋಟೆ ಒಂದು ತರಹ ಬ್ರಾಹ್ಮಣರ ವಠಾರ ದೊಡ್ಡ ಪ್ರಮಾಣದಲ್ಲಿ ಎನ್ನಬಹುದಿತ್ತು. ಎಲ್ಲರ ಮನೆಯಲ್ಲೂ ಎಲ್ಲ ಹಬ್ಬಗಳನ್ನು ಪಾಂಗತವಾಗಿ ಚಾಚೂ ತಪ್ಪದೇ ಆಚರಿಸುತ್ತಿದ್ದೆವು.

ನವರಾತ್ರಿ ಸಡಗರ ಪಾಡ್ಯದ ಹಿಂದಿನದಿನದಿಂದಲೇ ಶುರುವಾಗುತಿತ್ತು, ಏಕೆಂದರೆ ಪಾಡ್ಯದ ಹೊತ್ತಿಗೆ ಬೊಂಬೆಗಳನ್ನೆಲ್ಲಾ ಕೂರಿಸಿ ರಡಿಮಾಡಬೇಕಿತ್ತು. ಹಬ್ಬ ಒಂದುವಾರ ಇದೆ ಅನ್ನುವಾಗಲೇ ಪೆಟ್ಟಿಗೆಯಿಂದ ಪಟ್ಟದ ಗೊಂಬೆಗಳನ್ನು ತೆಗೆದು, ಸೀರೆ, ಪಂಚೆ, ಪೇಟ, ಪಟ್ಟಿ ಎಲ್ಲ ಸರಿ ಇದೆಯಾ ಅಂತ ನೋಡಿ, ಇಲ್ಲದಿದ್ದರೆ ಹೊಸ ಸೀರೆ ಉಡಿಸಿ, ರವಿಕೆ ತೊಡಿಸಿ, ಸರ, ವಡವೆ ಎಲ್ಲ ಹೊಲೆದು ಹಾಕಿ ತಯ್ಯಾರು ಮಾಡುತ್ತಿದ್ದೆವು. ನಮ್ಮ ಮನೆಯ ತುಂಬ ಹೆಣ್ಣು ಮಕ್ಕಳು – ೬ ಜನ ಅಕ್ಕ ತಂಗಿಯರು ಇದ್ದುದ್ದರಿಂದ ಈ ಕೆಲಸಗಳು ಶೀಘ್ರದಲ್ಲಿ ಮುಗಿಯುತ್ತಿತ್ತು. ನಮ್ಮ ಅಮ್ಮ ಒಂದು “ಕಲೆಯ ಸ್ವರೂಪ” ಅಂದರೆ ಅತಿಶಯೋಕ್ತಿ ಆಗುವುದಿಲ್ಲ. ಅವರ ಹೆಸರೇ “ಪಾರ್ವತಿ”, ಅದಕ್ಕೆ ಸರಿಯಾಗಿ, ಹಾಡು, ಹಸೆ, ಕಲೆ ಎಲ್ಲ ಸ್ವಾಭಾವಿಕವಾಗಿ ಬಂದಿತ್ತು. ಅದನ್ನು ನಮಗೆಲ್ಲ ಹೇಳಿಕೊಟ್ಟು ನಮ್ಮ ಮನೆಯಲ್ಲಿ ಯಾವಾಗಲೂ ಇವೆಲ್ಲ ತಡೆರಹಿತವಾಗಿ ಹರಿದಿತ್ತು. ನಮ್ಮ ದೊಡ್ದ ಅಕ್ಕ, ಅಮ್ಮ ಮತ್ತು ಅಮ್ಮನ ಸ್ನೇಹಿತರಿಂದ ಬಹಳ ಕಲಿತು ನಮಗೆಲ್ಲ ಕಲಿಸುತ್ತಿದ್ದಳು. ಹೀಗೆ ಎಲ್ಲ ಸೇರಿ ಉತ್ಸಾಹದಿಂದ ಈ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದೆವು.

ನಮ್ಮ ಮನೆಯಲ್ಲಿ ೩- ದೊಡ್ಡ ಮೆಟ್ಟಲುಗಳನ್ನು ಮಾಡಿ, ಮುಖ್ಯವಾದ ಬೊಂಬೆಗಳನ್ನು ಇಡುತ್ತಿದ್ದೆವು. ಆದರೆ, ಕೆಳಗಡೆ ಉಧ್ಯಾನವನ ರಾಗಿ ಪೈರನ್ನು ಬೆಳೆಸಿ, ಮಾಡುತ್ತಿದ್ದೆವು. ಸಣ್ಣ ಸಣ್ಣ ಕಲ್ಲುಗಳನ್ನು ಕೊನೆಯಲ್ಲಿ ಇಟ್ಟು, ಪಾರ್ಕ್ ಒಳಗೆ ಹುಲ್ಲು, ಗೊಂಬೆಗಳು, ನೀರಿನ ಕೊಳ ಎಲ್ಲ ಮಾಡುತ್ತಿದ್ದೆವು. ಅದರ ಸಡಗರನೇ ಅದಕ್ಕಿಂತ ಖುಷಿ ಕೊಡುತ್ತಿತ್ತು. ನಾವೆಲ್ಲ ಹೊರಗಡೆ ಬೊಂಬೆ ಆರತಿಗೆ ಬೇರೆ ಮನೆಗಳಿಗೆ ಹೋದಾಗ, ನಮ್ಮ ಅಮ್ಮ, ಅಜ್ಜಿ ನಮ್ಮ ಮನೆಗೆ ಬಂದವರಿಗೆಲ್ಲಾ “ಬೊಂಬೆ ಬಾಗಿನ” ಕೊಡುತ್ತಿದ್ದರು. ಅಮ್ಮ ೩- ೪ ದಿನಏನಾದರೂ ಮನೆಯಲ್ಲೇ ಮಾಡುತ್ತಿದ್ದರು ಬೊಂಬೆ ಬಾಗಿನಕ್ಕೆ, ಮತ್ತೆ ಕೆಲವು ದಿನ, ಬ್ರೆಡ್ ಐಯಂಗಾರ್ ಬೇಕರಿ ಯಿಂದ ನಿಪ್ಪಟ್ಟು, ಖಾರದ ಬಿಸ್ಕತ್, ಬೆಣ್ಣೆ ಬಿಸ್ಕತ್, ಕೊಬ್ಬರಿ ಬಿಸ್ಕತ್, ಇಲ್ಲ, ರಸ್ಕ್, ಹೀಗೇನಾದರೂ ತಂದು ಕೊಡುತ್ತಿದ್ದೆವು. ನಮ್ಮ ಅಣ್ನ ನಾವೆಲ್ಲ ಬೊಂಬೆ ಆರತಿ ಮುಗಿಸಿ ಬರೋದನ್ನೇ ಕಾಯುತ್ತಿದ್ದ, ಏನು ಗಿಟ್ಟಿಸಿಕೊಂಡು ಬಂದ್ರೇ? ಅಂತ ಕೇಳಿ ನಮ್ಮ ಕೈಯಿಂದ ಅವನಿಗೆ ಇಷ್ಟವಾಗಿದ್ದನ್ನ ಇಸ್ಕೊಂಡು ತಿಂತಾ ಇದ್ದ. ಬೆಣ್ಣೇ ಬಿಸ್ಕತ್, ಉಸ್ಲಿ, ಕೊಬ್ಬರಿ ಬಿಸ್ಕತ್, ನಿಪ್ಪಟ್ಟು ಎಲ್ಲ ಇಸ್ಕೊಂಡು, ಸಾದಾ ಬಿಸ್ಕತ್ ಎಲ್ಲ ನೀವೇ ತಿನ್ರಿ ಅಂತಾ ಇದ್ದ. ಕೆಲವರ ಮನೆಯಲ್ಲಿ “ಅತ್ರಸ” ಕೂಡಾ ಸಿಗುತ್ತಿತ್ತು. ಹಬ್ಬದ ದಿನದ ಊಟಕ್ಕೆ ಮಾಡುವಾಗ ಜಾಸ್ತಿ ಮಾಡಿ ಅದನ್ನೇ ಬೊಂಬೆ ಬಾಗಿನಕ್ಕೂ ಕೊಡುತ್ತಿದ್ದರು. ತುಂಬಾ ಮನೆಗಳಲ್ಲಿ ಸರಸ್ವತಿ ಪೂಜೆ ದಿನ ಕಡ್ಲೇ ಹಿಟ್ಟು ಅರ್ಥಾತ್ “ಗನ್ ಪೌಡರ್” ಹಾಗಂತ ನಾವು ಕರೀತಿದ್ವಿ, ಕೊಡುತ್ತಿದ್ದರು.

ಗೊಂಬೆ ಆರತಿಗೆ ಹೋದಾಗ ತುಂಬಾ ತಮಾಷೆಗಳೂ ಆಗುತ್ತಿದ್ದವು. ನಮ್ಮ ಕ್ಲಾಸ್ ಮೇಟ್ಸ್, ಕೆಲವರು ಹುಡುಗರು ಅವರ ಮನೆಯ ಹೊರಗೆ, ಸ್ನೇಹಿತರೊಡನೆ ಹರಟೆ ಹೊಡೀತಾ ಕುಳಿತ್ತಿರುತ್ತಿದ್ದರು. ನಾವೇನಾದರೂ “ಗೊಂಬೆ ಕೂರಿಸಿದ್ದೀರಾ”? ಅಂತ ಕೇಳಿದರೆ, “ಇಲ್ಲ ಗೂಬೆ ಕೂರಿಸಿದ್ದೀವಿ” ಅಂತ ತಮಾಷೆ ಮಾಡುತ್ತಿದ್ದರು. ಇಲ್ಲದೇ ಹೋದ್ರೆ, “ನೀವೆಲ್ಲ ಆಗ್ಲೇ ಬಂದು ಚರಪು ಇಸ್ಕೊಂಡು ಹೋದ್ರಲ್ಲಾ” ಅಂತ ನಮ್ಮನ್ನೆಲ್ಲಾ ರೇಗಿಸುತ್ತಿದ್ದರು. ಅಷ್ಟೊತ್ತಿಗೆ, ಅವರಮ್ಮನೋ, ಅಕ್ಕನೋ ಹೊರಗೆ ಬಂದು, ಬನ್ನಿ ಅಂತ ನಮ್ಮನ್ನೆಲ್ಲಾ ಕರೆದು ಹಾಡು ಹೇಳಿಸಿ, ಬೊಂಬೆ ಬಾಗಿನ ಕೊಡುವರು. ನಾವು ಬೀಗುತ್ತಾ ಇವರನ್ನೆಲ್ಲಾ ನೋಡಿಕೊಂಡು ನಗುತ್ತಿದ್ದೆವು.

ಕೆಲವು ನಮ್ಮ ಸ್ನೇಹಿತರ ಮನೆಯಲ್ಲಿ ಹಾಡು ಹೇಳೋವರೆಗೂ ಬೊಂಬೆ ಬಾಗಿನ ಕೊಡುತ್ತಿರಲಿಲ್ಲ. ಹಾಡು ಬರಲ್ಲಾ ಅಂದರೆ, ಇಲ್ಲ ನಮಗೆಲ್ಲಾ ಗೊತ್ತು, ಸ್ವಲ್ಪನಾದ್ರು ಬರತ್ತೆ ಅಂತ ಬಲವಂತ ಮಾಡುತ್ತಿದ್ದರು. ಹಾಗಾಗಿ ನಾವೆಲ್ಲ ಸಣ್ಣ ಪುಟ್ಟ ಹಾಡುಗಳನ್ನು ಕಲಿತುಕೊಂಡು, ಅಭ್ಯಾಸಮಾಡಿಕೊಂಡು ರಡಿಯಾಗುತ್ತಿದ್ದೆವು. ಯುದ್ಧ ಕಾಲೇ ಶಸ್ತ್ರಾಭ್ಯಾಸ ಅಂದಹಾಗೆ ಆಗಷ್ಟೇ ಕಲಿತ ಹಾಡುಗಳು “ಪೂಜಿಸಲೆಂದೇ ಹೂವ್ಗಳ ತಂದೇ”, ಗಜಮುಖನೇ ಗಣಪತಿಯೇ, ಇತ್ಯಾದಿ. ಹಾಗೆ ಹಾಡು ಹೇಳುವಾಗ…ಒಬ್ಬರು “ಸ್ವಾಮಿ” ಅಂತ ಹೇಳಿದಾಗ ಇನ್ನೊಬ್ಬರು “ರಾಮ” (ಪೂಜಿಸಲೆಂದೇ ಹಾಡಿನಲ್ಲಿ)ಅಂತ ಹಾಡಿ ಅನಾಹುತ ಆಗುತ್ತಿತ್ತು. ಆಮೇಲೆ ಕೆಲವು ಹಾಡುಗಳನ್ನು ಅರ್ಧಕ್ಕೇ ನಿಲ್ಲಿಸಿಬಿಡುತ್ತಿದ್ವಿ, ಮರೆತು ಹೋದಾಗ. ಅಷ್ಟರಲ್ಲಿ, ಅವರೇ ಬೊಂಬೆ ಬಾಗಿನ ಕೊಟ್ಟು ಕಳಿಸುತ್ತಿದ್ದರು. ಇದನ್ನೆಲ್ಲಾ ನೆನಪಿಸಿಕೊಂಡರೆ, ಎಷ್ಟೊಂದು ಸಂಭ್ರಮ, ಸಡಗರ, ತಮಾಷೆ, ಸ್ನೇಹ, ಸಂಬಂಧ ಇತ್ತು ಆಗ ಅನ್ನಿಸುತ್ತೆ. ಹಬ್ಬ ಮುಗಿದಮೇಲೆ ಮುಂದಿನ ಹಬ್ಬಕ್ಕಾಗಿ ಕಾಯುತ್ತಿದ್ದೆವು. ಹೀಗೆ ನವರಾತ್ರಿ ವಿಜಯದಶಮಿ ಆಗೋವರೆಗೂ ದಿನಾ ಉತ್ಸಾಹದಿಂದ ನಲಿದಾಡುತ್ತಿದ್ದೆವು. ಹೊಸಬಟ್ಟೆಗಳನ್ನು ಹಾಕಿ ಕೊಂಡು, ತಿಂಡಿ ತಿನಿಸುಗಳನ್ನು ತಿಂದು, ಆಟ ಆಡಿ, ಹಾಡು ಹಾಡಿ, ವಿಜಯದಶಮಿ ದಿನ ಬನ್ನಿ ಮಂಟಪಕ್ಕೆ ಹೋಗಿ, ಬನ್ನಿ ಸೊಪ್ಪು ತಂದು, “ಶಮೀ ಶಮಿಯತೇ ಪಾಪಮ್ …” ಅಂತ ಶ್ಲೋಕ ಹೇಳಿ, ದೊಡ್ಡವರಿಗೆಲ್ಲಾ ನಮಸ್ಕರಿಸಿ, ನವರಾತ್ರಿಯನ್ನು ವಿಜಯ ದಶಮಿ ದಿನ ಬೀಳ್ಕೊಡುತ್ತಿದ್ದೆವು!

ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು!! ಎಲ್ಲರ ಬಾಳಲ್ಲೂ ನವರಾತ್ರಿ ಸುಖ ಸಂತೋಷವನ್ನು ತರಲಿ!!!331694_10150334112748246_619338245_8436761_2048631308_o

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ

ಕಡೂರಿನ ದಿನಗಳು – ಕದ್ದು ತಿಂದ ಲಾಡು ಉಂಡೆ!

ಕಡೂರಿನ ದಿನಗಳು – ಕದ್ದು ತಿಂದ ಲಾಡು ಉಂಡೆ!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಕಡೂರಿನ ನಮ್ಮ ಮನೆಯ ಮುಂದೆ ಕೇಶವ ದೇವರ ದೇವಸ್ಥಾನವಿತ್ತು. ಸಾಕಷ್ಟು ವಿಶಾಲವಾಗಿತ್ತು. ಪ್ರಾಂಗಣವೂ ದೊಡ್ದದಾಗಿ ಹೂವು ಮತ್ತು ಹಣ್ಣಿನ ಗಿಡ ಮರಗಳಿದ್ದವು. ನಾವು ಚಿಕ್ಕವರಿದ್ದಾಗ ದೇವಸ್ಥಾನದ ಹೊರಗೆ, ಜಗುಲಿಯ ಮೇಲೆ, ಮತ್ತು ಕೆಲವೊಮ್ಮೆ ಒಳಗೂ ಆಟ ಆಡಿ ಕಾಲ ಕಳೆಯುತ್ತಿದ್ದೆವು. ಬೇಸಿಗೆ ರಜ ಬಂತೆಂದರೆ ಸಾಕು, ಪರಂಗಿ ಗಿಡದಿಂದ ಪರಂಗಿ ಕಾಯಿ ಉದುರಿಸಿ, ಇನ್ನೂ ಹಾಣ್ಣಾಗಿರದಿದ್ದರೆ, ಹೆಚ್ಚಿ, ಉಪ್ಪು ಕಾರ ಹಾಕಿ ತಿಂದು, ನೀರು ಕುಡಿದು, ಮತ್ತೆ ಆಟ ಆಡಲು ಹೋಗುತ್ತಿದ್ದೆವು. ಮದುವೆ, ಮುಂಜಿ ಮಾಡಲು ಅನುಕೂಲವಾಗಲಿ ಅಂತ ದೇವಸ್ಥಾನದ ಪ್ರಾಂಗಣದ ಒಂದು ಭಾಗದಲ್ಲಿ ಒಂದು ಅಡಿಗೆ ಶಾಲೆ ಮತ್ತು ಅದಕ್ಕೆ ಅಂಟಿಸಿದಂತೆ ಒಂದು ರೂಮು ಕಟ್ಟಿಸಿದ್ದರು ಹೊಸದಾಗಿ.

ಮದುವೆ, ಮುಂಜಿಗಳು ಬೇಸಿಗೆಯಲ್ಲಿ ಜಾಸ್ತಿಯಾದ್ದರಿಂದ ಆಗಾಗ್ಗೆ ಅಡಿಗೆ ಶಾಲೆ ಬಿಜಿಯಾಗಿ ಅಡಿಗೆ ಭಟ್ಟರುಗಳು ಮೊದಲೇ ತಯಾರಿಸಿ ಇಟ್ಟುಕೊಳ್ಳುವಂತಹ ತಿಂಡಿಗಳನ್ನು ಹಿಂದಿನ ದಿನವೇ ತಯಾರಿಸುತ್ತಿದ್ದರು. ಹೀಗೊಂದು ಮದುವೆ ಇನ್ನೆರಡು ದಿನಗಳು ಇದೆ ಅನ್ನುವಾಗ ಅಡಿಗೆಶಾಲೆಯಲ್ಲಿ ಲಾಡು ಉಂಡೆ ತಯಾರಿಸುತ್ತಿದ್ದರು ೨-೩ ಜನ ಭಟ್ಟರು ಸೇರಿ. ಒಬ್ಬರು ತುಪ್ಪದಲ್ಲಿ (ಎಣ್ಣೆಯಲ್ಲಿ) ಕರೆಯುತ್ತಿದ್ದರು, ಇನ್ನೊಬ್ಬರು ಆದ ಕಾಳುಗಳನ್ನೆಲ್ಲ ಒಂದು ದೊಡ್ದ ಬೇಸನ್ ಗೆ ಹಾಕಿ, ಸಕ್ಕರೆ ಪಾಕ ಎಲ್ಲ ಹಾಕಿ ಉಂಡೆ ಕಟ್ಟುತ್ತಿದ್ದರು. ಮೂರನೆಯವರು ಕಟ್ಟಿದ ಉಂಡೆಗಳನ್ನೆಲ್ಲ ಗೊಪುರದಲ್ಲಿ ತಟ್ಟೆಯ ಮೇಲೆ ಜೋಡಿಸಿ, ಆರಲು ಕಿಟಕಿಯ ಬಳಿ ಒಂದು ತೊಟ್ಟಿಯ ಮೇಲೆ ಇಡುತ್ತಿದ್ದರು. ಹೀಗೆ ಒಂದು ತಟ್ಟೆಯ ತುಂಬ ಗೋಪುರದಲ್ಲಿ ಲಾಡು ಉಂಡೆಗಳು ಜೋಡಿಸಿ ರೆಡಿಯಾಗಿತ್ತು. ನಾವುಗಳು ಒಂದು ೪ – ೫  ಮಕ್ಕಳು ಅಲ್ಲೇ ಹೊರಗಡೆ ದೇವಸ್ಥಾನದ ಪ್ರಾಂಗಣದಲ್ಲಿ ಜೂಟಾಟ, ಓಡಿ ಹಿಡಿಯುವ ಆಟ, ಜಗಲಿ ಆಟ ಎಲ್ಲ ಆಡುತ್ತಿದ್ದೆವು. ಪ್ರತೀಸಲ ಅಡಿಗೆಶಾಲೆ ಮುಂದೆ ಓಡುವಾಗ, ಘಮ – ಘಮ ಲಾಡು ವಾಸನೆ (ಪಚ್ಚಕರ್ಪೂರದ ಸುವಾಸನೆ) ನಮ್ಮಗಳ ಮೂಗಿಗೆ ತಗುಲಿ, ಅಲ್ಲೇ ಕಿಟಕಿ ಮೂಲಕ ನೋಡಿ ತಟ್ಟೆಯ ತುಂಬಾ ಲಾಡು ನೋಡಿ ಖುಷಿ ಪಡುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ವಿಶ್ರಮಿಸಿಕೊಳ್ಲಲು ಎಲ್ಲ ಒಂದು ಕಡೆ ಸೇರಿದಾಗ, ಮಾತು ಕಥೆ ಹೀಗೆ ನಡೆದಿತ್ತು.

ಅಯ್ಯೋ ಲಾಡು ವಾಸನೆ ಎಷ್ಟು ಚೆನ್ನಾಗಿ ಬರುತ್ತಿದೆ, ತಿನ್ನಬೇಕು ಅನ್ನಿಸುತ್ತಿದೆ ಏನು ಮಾಡುವುದು? ಅನ್ನೋದೆ ಎಲ್ಲರ ಪ್ರಶ್ನೆ ಯಾಗಿತ್ತು. ಸ್ವಲ್ಪ ಮಾತಾಡಿ, “ಅವರನ್ನು ಮಾತಾಡಿಸುವುದು, ಅವರೇ ನಮಗೆಲ್ಲ ಒಂದೊಂದು ಲಾಡು ಕೊಡಬಹುದು ಅಂತ ತೀರ್ಮಾನಿಸಿ…ಲಾಡು ಚೆನ್ನಾಗಿ ಕಟ್ಟಿದೀರ, ಮದುವೆಗಾ? ಯಾವತ್ತು ಮದುವೆ ಅಂತ ಕೇಳೋದು” ಅಂತ ತೀರ್ಮಾನಿಸಿದೆವು. ಹೀಗೆ ಗುಂಪಲ್ಲಿ ಹೋಗಿ ಮಾತಾಡಿಸಿದೆವು. “ಕಿಟಕಿ ಯಿಂದ ದೂರ ಇರಿ, ಒಂದು ಲಾಡು ಬಿದ್ದರೆ, ಎಲ್ಲ ಉರುಳಿ ಹೋಗತ್ತೆ, ದೂರ ಹೋಗಿ ಆಡಿಕೊಳ್ಳಿ” ಅಂದರು. ನಿರಾಸೆಯಿಂದ ಬಂದು ಮತ್ತೆ ಸ್ವಲ್ಪ ಆಟ ಆಡಿದೆವು. ಈಗ ಲಾಡು ಸುವಾಸನೆ – ಪಚ್ಚಕರ್ಪೂರದ ಘಮ ಘಮ ಇನ್ನೂ ಜೋರಾಗಿ ಬರಲಾರಂಬಿಸಿತು, ತುಂಬಾ ತಟ್ಟೆಗಳಾದ್ದರಿಂದ ಕೆಲವು ತಟ್ಟೆಗಳನ್ನು ನೆಲದಮೇಲೂ ಇಟ್ಟಿದ್ದರು. ಬಾಯಲ್ಲಿ ನೀರೂರಿ ಮನಸ್ಸಿನಲ್ಲೇ ಮಂಡಿಗೆ ತಿನ್ನಲಾರಂಬಿಸಿದೆವು. ಕಡೆಗೂ ಒಂದು ತೀರ್ಮಾನ ಮಾಡೇ ಬಿಟ್ಟೆವು. ನಮ್ಮಲ್ಲಿ ದೊಡ್ದವನಾದ ಪ್ರಸಾದಿ ಒಂದೇ ಒಂದು ಲಾಡು ಹುಷಾರಾಗಿ ಕದಿಯುವುದು ಕಿಟಕಿಯಿಂದ, ತಕ್ಷಣ ನಮ್ಮಲ್ಲೊಬ್ಬರಿಗೆ ಅದನ್ನು ಕೊಡುವುದು ಮುಚ್ಚಿಡಲು, ಮಿಕ್ಕವರು ಅಡಿಗೆ ಭಟ್ಟರ ಗಮನ ಸೆಳೆಯಲು ಅಡಿಗೆ ಶಾಲೆಯ ಬಾಗಿಲ ಮುಂದೆ ನಿಂತು ಒಳಗೆ ಲಾಡು ಕರಿಯುವುದನ್ನು ನೋಡುವುದು. ಆಮೇಲೆ ಕದ್ದ ಲಾಡುವಿನಲ್ಲಿ ಎಲ್ಲರೂ ಹಂಚಿಕೊಂಡು ತಿನ್ನುವುದು. ಪ್ರಸಾದಿನೂ ಕದಿಯುವಾಗ ಅಥವಾ ಕದ್ದಮೇಲೆ, ಅಡಿಗೆ ಭಟರೇನಾದರೋ ಸಂಶಯದಿಂದ ನೋಡಿದರೆ, ನಮ್ಮನ್ನೆಲ್ಲ ಸಂಭೋಧಿಸಿ ಹೀಗೆ ಹೇಳುವುದು “ಅವರು ಮದುವೆಗೆ ಲಾಡು ಮಾಡುತ್ತಿದ್ದಾರೆ, ನೀವೆಲ್ಲ ಯಾಕೆ ಹೀಗೆ ಅವರನ್ನು ಕಾಡ್ತೀರ, ಎಲ್ಲ ಮುಗಿದಮೇಲೆ ಅವರೇ ಕೊಡುತ್ತಾರೆ” ಅಂತ ಅನುಮಾನ ಬರದಿದ್ದ ಹಾಗೆ ನೋಡಿಕೊಳ್ಳುವುದು ಅಂತ ತೀರ್ಮಾನಿಸಿದೆವು. ದೇವಸ್ಥಾನದ ಭಟ್ಟರ ಮಗ ಪ್ರಸಾದಿಗೆ ಈ ತರಹ ಕೆಲಸದಲ್ಲಿ ಚಾತುರ್ಯ ಇತ್ತು. ಬೇಕಾದರೆ ಕದಿಯುವಾಗ ಸ್ವಲ್ಪ ಜೋರಾಗಿ ಮಂತ್ರ ಹೇಳಿದರೆ, ದೆವಸ್ಥಾನದ ಭಟ್ಟರಿರಬೇಕು, ಇಲ್ಲೇ ಓಡಾಡುತ್ತಿದ್ದಾರೆ ಅಂತ ಅಡಿಗೆ ಭಟ್ಟರಿಗೆ ಅನಿಸಬೇಕು, ಹಾಗೆ ಬೇಕಾದರೂ ತಂತ್ರ ಮಾಡಲು ಗೊತ್ತಿತ್ತು.

ಎಲ್ಲ ಸಿದ್ದರಾದೆವು. ಇಬ್ಬರು ಬಾಗಿಲ ಮುಂದೆ ಹೋಗಿ ನಿಂತು ಮಾತಾಡುತ್ತಿದ್ದೆವು. ಏಷ್ಟು ಚೆನ್ನಾಗಿ ಮಣಿ ಮಣಿ ಹಾಗೆ ಕಾಣಿಸುತ್ತೆ ಲಾಡು ಕಾಳುಗಳು ಅಂತ. ಅಡಿಗೆ ಭಟ್ಟರು (ಕರಿಯುತ್ತಿದ್ದವರು): ನೀವು ದೊಡ್ದವರಾದಮೇಲೆ ಇದನ್ನೆಲ್ಲ ಕಲಿತು ಮಾಡಬಹುದು ಅಂತ ಹೇಳುತ್ತಿದ್ದರು. ನಮ್ಮ ಸಂಭಾಷಣೆ ಶುರುವಾದಮೇಲೆ, ಪ್ರಸಾದಿ ಕಿಟಕಿಯ ಬಳಿಗೆ ಹೋಗಿ ಕದಿಯಲು ಸಿದ್ಧನಾದ. ಕದಿಯಲು ಕಷ್ಟ ಇರಲಿಲ್ಲ, ಕಿಟಕಿಯ ಕಂಬಿಗಳ ಮಧ್ಯದಲ್ಲಿ ಕೈ ತೂರಿಸಿ ಮೇಲಿನ ಲಾಡು ಉಂಡೆಯನ್ನು ಅಪಹರಿಸಬೇಕಿತ್ತು. ಹಾಗೆ ಮಾಡುವಾಗ ಅವಸರದಲ್ಲಿ, ಬೇರೆ ಉಂಡೆಗಳಿಗೆ ತಗುಲಿ, ಎಲ್ಲಾ ಒಂದಾದಮೆಲೆ ಇನ್ನೊಂದು ಕೆಳಗೆ ಬಿದ್ದರೆ, ಆಗ ಇವರೆಲ್ಲ ನಮ್ಮನ್ನೆಲ್ಲಾ ಸುಮ್ಮನೆ ಬಿಡುತ್ತಿರಲಿಲ್ಲ. ಇನ್ನೊಂದು ತೊಂದರೆ ಅಂದರೆ, ಕಿಟಕಿ ಹೊರಗಡೆಯಿಂದ ಎತ್ತರ ಇತ್ತು, ಒಳಗಡೆಗಿಂತ. ಆದ್ದರಿಂದ ಹೊರಗಡೆ ಗೋಡೆಯ ತಳಪಾಯದ ಮೇಲೆ ಹತ್ತಿ ಆಮೇಲೆ ಕಿಟಕಿಯೊಳಗೆ ಕೈ ಹಾಕಬೇಕಿತ್ತು. ದಿನಾ ದೇವಸ್ಥಾನದ ಪೌಳಿ ಹತ್ತುತ್ತಿದ್ದಿದ್ದರಿಂದ ಇದರ ಅನುಭವ ಇತ್ತು. ಪ್ರಸಾದಿ ಕೈ ಹಾಕಿ ಒಂದು ಲಾಡುವನ್ನು ಕದ್ದು ಕೆಳಗೆ ಜಂಪ್ ಮಾಡಿದ. ಜಂಪ್ ಮಾಡಿದ ಶಬ್ಧ ಕೇಳಿ ಅಡಿಗೆ ಭಟ್ಟರು ಯಾರದು ಅಂತ ಕಿಟಕಿ ಕಡೆಗೆ ಬಂದರು. ಪ್ರಸಾದಿ: ಇಲ್ಲ, ನಾನೇ ಇಲ್ಲಿ ಓಡಿಕೊಂಡು ಬಂದೆ, ಇವರನ್ನೆಲ್ಲ ಕರೆದುಕೊಂಡು ಹೋಗೋಣ ಅಂತ ಅಂದ. ನಂತರ ಎಲ್ಲರೂ ದೇವರ ಗರ್ಭಗುಡಿಯ ಹಿಂದೆ ಅಂದರೆ ದೇವಸ್ಥಾನದ ಹಿಂದಿನ ಭಾಗಕ್ಕೆ ಹೋಗಿ ಕದ್ದು ತಂದ ಲಾಡು ಉಂಡೆಯನ್ನು ತಿನ್ನಲು ರಡಿಯಾದೆವು. ಒಂದು ೪-೫ ಜನ ಇದ್ದಿದ್ದರಿಂದ ನಮಗೆಲ್ಲ ಹೆಚ್ಚೂ ಕಡಿಮೆ ಕಾಲು ಭಾಗದಷ್ಟು ಸಿಕ್ಕಿತು. ದ್ರಾಕ್ಷಿ, ಗೋಡಂಬಿ, ಲವಂಗ, ಪಚ್ಚಕರ್ಪೂರ ಎಲ್ಲ ಹಾಕಿ ಸಿದ್ಧವಾಗಿದ್ದ ಲಾಡು ನಮ್ಮ ಪಾಲಿನದಾಗಿತ್ತು. ಸ್ವಲ್ಪವಷ್ಟೇ ತಿನ್ನಲು ಸಿಕ್ಕಿದ್ದರೂ ಅದರ ರುಚಿ ಮತ್ತು ಕದ್ದು ತಿಂದಿದ್ದ ಸಾಹಸ ಅದರ ರುಚಿಯನ್ನು ಇಮ್ಮಡಿಗೊಳಿಸಿತ್ತು. ಎಲ್ಲರೂ ಬಾಯಿ ಚಪ್ಪರಿಸುತ್ತಾ ತಿಂದೆವು. ಹಾಗೇ ಪ್ರಸಾದಿಯನ್ನು ಕೇಳಲು ಮರೀಲಿಲ್ಲ. “ನೀನು ಹೇಗೆ ಕದ್ದೆ ಅಷ್ಟೊಂದು ಕರೆಕ್ಟಾಗಿ? ಬೇರೆ ಲಾಡುಗಳು ಬೀಳಲಿಲ್ವಾ?” ಪ್ರಸಾದಿ ಜಂಬದಿಂದಾ ” ನೀವು ಅವರನ್ನು ಮಾತಾಡಿಸುತ್ತಿರಿ ಅಂದರೆ, ನೀವು ಒಂದೆರಡು ಮಾತನಾಡಿ ನನ್ನ ಕಡೆ ನೋಡ್ತಿದ್ರಲ್ಲಾ” ಅಂತ ನಮಗೆಲ್ಲಾ ಬೈದ.

ಲಾಡು ತಿಂದ ಸ್ಪೂರ್ತಿ ಜಾಸ್ತಿಯಾಗಿ ಮತ್ತೆ ದೇವಸ್ಥಾನದ ಮುಂದೆ ಆಡುತ್ತಿದ್ದೆವು. ಆಗ ಅಡಿಗೆ ಶಾಲೆಯಿಂದ ಒಬ್ಬರು ಭಟ್ಟರು ನಮ್ಮನ್ನೆಲ್ಲಾ ಕರೆದು ” ಈ ಒಂದೆರಡು ಲಾಡು ಒಡೆದು ಹೋಗಿದೆ ಒಂದು ಕಡೆ, ನೀವೆಲ್ಲಾ ಇಲ್ಲಿ ಕುಣಿಯುವಾಗ ಕೆಳಗೆ ಬಿದ್ದಿದೆ. ತಗೋಳಿ, ಎಲ್ಲರೂ ಅರ್ಧ ಅರ್ಧ ಮಾಡಿಕೊಂಡು ತಿನ್ನಿ. ಇಲ್ಲಿ ಆಟ ಆಡಬೇಡಿ ಇನ್ನೊಂದು ಸ್ವಲ್ಪ ಹೊತ್ತು. ನಮ್ಮ ಕೆಲಸ ಇನ್ನೇನು ಮುಗಿಯುತ್ತೆ” ಅಂತ ಕೇಳಿಕೊಂಡರು. ಪ್ರಸಾದಿ ಆ ಒಂದು ಲಾಡು ಕದಿಯುವಾಗ, ಇನ್ನೆರಡು ಲಾಡುಗಳಿಗೆ ಪೆಟ್ಟಾಗಿತ್ತು. ಅವರು ನೋಡಿರಲಿಲ್ಲವಾದ್ದರಿಂದ ನಮ್ಮ ಕೃತ್ಯ ಇದು ಅಂತ ಅವರಿಗೆ ತಿಳಿಯಲಿಲ್ಲ. ನಮ್ಮ ಲಾಡು ತಿಂದ ಸಂತೋಷ ಇನ್ನಷ್ಟು ಹೊತ್ತು ಜಾಸ್ತಿಯಾಯಿತು ಅವರಾಗೇ ಕೊಟ್ಟ ಲಾಡು ತಿಂದ ಮೇಲೆ. ೩- ದಿನಗಳ ನಂತರ ಮದುವೆ ಊಟಕ್ಕೂ ಹೋಗಿದ್ವಿ. ನಮ್ಮ ಸ್ನೇಹಿತರಿಗೆಲ್ಲ ಇವತ್ತು ಲಾಡು ವಿಶೇಷ ಊಟಕ್ಕೆ ಅಂತ ಹೇಳಿ ಅದೇ ಅಡಿಗೆ ಭಟ್ಟರಿಂದ ಲಾಡು ಉಂಡೆನ ಕೈಯಲ್ಲಿ ಇಸ್ಕೊಂಡು ಥರ್ಡ್ ಡೋಸ್ ತಿಂದೆವು. ಲಾಡು ತಿಂದಿದ್ದು ವಿಶೇಷವಲ್ಲ, ಕಷ್ಟ ಪಟ್ಟು, ಕದ್ದು, ಸಿಗಹಾಕಿಸಿಕೊಳ್ಳದೇ ತಿಂದೂ, ಮತ್ತಷ್ಟು ಗಿಟ್ಟಿಸಿಕೊಂಡೆವಲ್ಲಾ ಅದೇ ಮಜಾ!!!!! ಏನಂತೀರ?????LaaDu uMdegaLu!

Posted in ಪ್ರಭಂದ !, ಹಾಸ್ಯ ! | 3 ಟಿಪ್ಪಣಿಗಳು

ಕಡೂರಿನ ದಿನಗಳು – ಅಣ್ಣನ ನೆನಪಿನಲಿ!

ಅಣ್ಣನ ನೆನಪಿನಲಿ…………….

“ಸೋಮವಾರ್ ಅಮಾವಾಸ್ಯೆಗಾಗೋಷ್ಟು ಜನ ಇದೀರ, ಇದೊಂದು ಕೆಲಸಮಾಡೋಕ್ ಆಗ್ತಾಇರಲಿಲ್ವಾ?” ಅಂತ ಯಾವಾಗ್ಲೂ ನಮಗೆಲ್ಲಾ ಬೈತಾ ಇದ್ದರು ಅಣ್ಣ (ನಮ್ಮ ತಂದೆ). ನನಗಂತೂ ಇವತ್ತಿಗೂ ಅರ್ಥ ಆಗಿಲ್ಲ, ಸೋಮವಾರ್ ಅಮಾವಾಸ್ಯೆಗೆ ತುಂಬಾ ಜನ ಬೇಕಾ? , ನಾವಿದ್ದಿದ್ದು ಅಣ್ಣ – ಅಮ್ಮಂಗೆ ೭ -ಜನ ಮಕ್ಕಳು, ಗಂಡೊಂದು ಹೆಣ್ಣಾರು. ಅಷ್ಟಕ್ಕೇ ಹಾಗೆ ಹೇಳ್ಬೇಕಿತ್ತಾ? ಅಣ್ಣ ಎಷ್ಟೇ ಬೈದರೂ ಅಷ್ಟೇ ತಮಾಷೆ ಮತ್ತು ಪ್ರೀತಿ ನಮ್ಮೆಲ್ಲರ ಮೇಲೂ ಮತ್ತು ಹೊರಗಿನವರ ಮೇಲೂ ತೋರಿಸುತ್ತಿದ್ದರು. ಅದಕ್ಕೋಸ್ಕರವೇ ದಿನ ನಿತ್ಯದ ಬಾಳಲ್ಲಿ ದಿನಕ್ಕೆ ಹಲವಾರು ಸಾರಿ ಬಂದು ಮಾತಾಡಿಸಿ ಹೋಗುತ್ತಾರೆ. ಅವರ ನೆನಪು ನಿತ್ಯ ನೂತನ. ಸತ್ತು ಸುಮಾರು ೩೨ ವರ್ಷಗಳು ಸಂದಿವೆ, ಆದರೂ ಒಡನಾಟ ಹಾಗೇ ಇದೆ. ಇವತ್ತು ತಂದೆಯರ ದಿನವಾದ್ದರಿಂದ ಇದಕ್ಕೆ ಒಂದು ಅಕ್ಷರರೂಪ ಕೊಟ್ಟೇ ಕೊಡಬೇಕೆಂದು ತೀರ್ಮಾನಿಸಿದ ಪ್ರತಿಫಲವಿದು.

ವೃತ್ತಿಯಲ್ಲಿ ಬಹುರೂಪ, ಶಾನುಭೋಗರು, ಲ್ಯಾಂಡ್ ಲಾರ್ಡ್, (ಅಂದರೆ, ಹೊಲ, ಗದ್ಧೆ ಮತ್ತು ಜಮೀನು ಹೊಂದಿದವರು ಅಂತ ಆಗ ಹೇಳುತ್ತಿದ್ದಿದ್ದು) ಫೇರ್ ಪ್ರೈಸ್ ಶಾಪ್ ಫ್ರಾಂಚೈಸ್ ಹೊಲ್ಡರ್, ಡ್ರಗ್ಶಾಪ್ ಓನರ್, ಕಡೆಗೆ ಒಂದು ಕಾಲದಲ್ಲಿ ಟೈಲರ್ ಕೂಡಾ ಆಗಿ ಡುಡಿದಿದ್ದಾರೆ ಬಾಂಬೆಯಲ್ಲಿ “ಬುಕ್ಕಸಾಗರ ಟೈಲರ್ಸ್” ಅನ್ನುವ ಹೆಸರಿನಲ್ಲಿ. ಅದರ, ಅಂಗಿಗಳಿಗೆ ಹಾಕುವ ಲೇಬಲ್ ರೋಲ್ ಈಗಲೂ ನಮ್ಮ ಮನೆಯಲ್ಲಿದೆ. ಅಣ್ಣ ಬಹು ಭಾಷಾ ಪಾರಂಗತರು, ಹಾಗೆ – ಅವರಕಾಲದಲ್ಲಿ “ಸ್ವಾತಂತ್ರ್ಯಕ್ಕೋಸ್ಕರ” ಆದ ಕಾರ್ಯಗಳಲ್ಲಿ ಪಾಲ್ಗೊಂಡವರು. ಊರಿಗೆ ತಿಳಿದವರೂ, ಹೇಳಿ ಕೇಳಿ ಶಾನುಭೋಗರಾದ್ದರಿಂದ ಅಗಾಗ್ಗೆ “ಪಂಚಾಯಿತಿ” ನಡೆಸಿ ಜನರಿಗೆ “ನ್ಯಾಯ” ಒದಗಿಸುತ್ತಿದ್ದರು. ಊರಲ್ಲಿ ಎಲ್ಲರ ಪ್ರೀತಿಯನ್ನು ಗಳಿಸಿದರೂ ಸ್ವಲ್ಪ ಸಿಟ್ಟಿನ ಸ್ವಭಾವದವರಾಗಿದ್ದಿದ್ದು ಒಂದು ಅಚ್ಚರಿಯ ವಿಷಯ. ಅಣ್ಣ ಭಾರತದ ಮೂಲೆ ಮೂಲೆಗೂ ಪ್ರವಾಸ ಮಾಡಿದ್ದರು. “ದೇಶ ಸುತ್ತಿ ಕೋಶ ಕಲಿ” ಅಂದಹಾಗೆ, ಎಲ್ಲ ಭಾಷೆಗಳು, ಜನಜೀವನ, ಆಡಳಿತ ಎಲ್ಲ ತಿಳಿದುಕೊಂಡಿದ್ದರು. ಅಷ್ಟೇ ಅಲ್ಲದೇ ಅದನ್ನು ಜನರಸೇವೆಗಾಗಿ ಸದುಪಯೋಗಿಸಿಕೊಂಡವರು. ಯಾರಾದರೂ ಓದಿಸಿದ್ದರೆ, ಅಣ್ಣ ಅವರಿಗೆ ಏನು ಬೇಕೋ ಅದಾಗಬಹುದಿತ್ತು, ಆದರೆ, ಅದಕ್ಕೆ ಅವಕಾಶವಿಲ್ಲದಂತೆ ತಮ್ಮ ಎಳೆಯವಯಸ್ಸಿನಲ್ಲೇ ಅಂದರೆ, ೫- ವರುಷ ವಯಸ್ಸಿದ್ದಾಗಲೇ ತಂದೆಯನ್ನು ಕಳೆದುಕೊಂಡು, ತಮ್ಮ ಅಕ್ಕನಿಗೆ ಭಾರವಾಗಬಾರದೆಂದು ಯಾರಿಗೂ ಗೊತ್ತಿಲ್ಲದೇ ಊರುಬಿಟ್ಟು ಹೋಗಿ, “ಚೈಲ್ಡ್ ಲೇಬರ್” ಮಾಡಿಕೊಂಡು, ವಿದ್ಯೆಗಳನ್ನು ಮತ್ತು ಭಾಷೆಗಳನ್ನೂ ಕಲಿತು, ದೊಡ್ಡವರಾದಮೇಲೆ ಊರಿಗೆ ಹಿಂತಿರುಗಿ ಕೆಲಸಮಾಡಲು ಶುರುಮಾಡಿದ್ದರಂತೆ. ನಮ್ಮ ಅಜ್ಜಿ, ಮಗಳ ಮದುವೆ ಮಾಡಿ ಅವರೊಡನೆ ಇದ್ದು, ಅಣ್ಣ ಬಂದಮೇಲೆ ಅವರಲ್ಲಿಗೆ ಬಂದು ಅವರಿಗೆ ಮದುವೆ ಮಾಡಿದರಂತೆ.

ಶಾನುಭೋಗರ ಕೆಲಸದಲ್ಲಿ ಮನೆ ಭರ್ತಿ ಕಾಗದ ಪತ್ರಗಳು, ಯಾವಾಗಲೂ ಬರವಣಿಗೆ, ರೈತರು ಯಾವಾಗಲೂ ನಮ್ಮ ಮನೆಗೆ ಬಂದಿರುತ್ತಿದ್ದರು. ಹೀಗೇ, ಹೊರಗೆ ಅಂಗಳದಲ್ಲಿ ಅವರೊಡನೆ ಏನೋ ಕಾರ್ಯದಲ್ಲಿ ತೊಡಗಿದಾಗ, ನಾವ್ಯಾರಾದರೂ ಅಡಿಗೆಮನೆಯಲ್ಲಿ “ಸ್ಟೀಲ್ ತಟ್ಟೆ, ಲೋಟ” ಬೀಳಿಸಿ ಜೋರಾಗಿ ಶಬ್ಧ ಮಾಡಿದಾಗ ಅಣ್ಣ ನಮಗಿಂತಲೂ ಜೋರಾಗಿ ಕೂಗಿ “ಏನ್ರೋ ಅದು “ಅನಾಹುತ” ಅಂತ ಕೇಳುತ್ತಿದ್ದರು. ನಾವೆಲ್ಲ ಸಣ್ಣವರು, ನಮ್ಮ ಅಮ್ಮನ್ನ “ಅನಾಹುತ” ಅಂದ್ರೆ ಏನು? ಅಂತ ಕೇಳಿದಾಗ, ನಮ್ಮ ಅಣ್ಣ ನಮಗಿಂತ ಸ್ವಲ್ಪ ದೊಡ್ಡವನು ಎಲ್ಲ ಚೆನ್ನಾಗಿ ಅರ್ಥವಾದವನಂತೆ “ಅನಾಹುತ” ಅಂದ್ರೆ, ತಟ್ಟೆ, ಲೋಟ ಎಲ್ಲ ಬೀಳಿಸೋದು ಅಂತ ಹೇಳಿ ನಮ್ಮಮ್ಮನ ಹತ್ರ ಬೈಸಿಕೊಂಡಿದ್ದ “ಅನಾಹುತ ಅನ್ನೋ ಪದಕ್ಕೇ ಅನಾಹುತ ಮಾಡ್ಬಿಟ್ಯಲ್ಲೋ ” ಅಂತ. ಹೀಗೆ ತಮಾಷೆ ಜೊತೆಗೆ ಪದಗಳ ಅರ್ಥ ತಿಳೀತಿದ್ವಿ. ಅಣ್ಣ ಊಟದ ಜೊತೆಗೆ ಬೆಳ್ಳುಳ್ಳಿ ಆರೋಗ್ಯ ಅಂತ ತಿನ್ನುತ್ತಿದ್ದರು. ಬೇರೆಯವರಿಗೆ ಇಷ್ಟ ಇಲ್ಲ ಅಂತ ನಮ್ಮಮ್ಮ ಅಡಿಗೆಗೆ ಹಾಕ್ತಾ ಇರಲಿಲ್ಲ. ಹೀಗೇ ಒಂದು ಸಲ ನಮ್ಮತಂದೆ ಊಟಕ್ಕೆ ಕುಳಿತುಕೊಳ್ಳುವ ಮೊದಲು ಕೈ ತೊಳೆಯುತ್ತಾ ಅಲ್ಲೇ ಇದ್ದ ನಮ್ಮಣ್ಣನಿಗೆ ಹೇಳಿದ್ರು “ಗಾರ್ಲಿಕ್ ತಗೊಂಡ್ಬಾ” ಅಂತ. ಯಾವಾಗಲೂ ಬೆಳ್ಳುಳ್ಳಿ ಅಂತನೇ ಹೇಳ್ತಾ ಇದ್ದರು, ಅದ್ಯಾಕೋ ಅವತ್ತು “ಗಾರ್ಲಿಕ್” ಅಂದ್ರು. ಅಣ್ಣನಿಗೆ ಗಾರ್ಲಿಕ್ ಅಂದ್ರೆ ಏನು ಅಂತ ಗೊತ್ತಿರಲಿಲ್ಲ (ಅನಾಹುತ ಅಂದ್ರೆ ಏನು ಅಂತ ಅರ್ಥಮಾಡಿಕೊಂಡಷ್ಟು ಸುಲಭವಾಗಿರಲಿಲ್ಲ), ಹಾಗೇ ಸ್ವಲ್ಪ ಕಾಮನ್ಸೆನ್ಸ್ ಉಪಯೋಗಿಸಿದ. ಹೇಗಿದ್ರೂ ಕೈ ತೊಳೆದುಕೊಳ್ಳುತ್ತಿದ್ದರು, ಅಮ್ಮ ಊಟಕ್ಕೆ ತಟ್ಟೆ ಇಟ್ಟಿದ್ದರು, ಈಗನೋಡಿ ತಮಾಷೆನಾ…….ಅಣ್ಣ ಒಂದು ಟವಲ್ ತಂದು ನಮ್ಮ ತಂದೆಗೆ ಕೊಡುತ್ತಾ “ಟವಲ್ಲಾ” ಅಂದ. ನಮಗೂ ಗಾರ್ಲಿಕ್ ಅಂದ್ರೆ ಗೊತ್ತಿರಲಿಲ್ಲ, ಆದ್ರೂ ನಗು ಚೆನ್ನಾಗಿ ಬರುತಿತ್ತು. ನಮ್ತಂದೆ ಟವಲ್ ನೋಡಿ “ಏ ಗಾರ್ಲಿಕ್ ತಗೊಂಡ್ಬಾರೋ ಅಂದ್ರೇ ಟವಲ್ ತಂದಿದ್ದಾನೆ, ಪೆದ್ ಮುಂಡೇದೆ. ನಿಮ್ಮ ಅಮ್ಮನ ಮುಖ ಏನ್ ನೋಡ್ತೀಯಾ? ಈ ಸಲ “ಗಾರ್ಲಿಕ್ ತಗೊಂಡ್ಬಾ” ಅಂದ್ರು ಜೋರಾಗಿ. ಅಮ್ಮನ ಮುಖಬೇರೆ ನೋಡ್ಬೇಡಾ ಅಂತ ಹೇಳಿದ್ರು, ಈಗ ಏನ್ ಮಾಡೋದು ಅಂತ ಯೋಚಿಸಿ, “ಚಾಪೆ” ತಂದು ಊಟದ ತಟ್ಟೆ ಹಿಂದಿಟ್ಟ. ಈಗ ನಮ್ತಂದೆಗೆ ಒಂದ್ಕಡೆ ನಗು, ಮತ್ತೊಂದ್ ಕಡೆ ಸಿಟ್ಟು ಬಂತು. ಈಗಲೂ ಬೆಳ್ಳುಳ್ಳಿ ಅಂತ ಹೇಳಲಿಲ್ಲ, ಮತ್ತೆ ಗಾರ್ಲಿಕ್ ಅಂದ್ರು. ನಮ್ಮಮ್ಮ ,ಇವನು ಮತ್ತೆ ಇನ್ನೇನೋ ತರ್ತಾನೆ ಅಂತ ನೀರು ತರುತ್ತಾ “ಅಲ್ಲಿ ಬೆಳ್ಳುಳ್ಳಿ” ಇದೆಯಲ್ಲಾ ಅದರಲ್ಲೊಂದ್ ಬೆಳ್ಳುಳ್ಳಿ ತಗೊಂಡ್ಬಾ ಅಂತ ನಮ್ಮ ಅಣ್ಣನಿಗೆ ಹೇಳಿದ್ರು. ಅಲ್ಲೇ ಇದ್ದ ನಾವೆಲ್ಲಾ ಕೈಯಲ್ಲಿ ಒಂದೊಂದು ಬೆಳ್ಳುಳ್ಳಿ ಹಿಡಿದ್ಕೊಂಡ್ ಬಂದು ನಮ್ಮ ತಂದೆಗೆ ಕೊಟ್ಟು, ಅಣ್ಣನಿಗೆ ಬೈಸಿದ್ವಿ “ನಿನಗಿಂತ ಸಣ್ಣವರಿಗೇ ಗೊತ್ತು ಗಾರ್ಲಿಕ್ ಅಂದ್ರೆ ಬೆಳ್ಳುಳ್ಳಿ” ಅಂತ ಅಂದ್ರು. ಹೀಗೆ, ಅಣ್ಣ ನಮಗೆ ಕನ್ನಡ, ಇಂಗ್ಲೀಷ್ ಎಲ್ಲ ಒಟ್ಟಿಗೇ ಕಲಿಸುತ್ತಿದ್ದರು.

ಅಮ್ಮ- ಅಣ್ಣನ ಮದುವೆಯಾಗಿ ಹೊಸದಂತೆ, ಮನೆಯ ಎದುರಿನಲ್ಲಿ ಕೇಶವ ದೇವರ ದೇವಸ್ತಾನ, ಅದರ ಪಕ್ಕ ಅರ್ಚಕರ ಮನೆ, ಅರ್ಚಕರಿಗೆ ಎಲ್ಲರೂ “ಭಟ್ಟರು” ಅಂತ ಕರೆಯುವುದು. ಅವರ ಮಕ್ಕಳೆಲ್ಲ ನಮ್ಮ ಮನೆಗೆ ತುಂಬಾ ಬಂದು ಆಟವಾಡಿಕೊಳ್ಳುತ್ತಿದ್ದರು. ಅಣ್ಣ ಅವರ ಗಂಡು ಮಕ್ಕಳಿಗೆ (ತುಂಬಾ ಬಾಳೆ ಹಣ್ಣು ತಿನ್ನುತ್ತಿದ್ದರಿಂದ) ಪುಟ್ಟಬಾಳೆ, ರಸಬಾಳೆ, ಏಲಕ್ಕಿಬಾಳೆ ಅಂತ ಹೆಸರಿಟ್ಟಿದ್ದರು. ಅಮ್ಮನಿಗೆ ಆ ವಿಷಯ ಸರಿಯಾಗಿ ಗೊತ್ತಿತ್ತು, “ರಸಬಾಳೆ” ಬಂದ, ತಿಂಡಿಕೊಡು ಅಂದರೆ ಯಾರ್ ಬಂದಿದಾರೆ ಅಮ್ಮನಿಗೆ ಗೊತ್ತಾಗುತಿತ್ತು. ಆದರೆ, ಅಣ್ಣ ಒಂದು ದಿನ ಪಾರ್ವತಿ, “ಬಟ್ಸನ್ ಬಂದಿದಾನೆ” ಏನಾದ್ರೂ ತಿನ್ನಕ್ಕೆ ಕೊಡು ಅಂದ್ರಂತೆ. ಅಮ್ಮ “ಯಾರು ಬಟ್ಸನ್” ಅಂದ್ರೆ ? ನಾನ್ಯಾವತ್ತೂ ನೋಡೇ ಇಲ್ಲ, ಎಷ್ಟು ವರುಷಾ? ಏನೋ ಕಿರಿಸ್ತಾನರ ಹೆಸರಿದ್ದ ಹಾಗೆ ಇದೆ ಅಂದ್ಕೊಂಡು ಅಡಿಗೆಮನೆಯಿಂದ ವರಾಂಡಕ್ಕೆ ಬಂದ್ ನೋಡಿದ್ರೇ, “ರಸಬಾಳೆ” ನಮ್ಮತಂದೆ ತೊಡೆಮೇಲೆ ಕೂತಿತ್ತಂತೆ. ಅಣ್ಣನ ಲಾಜಿಕ್ ನಲ್ಲಿ “ಭಟ್ಟರ ಮಗ” = ಬಟ್ಸನ್ ಆಗಿದ್ದು ಅಮ್ಮನಿಗೆ ಊಹಿಸಲೂ ಸಾಧ್ಯವಾಗಿರಲಿಲ್ಲ.

ಅಣ್ಣನ ದಿನನಿತ್ಯದ ತಮಾಷೆಗೆ ಮಿತಿಯೇ ಇರಲಿಲ್ಲ. ಅಣ್ಣ ಮತ್ತು ಭಟ್ಟರು ತುಂಬಾ ಸ್ನೇಹಿತರು. ಪ್ರತಿದಿನಾ ಸಂಜೆ ಸ್ವಲ್ಪ ಹೊತ್ತು ನಮ್ಮ ಮನೆಯ ಮುಂದೆ ಕುಳಿತು, ಹೋಗೋರ್-ಬರೋರ್ನೆಲ್ಲ ಮಾತಾಡಿಸಿಕೊಂಡು ಹರಟೆ ಹೋಡೀದಿದ್ರೆ, ಇಬ್ರಿಗೂ ನಿದ್ದೇ ಬರುತ್ತಿರಲಿಲ್ಲ. ತುಂಬಾ ಸ್ನೇಹವಿದ್ದಿದ್ದರಿಂದ ಸಲಿಗೆಯು ಅಷ್ಟೇ ಇತ್ತು. ಒಬ್ಬರನ್ನೊಬ್ಬರು ಚೆನ್ನಾಗಿ ಆಡಿಕೊಂಡು ನಗುತ್ತಿದ್ದರು. ಭಟ್ಟರು ಒಂದುಸಲ ಏನೋ ಮಾತಾಡುತ್ತಾ, “ನಿಮಗಷ್ಟು ಮಡಿ, ಮೈಲಿಗೆ ಇಲ್ಲ” ಅಂದರು. ಅಣ್ಣನಿಗೆ ಮಾತಾಡಕ್ಕೆ ಹೇಳ್ಕೊಡಬೇಕಾ? ” ನೀವೇನ್ ಸಾಚ ಬಿಡಿ ಭಟ್ರೇ, “ಕಂಬವೇ ತಣ್ಣಿ” ಅಂತ ತೀರ್ಥ ಕುಡಿದು, ಎಂಜಲು ಕೈನ ಅಲ್ಲೇ ಕಂಬಕ್ಕೆ ಒರಸಿಬಿಡ್ತೀರಲ್ಲ” ಅಂತ ಹೇಳಿ ಇಬ್ಬರೂ ಜೋರಾಗಿ ನಗೋಕ್ಕೆ ಶುರುಮಾಡಿಬಿಡುತ್ತಿದ್ದರು. ನಗೋಕೆ ದಿನಾ ವಿಷಯಗಳು ಇರುತ್ತಿದ್ದವು. ನಾವೆಲ್ಲಾ ಮನೆಯಿಂದ ಹೊರಗೆ ಹೊಗಿ, ಬಂದು ಮಾಡೋವಾಗ ಇವೆಲ್ಲಾ ಕಿವಿಗೆ ಬೀಳುತ್ತಿತ್ತು ( ಅದರಿಂದ ಮೇಲಿನ ಕೊಟೇಶನ್ ಅಲ್ಲಿ ಪದಗಳು ತಪ್ಪಿರಲೂ ಬಹುದು).

 

Posted in ಪ್ರಭಂದ ! | ನಿಮ್ಮ ಟಿಪ್ಪಣಿ ಬರೆಯಿರಿ